ಸೋಮವಾರ, ಮಾರ್ಚ್ 27, 2023
24 °C

2002 ಗೋಧ್ರಾ ಹತ್ಯಾಕಾಂಡ: ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ ನಾನಾವತಿ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾವತಿ ಸಮಿತಿಯು ನರೇಂದ್ರ ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ.

ಗೋಧ್ರಾ ಗಲಭೆಯಲ್ಲಿ ಮೋದಿ ಸರ್ಕಾರದ ಪಾತ್ರವಿಲ್ಲ, ಜನರನ್ನು ನಿಯಂತ್ರಿಸುವಲ್ಲಿ ವಿಫಲರಾದ ಮತ್ತು ಅಗತ್ಯ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯದ ಯಾವೊಬ್ಬ ಸಚಿವರು ಕೂಡ ಗಲಭೆಗೆ ಪ್ರೇರಣೆ ಅಥವಾ ಪ್ರಚೋದನೆ ನೀಡಿದ್ದಾರೆ ಎನ್ನುವ ಕುರಿತು ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಪೊಲೀಸರ ಸಂಖ್ಯೆ ಕಡಿಮೆ ಇದ್ದುದ್ದರಿಂದ ಮತ್ತು ಅವರು ಶಸ್ತ್ರಸಜ್ಜಿತರಾಗಿಲ್ಲದ ಕಾರಣದಿಂದಾಗಿ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದರು ಎಂದು ಒಂಬತ್ತು ಸಂಚಿಕೆಯ ಸುಮಾರು 1,500 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ತನಿಖೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. 

2002ರ ಗೋಧ್ರಾ ಗಲಭೆಯಲ್ಲಿ ಸುಮಾರು 1000ಕ್ಕೂ ಅಧಿಕ ಜನರು ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಮತ್ತು ಅಕ್ಷಯ್ ಮೆಹ್ತಾ ಅವರ ಸಮಿತಿಯು 2014ರಲ್ಲಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿತ್ತು. 

27 ಫೆಬ್ರುವರಿ 2002ರಂದು ರೈಲಿಗೆ ಬೆಂಕಿ ಹಚ್ಚಿದ್ದರಿಂದ 59 ಮಂದಿ ಕರಸೇವಕರು ಸಜೀವ ದಹನವಾಗಿದ್ದರು. ಇದು ಗುಜರಾತ್ ಇತಿಹಾಸದಲ್ಲಿ ಭೀಕರ ಕೋಮುಗಲಭೆಗೆ ಕಾರಣವಾಗಿತ್ತು. ಬಳಿಕ ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾವಿರ ಮಂದಿ ಬಲಿಯಾಗಿದ್ದರು. ಈ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು