ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ 40 ವರ್ಷ| ಚುನಾವಣಾ ಅಖಾಡದ ಅಮಿತ್ ‘ಶಾ’

Last Updated 6 ಏಪ್ರಿಲ್ 2020, 6:54 IST
ಅಕ್ಷರ ಗಾತ್ರ

ಬಿಜೆಪಿಗೆ ಇಂದಿಗೆ (ಏ.6ಕ್ಕೆ) 40 ವರ್ಷ. ಅಮಿತ್‌ ಶಾ ಬಿಜೆಪಿಗೆ ಸಿಕ್ಕ ಅತ್ಯಂತ ಕ್ರಿಯಾಶೀಲ ಮತ್ತು ಚತುರ ಅಧ್ಯಕ್ಷ. ಅವರ ಕುರಿತು ಲೋಕಸಭೆ ಚುನಾವಣೆ ಗೆಲುವಿನ ನಂತರ ಪ್ರಕಟಿಸಿದ್ದ ವರದಿ ಇದು.

***

ಅಹಮದಾಬಾದ್‌: ಈ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಾಡಿದ ಪ್ರವಾಸ 1.58 ಲಕ್ಷ ಕಿ.ಮೀ. ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನವೇ 312 ಲೋಕಸಭಾ ಕ್ಷೇತ್ರಗಳಿಗೆ ಅವರು ಭೇಟಿ ಕೊಟ್ಟಿದ್ದರು. ಘೋಷಣೆಯಾದ ಬಳಿಕ 161 ಕ್ಷೇತ್ರಗಳಿಗೆ ಹೋಗಿದ್ದರು. ಈ ಪಯಣ ಈಗ ಫಲ ಕೊಟ್ಟಿದೆ.

‘ಚುನಾವಣಾ ಚಾಣಕ್ಯ’ ಎಂದೇ ಬಿಜೆಪಿಯ ವಲಯದಲ್ಲಿ ಗುರುತಿಸಿಕೊಂಡಿರುವ ಶಾ ತಮ್ಮ ಪಕ್ಷಕ್ಕೆ ಮತ್ತೊಂದು ಅದ್ಭುತ ಗೆಲುವು ತಂದುಕೊಟ್ಟಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಅತ್ಯಂತ ಪ್ರಭಾವಿ ವ್ಯಕ್ತಿ ಎಂಬ ಅವರ ಸ್ಥಾನ ಈಗ ಇನ್ನಷ್ಟು ಗಟ್ಟಿಯಾಗಿದೆ.

ಮೋದಿ ಅವರ ವರ್ಚಸ್ಸು ಮತ್ತು ಶಾ ಅವರ ಕಾರ್ಯತಂತ್ರ ಅಸಾಮಾನ್ಯ ಸಂಯೋಜನೆ ಎಂದು ಬಿಜೆಪಿಯ ಮುಖಂಡರೊಬ್ಬರು ಬಣ್ಣಿಸುತ್ತಾರೆ.

54 ವರ್ಷದ ಶಾ ಇತ್ತೀಚಿನ ವರ್ಷಗಳಲ್ಲಿ ತಿರುಗಿ ನೋಡಿದ್ದೇ ಇಲ್ಲ. ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಶಾ ಅವರನ್ನು ಸಿಬಿಐ 2010ರಲ್ಲಿ ಬಂಧಿಸಿತ್ತು. ಅಲ್ಲಿಗೆ ಅವರ ರಾಜಕೀಯ ಜೀವನ ಮುಗಿಯಿತು ಎಂದೇ ರಾಜಕೀಯ ವಿಶ್ಲೇಷಕರು ಷರಾ ಬರೆದಿದ್ದರು. ಬಹುಶಃ, ಇದು ಅವರ ಜೀವನದ ಗತಿಯನ್ನೇ ಬದಲಿಸಿತು. ಜಾಮೀನು ಷರತ್ತಿನಂತೆ ಅವರು ಗುಜರಾತಿನಿಂದ ಹೊರಗೆ ಇರಬೇಕಾಗಿತ್ತು. ದೆಹಲಿ ಸೇರಿಕೊಂಡ ಅವರು ಇದನ್ನೇ ಒಂದು ಅವಕಾಶವಾಗಿ ಬದಲಾಯಿಸಿಕೊಂಡರು.

‘ದೇಶದ ಎಲ್ಲಿಗಾದರೂ ಹೋಗಿ ಅವರು ಕೊರಗುತ್ತಾ ಕೂರ ಬಹುದಿತ್ತು. ಆದರೆ, ದೆಹಲಿಯನ್ನು ಆಯ್ಕೆ ಮಾಡಿಕೊಂಡ ಅವರು ತಮ್ಮ ಜಾಲವನ್ನು ಬೆಳೆಸುತ್ತಾ ಹೋದರು. ಪಕ್ಷದಲ್ಲಿ ಚಲಾವಣೆಯಲ್ಲಿ ಉಳಿದುಕೊಂಡರು’ ಎಂಬುದನ್ನು ಪಕ್ಷದ ಮುಖಂಡರು ನೆನಪಿಸಿಕೊಳ್ಳುತ್ತಾರೆ.

ವಾರ್ಡ್‌ ಮಟ್ಟದ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದವರು ಶಾ. ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಶಾ ಅವರು ಅದನ್ನೇ ಹೇಳಿದ್ದರು: ‘ವಾರ್ಡ್‌ ಮಟ್ಟದ ಕಾರ್ಯಕರ್ತ ಅಧ್ಯಕ್ಷನಾಗುವುದಕ್ಕೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ’. ಮೋದಿ ಅವರ ಉತ್ತರಾಧಿಕಾರಿ ಶಾ ಅವರೇ ಎಂಬ ಚರ್ಚೆಗೆ ಈ ಲೋಕಸಭಾ ಚುನಾವಣೆಯ ಫಲಿತಾಂಶವು ಚಾಲನೆ ಕೊಟ್ಟಿದೆ.

‘ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ 2001ರಲ್ಲಿ ಎಲ್ಲಿಸ್‌ಬ್ರಿಡ್ಜ್‌ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿಯ ಹಿರಿಯ ಮುಖಂಡ ಹರೇನ್‌ ಪಾಂಡ್ಯ ನಿರಾಕರಿಸಿದ್ದರು. ಆಗ, ಕಿರಿಯ ಶಾಸಕ ಅಮಿತ್‌ ಶಾ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾದರು. ಮೋದಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಆದರೆ, ಇದು ಇಬ್ಬರ ನಡುವೆ ಬಾಂಧವ್ಯ ಬೆಸೆಯಿತು. ಉಳಿದದ್ದೆಲ್ಲ ಈಗ ಇತಿಹಾಸ’ ಎಂದು ಬಿಜೆಪಿಯ ಮುಖಂಡರೊಬ್ಬರು ನೆನಪಿಸಿಕೊಳ್ಳುತ್ತಾರೆ.

ಆ ದಿನಗಳಲ್ಲಿ ಗುಜರಾತ್‌ ಬಿಜೆಪಿಯಲ್ಲಿ ಕೇಶುಭಾಯ್‌ ಪಟೇಲ್‌, ಹರೇನ್‌ ಪಾಂಡ್ಯ ಅವರಂತಹ ಘಟಾನುಘಟಿ ನಾಯಕರೇ ತುಂಬಿದ್ದರು. ಗೋರ್ಧನ್‌ ಝಡಾಫಿಯ ಅವರಂತಹ ಯುವ ಮುಖಂಡರಿದ್ದರು. ಜೈನ ಸಮುದಾಯದ ಶಾ ಅವರಿಗೆ ಯಾವ ಮನ್ನಣೆಯೂ ಇರಲಿಲ್ಲ. ಪ್ರಭಾವಿ ಪಟೇಲ್‌ ಅಥವಾ ಬ್ರಾಹ್ಮಣ ಸಮುದಾಯದ ನಾಯಕರು ಹೇಳಿದ್ದಷ್ಟೇ ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ, ಕೇಶುಭಾಯ್‌ ಮತ್ತು ಝಡಾಫಿಯ ಮೂಲೆಗುಂಪಾದರು. ಹರೇನ್‌ ಪಾಂಡ್ಯ ಕೊಲೆಯಾದರು.

2002ರ ಗಲಭೆಯ ಬಳಿಕ ಗುಜರಾತ್‌ನಲ್ಲಿ ಭಾರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಶಾ ಅವರು ಮೋದಿ ಸಂಪುಟದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದರು. ಗೃಹ ಖಾತೆಯ ರಾಜ್ಯ ಸಚಿವರಾಗಿದ್ದಾಗ ನಡೆದ ಸೊಹ್ರಾಬುದ್ದೀನ್‌ ಶೇಖ್‌, ತುಳಸೀರಾಂ ಪ್ರಜಾಪತಿ ಮತ್ತು ಇಶ್ರತ್ ಜಹಾಂ ಎನ್‌ಕೌಂಟರ್‌ಗಳಲ್ಲಿ ಅವರು ವಿವಾದಕ್ಕೂ ಒಳಗಾದರು.

ದಕ್ಷ ಆಡಳಿತಗಾರ ಎಂಬ ಹೆಸರು ಶಾ ಅವರಿಗೆ ಆಗಲೇ ಇತ್ತು. ಕಡತಗಳು ತ್ವರಿತವಾಗಿ ವಿಲೇವಾರಿ ಆಗುತ್ತಿದ್ದವು. ಶಾ ಅವರ ಕಾಲವನ್ನು ಈಗಿನ ದಿನಗಳಿಗೆ ಹೋಲಿಸಿ ಆಗ ಆಡಳಿತ ಬಹಳ ಬಿಗಿಯಾಗಿತ್ತು ಎಂದು ಹಲವು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ. ‘ನಿತ್ಯದ ಬೆಳವಣಿಗೆಗಳ ಬಗ್ಗೆ ಶಾ ಅವರಿಗೆ ಗಟ್ಟಿ ನಿಯಂತ್ರಣ ಇತ್ತು. ಯಾವುದೇ ಕಡತದ ಬಗ್ಗೆ ಎರಡೆರಡು ಬಾರಿ ನೆನಪಿಸಬೇಕಾದ ಅಗತ್ಯವೇ ಇರುತ್ತಿರಲಿಲ್ಲ. ಈಗ ಮರುಪಾವತಿಯ ಕಡತಗಳು ಕೂಡ ತಿಂಗಳುಗಳಷ್ಟು ವಿಳಂಬವಾಗುತ್ತವೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವರದಿಗಾರ ಭೇಟಿಯಾದ ಐವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‌‘ಬಿಜೆಪಿಯ ನಿಜವಾದ ರಿಂಗ್‌ ಮಾಸ್ಟರ್‌ ಅವರೇ. ಸುಮ್ಮನೆ ಮಾತನಾಡುವುದರಲ್ಲಿ ಅವರಿಗೆ ಆಸಕ್ತಿ ಇಲ್ಲ, ಕೆಲಸ ಆಗುವುದಷ್ಟೇ ಮುಖ್ಯ’ ಎಂದು ಒಬ್ಬರು ಹೇಳುತ್ತಾರೆ.

‘ಪಕ್ಷದ ಕಾರ್ಯಕರ್ತರ ಮೇಲೆ ಶಾ ಅವರು ಹೊಂದಿರುವ ನಿಯಂತ್ರಣವನ್ನು ಒಂದೇ ಸಾಲಿನಲ್ಲಿ ಹೇಳುವುದಾದರೆ, ‘ಕೆಲಸ ಆಗಿಬಿಡಬೇಕು ಅಷ್ಟೇ’. ಲಘು ಮಾತಿಗೆ ಅವರಲ್ಲಿ ಅವಕಾಶವೇ ಇಲ್ಲ. ವಿಷಯ ಏನು ಅದಕ್ಕೆ ಮಾತ್ರ ಗಮನ ಕೊಡಬೇಕು’ ಎಂಬುದು ಮತ್ತೊಬ್ಬರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT