ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದಲ್ಲಿ ಎನ್ಆರ್‌ಸಿಗೆ ಮುನ್ನ ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನ: ಅಮಿತ್ ಶಾ

Last Updated 1 ಅಕ್ಟೋಬರ್ 2019, 13:45 IST
ಅಕ್ಷರ ಗಾತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಅನುಷ್ಠಾನ ಮಾಡುವ ಮುನ್ನ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ದೇಶದೊಳಗಿರುವ ನುಸುಳುಕೋರರನ್ನು ಪತ್ತೆ ಹಚ್ಚುವುದಕ್ಕಾಗಿ ಎಲ್ಲ ರಾಜ್ಯಗಳಲ್ಲಿಯೂ ಎನ್‌ಆರ್‌ಸಿ ಅನುಷ್ಠಾನ ಮಾಡಲಾಗುವುದು ಎಂದಿದ್ದಾರೆ.

ಇಲ್ಲಿ ಎನ್‌ಆರ್‌ಸಿ ಬಗ್ಗೆ ಟಿಎಂಸಿ ಜನರಿಗೆ ತಪ್ಪಾದ ಮಾಹಿತಿ ನೀಡುತ್ತಿದೆ. ಹಿಂದೂ ನಿರಾಶ್ರಿತರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ನಿಮ್ಮನ್ನು ದೇಶದಿಂದ ಹೊರಗೆ ಹಾಕುವುದಿಲ್ಲ ಎಂಬ ಭರವಸೆಯನ್ನು ನಿರಾಶ್ರಿತರಿಗೆ ನೀಡುವುದಕ್ಕಾಗಿ ನಾನಿಲ್ಲಿಗೆ ಬಂದಿದ್ದೇನೆ.

ಇಲ್ಲಿರುವ ಹಿಂದೂ, ಸಿಖ್, ಜೈನ , ಬೌದ್ಧ ಮತ್ತು ಕ್ರೈಸ್ತ ನಿರಾಶ್ರಿತರನ್ನು ಕೇಂದ್ರ ಸರ್ಕಾರ ಬಲವಂತವಾಗಿ ಹೊರದಬ್ಬುವುದಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ವದಂತಿಗಳಿಗೆ ಕಿವಿಗೊಡಬೇಡಿ. ಎನ್‌ಆರ್‌ಸಿಗಿಂತ ಮೊದಲು ನಾವು ಇಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ತರುತ್ತೇವೆ. ಇದರಿಂದ ಈ ಜನರಿಗೆ ಭಾರತೀಯ ಪೌರತ್ವ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ.

ಬಂಗಾಳದಲ್ಲಿ ಎನ್‌ಆರ್‌ಸಿ ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ ಶಾ, ಬಂಗಾಳದಲ್ಲಿ ಎನ್‌ಆರ್‌ಸಿ ಬೇಡ ಎಂದು ದೀದಿಹೇಳುತ್ತಿದ್ದಾರೆ. ಆದರೆ ಪ್ರತಿಯೊಬ್ಬ ನುಸುಳುಕೋರನನ್ನು ಪತ್ತೆ ಹಚ್ಚಿ ನಾವು ಅವರನ್ನು ಹೊರಹಾಕುತ್ತೇವೆ. ಮಮತಾ ಬ್ಯಾನರ್ಜಿ ವಿಪಕ್ಷದಲ್ಲಿದ್ದಾಗ ನುಸುಳುಕೋರರನ್ನು ಹೊರಹಾಕಬೇಕೆಂದು ಒತ್ತಾಯಿಸಿದ್ದರು. ಈಗ ಅದೇ ನುಸುಳುಕೋರರು ಅವರ ವೋಟ್ಬ್ಯಾಂಕ್ ಆದಾಗ ಅವರನ್ನು ಹೊರಹಾಕಲು ದೀದಿ ಬಯಸುವುದಿಲ್ಲ.

2005 ಆಗಸ್ಟ್ 4ರಂದು ಮಮತಾ ದೀದಿ ಮಾಡಿದ ಭಾಷಣದಲ್ಲಿ ಅವರು ನುಸುಳುಕೋರರ ಬಗ್ಗೆ ಹೇಳಿದ್ದರು. ಆದರೆ ಅವರ ರಾಜಕೀಯ ಹಿತಾಸಕ್ತಿ ರಾಷ್ಟ್ರದ ಆದ್ಯತೆ ಮುಂದೆ ಗೆಲುವು ಸಾಧಿಸುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಕಳೆದ ತಿಂಗಳು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಮಮತಾ ಅದೇ ವಿಷಯದ ಬಗ್ಗೆ ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT