ಬುಧವಾರ, ಮಾರ್ಚ್ 3, 2021
28 °C

ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ರೇಲಾ ಕೈಗುಣ ಹೇಗಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಕೃತ್ ನಾಳದ ಸೋಂಕಿನಿಂದ ಬಳಲುತ್ತಿರುವ ತುಮಕೂರಿನ ಸಿದ್ಧಗಂಗಾ ಸ್ವಾಮೀಜಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ರೇಲಾ ಇನ್ಸಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ ಡಾ. ಮೊಹ್ಮದ್ ರೇಲಾ ವಿಶ್ವವಿಖ್ಯಾತ ವೈದ್ಯರಲ್ಲಿ ಒಬ್ಬರು.

1997ರಲ್ಲಿ ಲಂಡನ್‌ನಲ್ಲಿ ಐದು ವರ್ಷದ ಮಗುವಿಗೆ ಯಕೃತ್‌ ಕಸಿ ಮಾಡುವ ರೇಲಾ ಅವರು ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಹೆಪ್ಟಲಾಜಿಯಲ್ಲಿ ವಿಶ್ವದಲ್ಲಿಯೇ ಉನ್ನತ ಪರಿಣಿತಿ ಹೊಂದಿರುವ ವೈದ್ಯರಲ್ಲಿ ರೇಲಾ ಕೂಡ ಒಬ್ಬರು. 

ತಮಿಳುನಾಡಿನ ಮೈಲಾಡುತುರೈ ಬಳಿಯ ಕಿಲಿಯನೂರು ಗ್ರಾಮದಲ್ಲಿ ಜನಿಸಿದ ಇವರು 1980ರಲ್ಲಿ ಚೆನ್ನೈನ ಸ್ಟ್ಯಾನ್‌ಲಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಮತ್ತು ಎಂ.ಎಸ್‌ ಪದವಿ ಪಡೆದರು. ಮತ್ತೊಂದು ಎಂ.ಎಸ್‌ ಪದವಿಗಾಗಿ ಲಂಡನ್‌ಗೆ ತೆರೆಳಿದರು. ಯಕೃತ್‌ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತರಾದ ಮೊಹಮ್ಮದ್‌ ರೇಲಾ ಇದುವರೆಗೂ 1600ಕ್ಕೂ ಹೆಚ್ಚು ಯಕೃತ್‌ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.  

2003ರ ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ನಾಲ್ಕುವರೆ ವರ್ಷದ ಮಗುವಿಗೆ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಅಪರೂಪದ ಯಕೃತ್‌ ಸಮಸ್ಯೆ ಹೊಂದಿದ್ದ 8 ತಿಂಗಳ ಮಗುವಿಗೆ ಕಸಿ ಮಾಡಿದ್ದಾರೆ. ಹಸುಗೂಸುಗಳಿಗೆ ಯಕೃತ್‌ ಕಸಿ ಮಾಡುವುದರಲ್ಲಿ ಇವರು ಸಿದ್ಧಹಸ್ತರು. 

ಮೂತ್ರಪಿಂಡದ ವೈಫಲ್ಯ ಹಾಗೂ ಯಕೃತ್ತಿನ ತೀವ್ರ ತೊಂದರೆಯಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರಿಗೂ ರೇಲಾ ನೇತೃತ್ವದ ತಂಡ ಚಿಕಿತ್ಸೆ ನೀಡಿತ್ತು.  ಸಾಕಷ್ಟು ಮೊದಲುಗಳಿಗೂ ಇವರು ಕಾರಣರಾಗಿದ್ದಾರೆ. ಜೊತೆಗೆ ಸಂಕೀರ್ಣವಾದ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಂಗಾಂಗ ದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ.

 

ರೇಲಾ ಅವರು ಬೆಂಗಳೂರಿನಲ್ಲಿ ಈ ಹಿಂದೆಯೂ ಶ್ರೀಗಳಿಗೆ ಅನೇಕ ಬಾರಿ ಚಿಕಿತ್ಸೆ ನೀಡಿದ್ದಾರೆ. ಹಾಗಾಗಿ ಈ ಬಾರಿಯೂ ಅವರ ಆರೋಗ್ಯದ ಜವಾಬ್ದಾರಿಯನ್ನು ಅವರಿಗೆ ಹೊರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು