ಶುಕ್ರವಾರ, ಏಪ್ರಿಲ್ 23, 2021
22 °C

ಮೈತ್ರಿ ಸರ್ಕಾರದ ಬಿಕ್ಕಟ್ಟು | ರಾಹುಲ್‌ ಅನುಪಸ್ಥಿತಿ, ಸೋನಿಯಾ ಅಖಾಡಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಮೈತ್ರಿ ಸರ್ಕಾರವನ್ನು ಬಿಕ್ಕಟ್ಟಿನಿಂದ ರಕ್ಷಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಸರ್ಕಾರ ಉಳಿಸುವ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರು ತಾವು ಹಿಂದೆ ಪ್ರತಿನಿಧಿಸಿದ್ದ ಲೋಕಸಭಾ ಕ್ಷೇತ್ರ ಅಮೇಠಿ ಭೇಟಿಯಲ್ಲಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿನ ಕಾರಣ ಹುಡುಕುವುದು ಅವರ ಭೇಟಿಯ ಉದ್ದೇಶ. ಅವರ ಅನುಪಸ್ಥಿತಿಯಲ್ಲಿ ಸೋನಿಯಾ ಅವರೇ ಪಕ್ಷದ ಹಿರಿಯ ಮುಖಂಡರ ಜತೆಗೆ ಸಭೆ ನಡೆಸುತ್ತಿದ್ದಾರೆ.

ಸೋನಿಯಾ ಅವರು ತಮ್ಮ ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ಹೋಗಬೇಕಿತ್ತು. ಆದರೆ, ಕರ್ನಾಟಕದ ಬಿಕ್ಕಟ್ಟಿನ ಕಾರಣದಿಂದ ಅವರು ತಮ್ಮ ಪ್ರವಾಸವನ್ನು ಮುಂದೂಡಿದ್ದಾರೆ. ಕೆಲವು ದಿನಗಳಿಂದ ಅವರೇ ಕರ್ನಾಟಕ ಕಾಂಗ್ರೆಸ್‌ ಘಟಕದ ಮುಖಂಡರಿಗೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌ ಮತ್ತು ಬಿ.ಕೆ. ಹರಿಪ್ರಸಾದ್‌ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈ ಇಬ್ಬರೂ ಮಂಗಳವಾರವೇ ಬೆಂಗಳೂರಿಗೆ ಧಾವಿಸಿ ಅಲ್ಲಿ ಬೀಡು ಬಿಟ್ಟಿದ್ದಾರೆ. 

ಕರ್ನಾಟಕ ಸರ್ಕಾರದ ಬಿಕ್ಕಟ್ಟಿಗೆ ಸ್ಥಳೀಯ ಸಮಸ್ಯೆಗಳೇ ಕಾರಣ. ಹಾಗಾಗಿ ಇದನ್ನು ಸ್ಥಳೀಯವಾಗಿಯೇ ಪರಿಹರಿಸಬೇಕು ಎಂಬ ಕಾರಣದಿಂದ ಗುಲಾಂ ನಬಿ ಆಜಾದ್‌ ಅವರನ್ನು ಸೋನಿಯಾ ಕಳುಹಿಸಿದ್ದಾರೆ. ಇವರು ಹಿಂದೆ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದರು. ಹಾಗಾಗಿ ಅವರಿಗೆ ರಾಜ್ಯ ರಾಜಕಾರಣದ ಒಳಸುಳಿಗಳು ಗೊತ್ತು ಎಂದು ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆಯೇ ರಾಜ್ಯದ ಹಲವು ಮುಖಂಡರು ಕೂಡ ಮಧ್ಯಪ್ರವೇಶಿಸುವಂತೆ ಸೋನಿಯಾ ಅವರನ್ನು ಕೋರಿದ್ದಾರೆ ಎನ್ನಲಾಗಿದೆ.

ಸಂಸತ್ತಿನ ಎರಡೂ ಸದನಗಳಲ್ಲಿ ಕರ್ನಾಟಕದ ವಿಚಾರ ಎತ್ತುವಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ನಾಯಕರಿಗೆ ಸೋನಿಯಾ ಅವರು ತಿಳಿಸಿದ್ದಾರೆ. 

ಈ ಸಮಸ್ಯೆ ಉಲ್ಬಣವಾಗುವಂತೆ ರಾಜ್ಯ ಕಾಂಗ್ರೆಸ್‌ ಘಟಕವು ಉದ್ದೇಶಪೂರ್ವಕವಾಗಿ ನೋಡಿಕೊಂಡಿದೆ ಎಂಬ ಭಾವನೆಯೂ ಕೆಲವು ಮುಖಂಡರಲ್ಲಿ ಇದೆ. ಪಕ್ಷ ನಿಷ್ಠ ಹಿರಿಯ ಸಚಿವರನ್ನು ಕೈಬಿಟ್ಟು ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದರು. ಆದರೆ, ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇಬ್ಬರು ಪಕ್ಷೇತರರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಸೂಚಿಸಿದ್ದರು. 

ಸಂ‍ಪುಟ ಪುನರ್‌ರಚನೆಗೆ ಕುಮಾರಸ್ವಾಮಿಗೆ ಒಪ್ಪಿಗೆ ಸಿಕ್ಕಿದ್ದರೆ ಈಗಿನ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲಿಲ್ಲ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು