ರಾಮಮಂದಿರ ನಿರ್ಮಾಣಕ್ಕೆ ಹಣದ ಕೊರತೆ!

7
ಶೇ 50ರಷ್ಟು ಕೆತ್ತನೆ ಕಾರ್ಯ ಪೂರ್ಣ: ಕ್ಷೀಣಿಸಿದ ಕುಶಲಕರ್ಮಿಗಳ ಸಂಖ್ಯೆ

ರಾಮಮಂದಿರ ನಿರ್ಮಾಣಕ್ಕೆ ಹಣದ ಕೊರತೆ!

Published:
Updated:
Deccan Herald

ಅಯೋಧ್ಯೆ: ಅಯೋಧ್ಯೆಯ ಕರಸೇವಕಪುರಂನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ಈಗ ನಿಧಾನಗತಿಯಲ್ಲಿ ಸಾಗಿವೆ. ಹಣದ ಕೊರತೆ ಮತ್ತು ಕುಶಲಕರ್ಮಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ರಾಮ ಜನ್ಮಭೂಮಿ ನ್ಯಾಸ್‌ನ ‘ಕಾರ್ಯಶಾಲಾ’ದಲ್ಲಿ 1990ರಿಂದ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿಯವರೆಗೆ ಶೇಕಡ 50ರಷ್ಟು ಕೆತ್ತನೆ ಕಾರ್ಯ ಮುಗಿದಿದೆ.

‘ಈಗ ಕೇವಲ ಇಬ್ಬರು ಕುಶಲಕರ್ಮಿಗಳು ಹಾಗೂ ಬೆರಳಣಿಕೆಯಷ್ಟು ಕಾರ್ಮಿಕರಿದ್ದಾರೆ. ಕೆಲವು ಕುಶಲಕರ್ಮಿಗಳು ಇತರ ಕೆಲಸಗಳಿಗೆ ತೆರಳಿದ್ದಾರೆ. 1990ರಲ್ಲಿ 150 ಮಂದಿ ಇದ್ದರು. ಕುಶಲಕರ್ಮಿಗಳು ಪ್ರತಿ ದಿನ ಬೆಳಿಗ್ಗೆ 7ಗಂಟೆಯಿಂದ ಸಂಜೆ 5ರವರೆಗೆ ಕೆಲಸ ಮಾಡುತ್ತಿದ್ದರು. ಅಮಾವಾಸ್ಯೆ ದಿನ ಮಾತ್ರ ಕೆಲಸ ಸ್ಥಗಿತಗೊಳಿಸುತ್ತಿದ್ದರು’ ಎಂದು ಕಾರ್ಯಶಾಲಾದ ಉಸ್ತುವಾರಿ ವಹಿಸಿಕೊಂಡಿರುವ ಅನ್ನು ಭಾಯ್‌ ಸೋಮಪುರ್‌ ತಿಳಿಸಿದ್ದಾರೆ.

‘ಮೊದಲ ಮಹಡಿಗೆ ಸಂಬಂಧಿಸಿದ ಕಾರ್ಯಗಳು ಮುಕ್ತಾಯಗೊಂಡಿವೆ. ಅಯೋಧ್ಯೆ ವಿವಾದದಲ್ಲಿ ನಮ್ಮ ಪರ ತೀರ್ಪು ಬರುತ್ತದೆ ಎನ್ನುವ ಆಶಾಭಾವ ಹೊಂದಿದ್ದೇವೆ. ಹಸಿರು ನಿಶಾನೆ ದೊರೆತ ತಕ್ಷಣವೇ ಅಡಿಪಾಯ ಹಾಕುವ ಕಾರ್ಯ ಆರಂಭಿಸುತ್ತೇವೆ’ ಎಂದು ಸೋಮಪುರ್‌ ತಿಳಿಸಿದ್ದಾರೆ.

‘ಅಡಿಪಾಯ ಹಾಕಿದ ಬಳಿಕ ನಾಲ್ಕೈದು ವರ್ಷಗಳಲ್ಲಿ ಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ. ನಾವು ಈಗ ಕುತೂಹಲದಿಂದ ನ್ಯಾಯಾಲಯದ ತೀರ್ಪು ಕಾಯುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಕಾರ್ಯಶಾಲಾದಲ್ಲಿ ಉದ್ದೇಶಿತ ರಾಮಮಂದಿರದ ಕಟ್ಟಿಗೆಯ ಮಾದರಿಯೂ ಇದೆ.

ಇದನ್ನು ಗಾಜಿನ ಪೆಟ್ಟಿಗೆಯಲ್ಲಿಡಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯವಾಗಿದೆ. ಇದು ವಸ್ತುಸಂಗ್ರಹಾಲಯ ರೀತಿಯಲ್ಲಿ ಪರಿವರ್ತನೆಗೊಂಡಿದ್ದು, ಪ್ರತಿ ದಿನ ಕನಿಷ್ಠ ಒಂದು ಸಾವಿರ ಮಂದಿ ಭೇಟಿ ನೀಡುತ್ತಾರೆ.

ಸದ್ಯಕ್ಕೆ ವಿಚಾರಣೆ ಇಲ್ಲ: ‘ಸುಪ್ರೀಂ’

ನವದೆಹಲಿ: ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಶೀಘ್ರವೇ ನಡೆಸಬೇಕು ಎನ್ನುವ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ.

‘ಈ ಪ್ರಕರಣದ ವಿಚಾರಣೆಯನ್ನು ಜನವರಿ ತಿಂಗಳಿಗೆ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಹೀಗಾಗಿ, ಸದ್ಯಕ್ಕೆ ವಿಚಾರಣೆ ಕೈಗೊಳ್ಳುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಮತ್ತು ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ಅವರನ್ನೊಳಗೊಂಡ ಪೀಠವು ತಿಳಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಈ ಬಗ್ಗೆ ಅರ್ಜಿ ಸಲ್ಲಿಸಿತ್ತು.

‘ರಾಮನಿಗೆ ಅಗತ್ಯವಿದ್ದಾಗ ಮಂದಿರ’

ಬಹ್ರೈಚ್‌: ‘ಭಗವಾನ ರಾಮನಿಗೆ ಬೇಕು ಅನಿಸಿದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುವುದು’ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ತಿಳಿಸಿದ್ದಾರೆ.

‘ಪ‍್ರತಿಯೊಂದು ಕಾರ್ಯವು ದೇವರ ಇಚ್ಛೆಯಂತೆ ನಡೆಯುತ್ತದೆ. ನಮ್ಮ ದೇಶದಲ್ಲಿ ಪ್ರತಿಯೊಂದು ಕಾರ್ಯವು ಧರ್ಮ ಮತ್ತು ನಂಬಿಕೆ ಮೇಲೆಯೇ ನಡೆಯುತ್ತದೆ’ ಎಂದು ಹೇಳಿದ್ದಾರೆ.

ರಾಮಮಂದಿರದ ವಿನ್ಯಾಸ

ಯೋಜನೆ ಪ್ರಕಾರ ರಾಮಮಂದಿರವನ್ನು 268 ಅಡಿ ಉದ್ದ, 140 ಅಡಿ ಅಗಲ ಹಾಗೂ 128 ಅಡಿ ಎತ್ತರ ನಿರ್ಮಿಸುವ ಉದ್ದೇಶವಿದೆ. ಇದಕ್ಕಾಗಿ 212 ಕಂಬಗಳನ್ನು ಬಳಸಲಾಗುವುದು ಎಂದು ಅನ್ನು ಭಾಯ್‌ ಸೋಮಪುರ ತಿಳಿಸಿದ್ದಾರೆ.

ಪ್ರತಿಯೊಂದು ಮಹಡಿಗೆ 106 ಕಂಬಗಳ ಬಳಕೆಯಾಗಲಿದೆ ಮತ್ತು ಪ್ರತಿಯೊಂದು ಕಂಬದಲ್ಲೂ 16 ಪ್ರತಿಮೆಗಳಿರುತ್ತಿವೆ ಎಂದು ತಿಳಿಸಿದ್ದಾರೆ.

1990ರಲ್ಲಿ ಕೆತ್ತನೆ ಮಾಡಿರುವ ಗುಲಾಬಿ ಬಣ್ಣದ ಕೆಲವು ಕಲ್ಲುಗಳು ಈಗ ಕಪ್ಪು ಬಣ್ಣಕ್ಕೆ ತಿರುಗಿವೆ. ಇವುಗಳನ್ನು ಸ್ವಚ್ಛಗೊಳಿಸಲು ಉದ್ದೇಶಿಸಲಾಗಿದೆ.

‘ಕಲ್ಲಿನ ಕಂಬಗಳಿಗೆ ಎಚ್ಚರಿಕೆಯಿಂದ ಸಂಖ್ಯೆಗಳನ್ನು ನಮೂದಿಸಲಾಗಿದೆ. ಇವುಗಳನ್ನು ಬಿಳಿ ಸಿಮೆಂಟ್‌ ಬಳಸಿ ಜೋಡಿಸಲಾಗುವುದು’ ಎಂದು ಉತ್ತರ ಪ್ರದೇಶದ ವಿಶ್ವ ಹಿಂದೂ ಪರಿಷತ್‌ ವಕ್ತಾರ ಶರತ್‌ ಶರ್ಮಾ ತಿಳಿಸಿದ್ದಾರೆ.

ಅಯೋಧ್ಯೆ, ಮಥುರಾ ಇನ್ನು ಯಾತ್ರಾ ಸ್ಥಳಗಳು

ಲಖನೌ: ಅಯೋಧ್ಯೆಯಲ್ಲಿನ 14 ಕೋಸಿ ಪರಿಕ್ರಮ ಮಾರ್ಗ ಮತ್ತು ಮಥುರಾದಲ್ಲಿನ ಕೃಷ್ಣ ಜನ್ಮಸ್ಥಳವನ್ನು ಪ್ರಮುಖ ಯಾತ್ರಾ ಸ್ಥಳಗಳೆಂದು ಘೋಷಿಸುವ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

ಇದರಿಂದ ಮದ್ಯ ಮತ್ತು ಮಾಂಸಾಹಾರದ ಮಾರಾಟ ಹಾಗೂ ಸೇವನೆ ಸ್ಥಗಿತಗೊಳ್ಳುತ್ತದೆ ಎಂದು ಅದು ತಿಳಿಸಿದೆ.

‘ಅಯೋಧ್ಯೆ ಮತ್ತು ಮಥುರಾದಲ್ಲಿ ಮಾಂಸಾಹಾರ ಮತ್ತು ಮದ್ಯ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಬೇಕು ಎಂದು ಲಕ್ಷಾಂತರ ಭಕ್ತರು ಮತ್ತು ಸಂತರು ಒತ್ತಾಯಿಸಿದ್ದಾರೆ. ಇವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದೆ’ ಎಂದು ಸಚಿವ ಶ್ರೀಕಾಂತ್‌ ಶರ್ಮಾ ತಿಳಿಸಿದ್ದಾರೆ.

* ಇದುವರೆಗಿನ ಕಾರ್ಯಗಳಿಗೆ ಭಕ್ತಾದಿಗಳು ದೇಣಿಗೆ ನೀಡಿದ್ದಾರೆ. ಆದರೆ, ಮೊದಲಿನಂತೆ ಈಗ ಹಣ ಹರಿದು ಬರುತ್ತಿಲ್ಲ

-ಅನ್ನು ಭಾಯ್‌ ಸೋಮಪುರ್‌ , ಕಾರ್ಯಶಾಲಾ ಉಸ್ತುವಾರಿ
 

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !