ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಕ್‌ನಲ್ಲಿ ಭಾರತ–ಚೀನಾ ನಡುವೆ ‘ದೋಕಲಾ ಬಿಕ್ಕಟ್ಟು’ ನೆನಪಿಸುವ ಸನ್ನಿವೇಶ

Last Updated 26 ಮೇ 2020, 3:17 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಗುಂಟಾ ಹಲವು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿ ಪರಿಸ್ಥಿತಿಯಲ್ಲಿ ನಿಂತಿದ್ದಾರೆ. ಈ ಬೆಳವಣಿಗೆಯು 2017ರಲ್ಲಿ ಎರಡೂ ದೇಶಗಳ ನಡುವೆ 73 ದಿನಗಳ ಕಾಲ ಉದ್ಭವಿಸಿದ್ದ ದೋಕಲಾ ಬಿಕ್ಕಟ್ಟಿನ ಮಿಲಿಟರಿ ಮುಖಾಮುಖಿಯನ್ನು ನೆನಪಿಸುವಂತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವಾಸ್ತವ ಗಡಿ ನಿಯಂತ್ರಣಾ ರೇಖೆಯ ವಿವಾದಾತ್ಮಕ ಪ್ರದೇಶಗಳಾದ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಕಣಿವೆಯಲ್ಲಿ ಚೀನಾ ಮೇ 5ರಿಂದ ಈಚೆಗೆ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ. ಸುಮಾರು 2,000 ದಿಂದ 2,500 ಸೈನಿಕರನ್ನು ಈ ಎರಡೂ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ನಿಯೋಜಿಸಿದೆ. ಅಷ್ಟೇ ಅಲ್ಲ, ಕ್ರಮೇಣ ತಾತ್ಕಾಲಿಕ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದೆ. ಹೀಗಾಗಿ ಭಾರತವೂ ಕೂಡ ತನ್ನ ಸೇನಾ ಬಲವನ್ನು ಹೆಚ್ಚಿಸಿದೆ ಎಂದು ಉನ್ನತ ಮಿಲಿಟರಿ ಮೂಲಗಳು ತಿಳಿಸಿವೆ.

‘ಈ ಪ್ರದೇಶದಲ್ಲಿ ಭಾರತೀಯ ಸೇನೆಯ ಬಲವು ನಮ್ಮ ಎದುರಾಳಿಗಿಂತ ಉತ್ತಮವಾಗಿದೆ’ ಎಂದು ಸೇನೆಯ ಅನಾಮಧೇಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಲ್ವಾನ್ ಕಣಿವೆಯ ಡಾರ್ಬುಕ್-ಶಾಯೋಕ್-ದೌಲತ್ ಬೇಗ್ ಓಲ್ದಿ ರಸ್ತೆಯ ಇಂಡಿಯನ್ ಪೋಸ್ಟ್ ಕೆಎಂ 120 ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿರುವ ಮುಖ್ಯ ವಿಚಾರ ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ಮಾತನಾಡಿರುವ ಸೇನೆಯ ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್‌ ಹೂಡಾ, ‘ ಇದು ಗಂಭೀರವಾದ ವಿಚಾರ. ಇದು ಸಾಮಾನ್ಯ ರೀತಿಯ ಉಲ್ಲಂಘನೆಯಲ್ಲ,’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಯಾವುದೇ ವಿವಾದಗಳು ಇಲ್ಲದ ಗಾಲ್ವಾನ್‌ನಂಥ ಪ್ರದೇಶದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಸೇನಾಬಲವನ್ನು ಹೆಚ್ಚಿಸಿರುವುದು ನೋಡಿದರೆ ಇದು ನಿಜಕ್ಕೂ ಆತಂಕಕಾರಿ ಸಂಗತಿ,’ ಎಂದು ಹೂಡಾ ಹೇಳಿದ್ದಾರೆ. ಹೂಡಾ ಅವರ ಈ ಮಾತನನ್ನು ರಾಜತಾಂತ್ರಿಕ ಪರಿಣತರೂ ಒಪ್ಪಿಕೊಂಡಿದ್ದಾರೆ.

‘ಚೀನಾದ ಸೈನ್ಯದಿಂದ ಹಲವು ಬಾರಿ ಅತಿಕ್ರಮಣಗಳು ನಡೆದಿವೆ. ಆದರೆ ಇದು ಹಾಗಲ್ಲ. ಗಂಭೀರ ವಿಷಯ. ಇದು ನಿಜಕ್ಕೂ ಕಳವಳಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿ ಗೊಂದಲವನ್ನೂ ಮೂಡಿಸುತ್ತಿದೆ,’ ಎಂದು ಚೀನಾಕ್ಕೆ ಭಾರತದ ರಾಯಭಾರಿಯಾಗಿದ್ದ ಅಶೋಕ್‌ ಕೆ ಕಾಂತಾ ಅಭಿಪ್ರಾಯಪಟ್ಟಿದ್ದಾರೆ.

ಮೇ 5 ಮತ್ತು 6ರಂದು ರಂದು ಲಡಾಕ್‌ನಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಗರ್ಷಣೆ ನಡೆದಿತ್ತು. ಆಗ ಸ್ಥಳೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಬಳಿಕ ಸಮಸ್ಯೆ ಇತ್ಯರ್ಥ ಮಾಡಲಾಗಿತ್ತು.

3488 ಕಿಲೋ ಮೀಟರ್‌ ಉದ್ದದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಈ ರೀತಿಯ ಘರ್ಷಣೆಗಳು ಭದ್ರತಾ ಪಡೆಗಳ ನಡುವೆ ನಡೆಯುತ್ತಿವೆ. ಆದರೆ, ಉಭಯ ದೇಶಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಮುಖಾಮುಖಿ ಘರ್ಷಣೆಗಳು ಸಂಭವಿಸಿರಲಿಲ್ಲ. ಈ ಹಿಂದೆ 2017ರ ಆಗಸ್ಟ್‌ನಲ್ಲಿ ಲಡಾಕ್ ‌ನಲ್ಲಿ ಇಂಥ ಘರ್ಷಣೆ ನಡೆದಿತ್ತು. ಲಡಾಕ್‌ನ ಪಾಂಗೊಂಗ್‌ ಸರೋವರ ಬಳಿ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ಸಹ ನಡೆದಿತ್ತು .

2017ರಲ್ಲಿ 73 ದಿನಗಳ ದೋಕ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಉಭಯ ದೇಶಗಳ ಸೇನೆಯ ನಡುವಣ ಸಂಬಂಧವೂ ಹದಗೆಟ್ಟಿತ್ತು. ಬಳಿಕ ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವೆ ನಡೆದ ಶೃಂಗಸಭೆ ಬಳಿಕ ಸಂಬಂಧಗಳು ಸುಧಾರಿಸಿದ್ದವು. ಈ ಶೃಂಗಸಭೆಯ ಬಳಿಕವೂ ಉಭಯ ನಾಯಕರು ಹಲವು ಬಾರಿ ಭೇಟಿಯಾಗಿ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನೀತಿ ಪಾಲಿಸಲು ಒಪ್ಪಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT