ಭಾನುವಾರ, ಸೆಪ್ಟೆಂಬರ್ 27, 2020
24 °C
ಸಂದೀಪ್ ತಾಮ್‌ಗಡೆಯಿಂದ ನ್ಯಾಯಾಲಯಕ್ಕೆ ಹೇಳಿಕೆ

ಪ್ರಜಾಪತಿ ಎನ್‌ಕೌಂಟರ್: ಅಮಿತ್ ಶಾ ಪ್ರಮುಖ ಸಂಚುಕೋರ ಎಂದ ತನಿಖಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ತುಳಸಿರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಮುಖ ಸಂಚುಕೋರರಾಗಿದ್ದರು ಎಂದು ಮುಖ್ಯ ತನಿಖಾಧಿಕಾರಿಯಾಗಿದ್ದ ಸಂದೀಪ್ ತಾಮ್‌ಗಡೆ ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಮಿತ್ ಶಾ, ಐಪಿಎಸ್‌ ಅಧಿಕಾರಿಗಳಾದ ಡಿ.ಜಿ. ವಂಜರಾ, ದಿನೇಶ್ ಎಂ.ಎನ್. ಮತ್ತು ರಾಜಕುಮಾರ್ ಪಾಂಡಿಯನ್ ಪ್ರಮುಖ ಸಂಚುಕೋರರು. ಪ್ರಕರಣದ ‘ಅಪರಾಧಿ–ರಾಜಕಾರಣಿಗಳು–ಪೊಲೀಸ್ ಜಾಲದ’ ಭಾಗವಾಗಿದ್ದರು ಅಮಿತ್ ಶಾ ಎಂದು ಸಂದೀಪ್ ಹೇಳಿರುವುದಾಗಿ ದಿ ವೈರ್ ಸುದ್ದಿತಾಣ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿ 2012ರಲ್ಲಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿಯೂ, ಅಮಿತ್ ಶಾ ಮತ್ತು ಗುಲಾಬ್‌ಚಂದ್ ಕಟಾರಿಯಾ (ರಾಜಸ್ಥಾನದ ಈಗಿನ ಗೃಹ ಸಚಿವ) ಎನ್‌ಕೌಂಟರ್‌ಗೆ ಸಂಚು ಹೂಡಿದ್ದ ಜಾಲದಲ್ಲಿದ್ದ ರಾಜಕಾರಣಿಗಳು ಎಂದು ಸಂದೀಪ್ ಉಲ್ಲೇಖಿಸಿದ್ದರು. ಸೊಹ್ರಾಬುದ್ದೀನ್, ಪ್ರಜಾಪತಿಗೆ ಆಜಂ ಖಾನ್ ಮತ್ತು ಇತರ ಪ್ರಮುಖ ಕ್ರಿಮಿನಲ್‌ಗಳ ಜತೆ ಇದ್ದ ನಿಟಕ ಸಂಪರ್ಕದ ಬಗ್ಗೆಯೂ ಉಲ್ಲೇಖಿಸಿದ್ದರು.

ಪೊಲೀಸರು ಮತ್ತು ರಾಜಕಾರಣಿಗಳ ಅವಗಾಹನೆಯೊಂದಿಗೇ ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಸುಲಿಗೆ ದಂಧೆಯಲ್ಲಿ ತೊಡಗಿದ್ದರು. ಇತರ ಆರೋಪಿಗಳ ವಿರುದ್ಧವಾಗಿ ಕಾರ್ಯಾಚರಿಸಲು ಸೊಹ್ರಾಬುದ್ದೀನ್ ನಿಶ್ಚಿಯಿಸಿದಾಗ ಅವರ ಹತ್ಯೆಗೆ 2005ರ ನವೆಂಬರ್‌ 23ರಂದು ಸಂಚು ರೂಪಿಸಲಾಗಿತ್ತು ಎಂಬುದು ಸಿಬಿಐ ವಾದವಾಗಿದೆ.

ಸಾಕ್ಷಿಗಳು ಆರೋಪಿಗಳಿಗೆ ಪ್ರತಿಕೂಲವಾಗಿ ಪರಿಣಮಿಸುತ್ತಿರುವ ಈ ಸಂದರ್ಭದಲ್ಲೇ ಸಂದೀಪ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ. ಇವರಿಗಿಂತ ಮೊದಲಿನ ತನಿಖಾಧಿಕಾರಿ, ಹಿರಿಯ ಐಪಿಎಸ್‌ ಅಧಿಕಾರಿ ಅಮಿತಾಭ್ ಠಾಕೂರ್ ಸಾಕ್ಷ್ಯಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಇದೇ 19ರಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಠಾಕೂರ್, ನಕಲಿ ಎನ್‌ಕೌಂಟರ್‌ಗಳಿಂದ ಶಾ ಮತ್ತು ಹಿರಿಯ ಐಪಿಎಸ್‌ ಅಧಿಕಾರಿಗಳು ಹಣಕಾಸು ಮತ್ತು ರಾಜಕೀಯ ಲಾಭ ಪಡೆದಿರುವುದನ್ನು ಸಾಬೀತುಪಡಿಸಲು ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದರು ಎಂದೂ ವರದಿ ಉಲ್ಲೇಖಿಸಿದೆ.

ಅಮಿತ್ ಶಾ, ಐಪಿಎಸ್‌ ಅಧಿಕಾರಿಗಳಾದ ಡಿ.ಜಿ. ವಂಜರಾ, ದಿನೇಶ್ ಎಂ.ಎನ್., ರಾಜಕುಮಾರ್ ಪಾಂಡಿಯನ್ ಸೇರಿ ಪ್ರಮುಖರನ್ನು ಈಗಾಗಲೇ ಆರೋಪದಿಂದ ದೋಷಮುಕ್ತಗೊಳಿಸಲಾಗಿದೆ. ಸದ್ಯ, 21 ಪೊಲೀಸರು ಹಾಗೂ ಹತ್ಯೆಗೂ ಮುನ್ನ ಕೌಸರ್‌ಬೀಯನ್ನು (ಸೊಹ್ರಾಬುದ್ದೀನ್ ಪತ್ನಿ) ಇರಿಸಲಾಗಿದ್ದ ಅತಿಥಿಗೃಹದ ಮಾಲೀಕ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಒಟ್ಟು 35 ಆರೋಪಿಗಳ ಪೈಕಿ ಈಗ ವಿಚಾರಣೆ ಎದುರಿಸುತ್ತಿರುವವರ ಸಂಖ್ಯೆ 22 ಮಾತ್ರ.

ಠಾಕೂರ್ ಅವರು ತನಿಖೆ ನಡೆಸುತ್ತಿದ್ದ ವೇಳೆ, ಪ್ರಕರಣದ ಆರೋಪಿಯಾಗಿ ಮೊದಲ ಬಾರಿಗೆ ಅಮಿತ್ ಶಾ ಹೆಸರು ಕೇಳಿ ಬಂದಾಗ ಅವರನ್ನು ಸಂದೀಪ್ ಬಂಧಿಸಿದ್ದರು. ಆದರೆ 2014ರ ಡಿಸೆಂಬರ್ 30ರಂದು ಶಾ ಅವರನ್ನು ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಧೀಶ ಎಂ.ಬಿ. ಲೋಕುರ್ ತೀರ್ಪು ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಬಿಐ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

2001ನೇ ಬ್ಯಾಚ್‌ನ ನಾಗಾಲ್ಯಾಂಡ್ ಕೇಡರ್‌ನ ಅಧಿಕಾರಿಯಾಗಿರುವ ಸಂದೀಪ್ ತಾಮ್‌ಗಡೆ ಪ್ರಜಾಪತಿ ನಕಲಿ ಎನ್‌ಕೌಂಟರ್‌ ಪ್ರಕರಣದ 210ನೇ ಸಾಕ್ಷಿಯೂ ಆಗಿದ್ದಾರೆ. ಇವರು ಸದ್ಯ ಕೊಹಿಮಾದಲ್ಲಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಆಫ್‌ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ 2015ರ ವರೆಗೆ ಸಿಬಿಐನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿಬಿಐನ ಸ್ಪೆಷಲ್ ಕ್ರೈಂ ಬ್ರ್ಯಾಂಚ್‌ನ ಮುಂಬೈ ವಿಭಾಗದಲ್ಲಿ ಎಸ್‌ಪಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು