ಮಂಗಳವಾರ, ಮೇ 18, 2021
22 °C
ಕಾರಂತ ಬಡಾವಣೆ ಭೂಸ್ವಾಧೀನ ಅಕ್ರಮದ ತನಿಖೆ

ದಾಖಲೆ ಸಲ್ಲಿಸದ್ದಕ್ಕೆ ‘ಸುಪ್ರೀಂ’ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನ ಡಾ.ಕೆ.ಶಿವರಾಮ ಕಾರಂತ ಬಡಾವಣೆಗಾಗಿನ ಭೂಸ್ವಾಧೀನದಲ್ಲಿ ನಡೆದಿರುವ ಅಕ್ರಮದ ತನಿಖೆಗೆ ನೇಮಿಸಲಾದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರಿಗೆ ಅಗತ್ಯ ದಾಖಲೆ ಸಲ್ಲಿಸದಿರುವ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಬಡಾವಣೆಗಾಗಿ ವಶಪಡಿಸಿಕೊಂಡ ಭೂಮಿಯಲ್ಲಿನ ನೂರಾರು ಎಕರೆ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಟ್ಟಿರುವ ಕುರಿತು ತನಿಖಾಧಿಕಾರಿಗೆ ಸಮರ್ಪಕ ದಾಖಲೆ ಸಲ್ಲಿಸದಿರುವುದು ಏಕೆ’ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಹಾಗೂ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ಪೀಠ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

‘ಎಲ್ಲ ದಾಖಲೆ ಸಲ್ಲಿಸುವಂತೆ ಸೂಚಿಸಲಾದ ನಮ್ಮ ಆದೇಶ ಪಾಲಿಸಿದ್ದೀರಾ, ಈ ಕುರಿತು ವರದಿ ಸಲ್ಲಿಸಿ. ಇಲ್ಲದಿದ್ದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನೇ ನ್ಯಾಯಾಲಯಕ್ಕೆ ಕರೆಯಬೇಕಾಗುತ್ತದೆ’ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಆದೇಶ ಪಾಲಿಸಿರುವ ಕುರಿತು ವರದಿ ನೀಡುವಂತೆ ಎರಡು ವಾರಗಳ ಗಡುವು ವಿಧಿಸಿತು.

‘ಬಡಾವಣೆಗೆ ಸ್ವಾಧೀನಪಡಿಸಿಕೊಂಡ ಪ್ರದೇಶದಲ್ಲಿನ ಭೂಮಿಯನ್ನು ಗುತ್ತಿಗೆ ಪಡೆದು ಆರಂಭಿಸಲಾದ ಶಾಲೆಗೆ ತನಿಖೆಯ ಆದೇಶದಿಂದ ಸಮಸ್ಯೆ ಎದುರಾಗಲಿದೆ’ ಎಂದು ತಿಳಿಸಿ ಮೇಲ್ಮನವಿ ಸಲ್ಲಿಸಿರುವ ಟ್ರಸ್ಟ್‌ಗೂ ಯಾವುದೇ ರೀತಿಯ ಪರಿಹಾರ ಸೂಚಿಸಲು ಪೀಠ ನಿರಾಕರಿಸಿತು.

ಮೂರು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾದ ಆದೇಶದ ಮರು ಪರಿಶೀಲನೆ ಕೋರಿ ರಾಜ್ಯ ಸರ್ಕಾರ ಹಾಗೂ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಪೀಠವು ಕಳೆದ ಮೇ 2ರಂದು ವಜಾಗೊಳಿಸಿತ್ತು.

2009–10ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ಶಿವರಾಮ ಕಾರಂತ ಬಡಾವಣೆಗಾಗಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದ ಒಟ್ಟು 3,546 ಎಕರೆ ಭೂಮಿಯಲ್ಲಿ 257 ಎಕರೆಯನ್ನು ಕೈಬಿಡುವ ಮೂಲಕ ಭೂಮಾಲೀಕರಿಗೆ ಅನುಕೂಲ ಕಲ್ಪಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರೋಪಿಸಿತ್ತು.

ಯಡಿಯೂರಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತನಿಖೆಗೆ ತಡೆ ನೀಡಿ 2017ರ ಸೆಪ್ಟೆಂಬರ್‌ 22ರಂದು ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಎಸಿಬಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ನಿರ್ದೇಶನ ನೀಡಿತ್ತು.

ಅಲ್ಲದೆ, ಭೂಸ್ವಾಧೀನದ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್‌. ಕೇಶವನಾರಾಯಣ ಅವರನ್ನು ನೇಮಕ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು