ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಸಡಿಲಿಕೆಯಿಂದ ಕೋವಿಡ್‌–19 ಪ್ರಕರಣ ಏರಿಕೆ: ಶೇ 79ರಷ್ಟು ಜನರಲ್ಲಿ ಆತಂಕ

Last Updated 9 ಜೂನ್ 2020, 2:07 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದು ಭಾರತೀಯರನ್ನು ಆತಂಕಕ್ಕೆ ದೂಡಿದೆ. ಕೋವಿಡ್‌–19 ಪರಿಸ್ಥಿತಿಯ ಕುರಿತು ಚಿಂತಿತರಾಗಿದ್ದಾರೆ ಎಂದು ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ.

ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಲಾಕ್‌ಡೌನ್‌ 1.0 ಸಮಯದಲ್ಲಿಯೇ ಶೇ 21ರಷ್ಟು ಜನ ಆತಂಕಕ್ಕೆ ಒಳಗಾಗಿದ್ದರು ಎಂದು ಲೋಕಲ್‌ಸರ್ಕಲ್ಸ್‌ ಸಮೀಕ್ಷೆ ಹೇಳುತ್ತಿದೆ. ಈಗಾಗಲೇ ಸರ್ಕಾರ ಲಾಕ್‌ಡೌನ್‌ ಸಡಿಲಿಕೆ (ಅನ್‌ಲಾಕ್‌ 1.0) ಪ್ರಕಟಿಸಿದ್ದು, ಆತಂಕಿತರ ಸಂಖ್ಯೆ ಶೇ 56ಕ್ಕೆ ಹೆಚ್ಚಿದೆ.

ಲಾಕ್‌ಡೌನ್‌ ಮೊದಲ ಅವಧಿ, ಏಪ್ರಿಲ್‌ ಆರಂಭದಿಂದ ಲಾಕ್‌ಡೌನ್‌ ಸಡಿಲಿಕೆಯ ವೇಳೆಗೆ ಜನರಲ್ಲಿನ ತಳಮಳ ಶೇ 166ರಷ್ಟು ಏರಿಕೆಯಾಗಿದೆ.

'ಮೂರು ಹಂತಗಳಲ್ಲಿ ಲಾಕ್‌ಡೌನ್‌ ಸಡಿಲಿಸುವುದಾಗಿ ಸರ್ಕಾರ ಯೋಜನೆ ರೂಪಿಸಿರುವುದಾಗಿ ಹೇಳಿದ್ದು, ಇದೇ ವೇಳೆ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ' ಎಂದು ಸಮೀಕ್ಷೆ ತಿಳಿಸಿದೆ. ದೇಶದ 211 ಜಿಲ್ಲೆಗಳಲ್ಲಿ ಸುಮಾರು 17,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಮೊದಲ ಹಂತದ ಲಾಕ್‌ಡೌನ್‌ ಸಡಿಲಿಕೆಯು ವೈರಸ್‌ ಸೋಂಕು ಹೆಚ್ಚಿರುವ ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್‌ ಸೇರಿದಂತೆ ಎಲ್ಲ ಜಾಗಗಳಿಗೂ ಒಂದೇ ನಿಯಮಗಳು ಅನ್ವಯವಾಗುವುದು ಸರಿಯೇ ಅಥವಾ ಭಿನ್ನ ನಿಯಮಗಳನ್ನು ಅಳವಡಿಸುವುದರ ಕುರಿತು ಸರ್ಕಾರ ಗಮನ ಹರಿಸಬೇಕಿದೆ ಎಂದು ಸಮೀಕ್ಷೆ ಹೇಳಿದೆ.

'ನಿತ್ಯ ದಾಖಲಾಗುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆ ಕೆಲವು ವಾರಗಳ ಅಂತರದಲ್ಲಿ 11,000ದಿಂದ 20,000ದಷ್ಟು ಏರಿಕೆಯಾದರೆ, ಆರೋಗ್ಯ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಗಂಭೀರವಾದ ಯೋಜನೆ ರೂಪಿಸಬೇಕಿದೆ. ಹಾಗೆಯೇ ಲಾಕ್‌ಡೌನ್‌ ಕೊನೆಯಾಗಿದೆ, ಸೋಂಕು ವ್ಯಾಪಿಸುವುದು ನಿಂತಿಲ್ಲ ಹಾಗೂ ಪ್ರಭಾವ ಮತ್ತಷ್ಟು ಹೆಚ್ಚಿಸಿಕೊಂಡಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕಿದೆ. ಕೆಲವು ಜನ ಕೋವಿಡ್‌–19 ಲಾಕ್‌ಡೌನ್‌ನೊಂದಿಗೆ ಕೊನೆಯಾಗಿದೆ ಎಂಬ ಭಾವನೆಯಲ್ಲಿದ್ದಾರೆ' ಎಂದಿದೆ.

ಬಹುತೇಕ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದರ ಬಗ್ಗೆ ಸಮೀಕ್ಷೆಯಲ್ಲಿ ಶೇ 27ರಷ್ಟು ಜನರು, ಸೋಂಕು ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಕಳವಳ ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ವಿಧಿಸಬೇಕು ಎಂದಿದ್ದಾರೆ. ಶೇ 52ರಷ್ಟು ಜನರ ಪ್ರಕಾರ, ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಬಹುದು. ಆದರೆ, ನಮ್ಮ ರಾಷ್ಟ್ರವು ಲಾಕ್‌ಡೌನ್‌ನಲ್ಲಿಯೇ ಉಳಿಯಲು ಆಯ್ಕೆಗಳಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶೇ 12ರಷ್ಟು ಜನರ ಪ್ರಕಾರ, ಸೋಂಕು ಪ್ರಕರಣಗಳ ತೀವ್ರ ಮಟ್ಟ ಈಗ ದಾಖಲಾಗಿದೆ. ಇಲ್ಲಿಂದ ಮುಂದೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದ್ದು, ಲಾಕ್‌ಡೌನ್‌ ಸಡಿಲಿಕೆ ಸರಿಯಾಗಿದೆ ಎಂದಿದ್ದಾರೆ. ಶೇ 6ರಷ್ಟು ಜನರು ಲಾಕ್‌ಡೌನ್‌ ಇರಲೇಬಾರದಿತ್ತು, ವೈರಸ್‌ನಿಂದ ಎದುರಾಗುವ ಅಪಾಯದೊಂದಿಗೆ ಬದುಕಲು ಈಗ ಕಲಿಯುತ್ತಿದ್ದೇವೆ ಎಂದು ಹೇಳಿದ್ದಾರೆ.

'ಒಟ್ಟಾರೆ ಶೇ 79 ಜನರ ಪ್ರಕಾರ, ಲಾಕ್‌ಡೌನ್‌ ಸಡಿಲಿಕೆಯು ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಿಸಲಿದೆ' ಎಂದು ಸಮೀಕ್ಷೆ ಹೇಳಿದೆ.

ಮುಂಬೈ ಮತ್ತು ದೆಹಲಿಯಲ್ಲಿ ಆರೋಗ್ಯ ಸಿಬ್ಬಂದಿಯ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಿದ್ದರೂ ಅಲ್ಲಿ ಸೋಂಕಿತರಿಗೆ ಸೇವೆ ನೀಡಲು ಅಗತ್ಯ ಸಿಬ್ಬಂದಿ ಇಲ್ಲದಾಗಿದೆ. ಸಹಾಯವಾಣಿ ತಲುಪಲು ಸಾಧ್ಯವಾಗುತ್ತಿಲ್ಲ ಹಾಗೂ ವೆಬ್‌ಸೈಟ್‌ನಲ್ಲಿ ಸೂಚಿಸಿರುವುದಕ್ಕಿಂತ ವಾಸ್ತವ ಭಿನ್ನವಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಮುಂಚಿತವಾಗಿಯೇ ₹3 ಲಕ್ಷದಷ್ಟು ಹಣ ಕಟ್ಟಿಸಿಕೊಳ್ಳುತ್ತಿರುವುದು ವರದಿಯಾಗಿರುವುದಾಗಿ ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT