ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಆದೇಶ ನೀಡಿದರೆ ಪಿಒಕೆ ವಶಕ್ಕೆ ಪಡೆಯಲು ಸಿದ್ಧ: ಸೇನಾ ಮುಖ್ಯಸ್ಥ ನರವಣೆ

Last Updated 11 ಜನವರಿ 2020, 18:51 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವು (ಪಿಒಕೆ) ಭಾರತದ ಸುಪರ್ದಿಗೆ ಬರಬೇಕು ಎಂದು ಸಂಸತ್ತು ಆದೇಶ ನೀಡಿದರೆ ಸೇನೆಯು ಅದನ್ನು ಸಾಧ್ಯವಾಗಿಸುವ ಕೆಲಸ ಮಾಡಲಿದೆ ಎಂದು ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹಲವು ವರ್ಷಗಳ ಹಿಂದೆಯೇ ಸಂಸತ್ತು ನಿರ್ಣಯ ಕೈಗೊಂಡಿದೆ. ಆ ಪ್ರದೇಶವನ್ನು ವಶಪಡಿಸಿಕೊಳ್ಳುವಂತೆ ಸಂಸತ್ತು ಅಪೇಕ್ಷಿಸಿ, ಆ ಬಗ್ಗೆ ಆದೇಶವನ್ನು ನೀಡಿದರೆ ಸೇನೆ ಖಂಡಿತವಾಗಿಯೂ ಸೂಕ್ತ ಕ್ರಮ ಜರುಗಿಸಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಭವಿಷ್ಯದ ಯುದ್ಧಗಳಿಗೆ ಸೇನೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ನೆಟ್‌ವರ್ಕ್‌ ಕೇಂದ್ರಿತ ಮತ್ತು ಸಂಕೀರ್ಣ ದೃಷ್ಟಿಕೋನದ ತರಬೇತಿಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಗಡಿಭಾಗದಲ್ಲಿ ಮೂಲಸೌಕರ್ಯಗಳನ್ನು ಚೀನಾ ಹೆಚ್ಚಿಸಿಕೊಳ್ಳುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ‘ಉತ್ತರ ಭಾಗದ ಗಡಿಯುದ್ದಕ್ಕೂ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ. ವೃತ್ತಿಪರ ಪಡೆಯಾಗಿರುವ ಭಾರತೀಯ ಸೇನೆಯು ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿದ್ದು, ಪಾಕಿಸ್ತಾನದ ಬೆದರಿಕೆಗಳಿಗೆ ವೃತ್ತಿಪರವಾಗಿಯೇ ಪ್ರತಿಕ್ರಿಯೆ ನೀಡುತ್ತದೆ’ ಎಂದರು.

ಸಿಯಾಚಿನ್ ಹಾಗೂ ಶಕ್ಸಗಮ್ ಕಣಿವೆಯಲ್ಲಿ ಪಿತೂರಿ?
‘ಸಿಯಾಚಿನ್ ನೀರ್ಗಲ್ಲು ಪ್ರದೇಶ ಹಾಗೂ ಶಕ್ಸಗಮ್ ಕಣಿವೆಯಲ್ಲಿ ಚೀನಾ ಹಾಗೂ ಪಾಕಿಸ್ತಾನ ಸೇರಿ ಭಾರತದ ವಿರುದ್ಧ ಸಂಚು ನಡೆಸುವ ಸಾಧ್ಯತೆಯಿದೆ’ ಎಂದು ಸೇನಾಮುಖ್ಯಸ್ಥ ನರವಣೆ ಹೇಳಿದ್ದಾರೆ.

‘ಎರಡೂ ದೇಶಗಳು ಸೇರಿ ಸಂಚು ರೂಪಿಸುವ ಸಾಧ್ಯತೆಯ ಮೇಲೆ ನಿಗಾ ಇರಿಸಲಾಗಿದೆ. ಅದು ಭೌತಿಕವಾಗಿ ಅಥವಾ ಇನ್ನಾವುದೇ ಸ್ವರೂಪದಲ್ಲಿ ಇರಬಹುದು. ಸಿಯಾಚಿನ್ ಹಾಗೂ ಶಕ್ಸಗಮ್ ಕಣಿವೆಯ ಗಡಿ ಪ್ರದೇಶದಲ್ಲಿ ಆ ಎರಡು ರಾಷ್ಟ್ರಗಳು ತೀರಾ ಹತ್ತಿರದಲ್ಲಿವೆ. ಹೆಚ್ಚು ಬೆದರಿಕೆಯಿದ್ದ ಪಶ್ಚಿಮ ದಿಕ್ಕಿನಲ್ಲಿ ಈವರೆಗೆ ನಮ್ಮ ಗಮನ ಕೇಂದ್ರೀಕೃತವಾಗಿತ್ತು. ಈಗ ಪಶ್ಚಿಮ ಮತ್ತು ಉತ್ತರ ದಿಕ್ಕುಗಳೆರಡನ್ನೂ ಸಮಾನ ಬೆದರಿಕೆಗಳು ಎಂದು ಪರಿಗಣಿಸಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

‘ಕಾರ್ಯತಂತ್ರದ ಭಾಗವಾಗಿ ಸಿಯಾಚಿನ್ ನಮಗೆ ಅತಿಮುಖ್ಯ ಪ್ರದೇಶ. ಸಂಚು ರೂಪುಗೊಳ್ಳುವ ಸಾಧ್ಯತೆ ಇಲ್ಲಿ ಅಧಿಕ. ಕಾರ್ಯತಂತ್ರವನ್ನು ಮರು ಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಮುಂಚೂಣಿ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ, ಸ್ಫೋಟಕಗಳ ದಾಸ್ತಾನು ಸಾಮರ್ಥ್ಯ ವಿಸ್ತರಣೆ ಹಾಗೂ ಆಯಕಟ್ಟಿನ ಜಾಗಗಳಿಗೆ ಅತ್ಯಾಧುನಿಕ ಶಸ್ತ್ರ ವ್ಯವಸ್ಥೆ ನಿಯೋಜಿಸುವ ಕೆಲಸದಲ್ಲಿ ಭಾರತ ತೊಡಗಿದೆ’ ಎಂದು ಹೇಳಿದ್ದಾರೆ.

ಚೀನಾ ಗಡಿಯ ಆತಂಕದ ಸುತ್ತ...

*ಮೂರು ಯುದ್ಧಗಳು ಮತ್ತು ಪಾಕಿಸ್ತಾನ ಬೆಂಬಲಿತ ಪರೋಕ್ಷ ಯುದ್ಧದ ಕಾರಣ ಪಶ್ಚಿಮ ಗಡಿಯ ಮೇಲೆಯೇ ಭಾರತ ಹೆಚ್ಚು ಗಮನ ವಹಿಸುತ್ತಾ ಬಂದಿದೆ

* ಭಾರತ–ಚೀನಾ ನಡುವಿನ 3,488 ಕಿ.ಮೀ. ಉದ್ದದ ವಾಸ್ತವ ಗಡಿಯಲ್ಲಿ ಕೆಲವು ಬಾರಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ

*2019ರಲ್ಲಿ ಮಾಮಲ್ಲಪುರಂನಲ್ಲಿಪ್ರಧಾನಿ ನರೇಂದ್ರ ಮೋದಿ–ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಸಭೆಯಲ್ಲಿ ರೂಪಿಸಿದ್ದ ಮಾರ್ಗಸೂಚಿಗಳನ್ನು ಉಭಯ ದೇಶಗಳ ಸೇನೆಗಳು ಪಾಲಿಸುತ್ತಿದ್ದು, ಸಣ್ಣ ಪ್ರಮಾಣದ ಗಡಿ ಕಿಡಿಗಳು ಇತ್ಯರ್ಥವಾಗುತ್ತಿವೆ

*ವಿಶ್ವಾಸವೃದ್ಧಿಯ ಭಾಗವಾಗಿ ಚೀನಾ ಹಾಗೂ ಭಾರತದ ನಡುವೆ ಹಾಟ್‌ಲೈನ್ ಸಂಪರ್ಕ ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ ಕಚೇರಿ ಹಾಗೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮ ಕಮಾಂಡ್ ಕಚೇರಿಯಲ್ಲಿ ಹಾಟ್‌ಲೈನ್ ಸ್ಥಾಪನೆಯಾಗಲಿದೆ

**
ದೇಶದ ಉತ್ತರ ದಿಕ್ಕಿನ ಗಡಿಯಲ್ಲಿ ಅತ್ಯಾಧುನಿಕ ಶಸ್ತ್ರ ವ್ಯವಸ್ಥೆ ನಿಯೋಜಿಸುವುದೂ ಸೇರಿದಂತೆ ಅಲ್ಲಿನ ಸೇನಾ ಸಿದ್ಧತೆಯನ್ನು ಮರು ರೂಪಿಸುತ್ತಿದ್ದೇವೆ.
–ಎಂ.ಎಂ. ನರವಾಣೆ, ಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT