ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ ಕಾರ್ಯಕರ್ತನ ಹತ್ಯೆ ಪ್ರಕರಣ ಆರೋಪಿಯಾಗಿದ್ದ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

Last Updated 28 ಜುಲೈ 2019, 11:46 IST
ಅಕ್ಷರ ಗಾತ್ರ

ಮಿಡ್ನಾಪುರ್: ಪಶ್ಚಿಮ ಬಂಗಾಳದಲ್ಲಿ ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಕಾಶೀನಾಥ್ ಘೋಷ್ (45) ಅವರ ಮೃತದೇಹ ಹೂಗ್ಲಿ ಜಿಲ್ಲೆಯ ಗೋಘಾಟ್ ಪ್ರದೇಶದ ಕಾಲುವೆಯೊಂದರಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಟಿಎಂಸಿ ಕಾರ್ಯಕರ್ತ ಲಾಲ್‌ಚಂದ್ ಬಾಗ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಶೀನಾಥ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು.ಹಾಗಾಗಿ ಘೋಷ್ ಅವರನ್ನು ಟಿಎಂಸಿ ಕಾರ್ಯಕರ್ತರೇ ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಾಶೀನಾಥ್ ಅವರು ನಮ್ಮ ಪಕ್ಷದ ಸಕ್ರಿಯ ರಾಜಕಾರಣಿ ಆಗಿದ್ದರು. ಟಿಎಂಸಿ ಕಳುಹಿಸಿದ ಹಂತಕರು ಆತನನ್ನು ಹತ್ಯೆಗೈದಿದ್ದಾರೆ ಎಂದು ಆರಂಭಾಗ್‌ನ ಬಿಜೆಪಿಯ ಸಾಂಘಿಕ ಅಧ್ಯಕ್ಷ ಬಿಮನ್ ಘೋಷ್ ಆರೋಪಿಸಿದ್ದಾರೆ.

ಜುಲೈ 22 ರಂದು ನಕುಂದಾ ಎಂಬಲ್ಲಿ ಟಿಎಂಸಿ ಕಾರ್ಯಕರ್ತ ಲಾಲ್‌ಚಂದ್ ಬಾಗ್‍ ಹತ್ಯೆಗೀಡಾಗಿದ್ದರು. ಈ ಹತ್ಯೆಯಲ್ಲಿ ಕಾಶೀನಾಥ್ ಘೋಷ್ ಕೈವಾಡ ಇದೆ ಎಂದು ಟಿಎಂಸಿ ಆರೋಪಿಸಿದ್ದು, ಬಿಜೆಪಿ ಇದನ್ನು ನಿರಾಕರಿಸಿತ್ತು.

ಟಿಎಂಸಿಯಲ್ಲಿನ ಒಳ ಜಗಳದಿಂದ ಲಾಲ್ ಚಂದ್ ಹತ್ಯೆಯಾಗಿದ್ದರು. ನಿಜವಾದ ಹಂತಕರನ್ನು ರಕ್ಷಿಸುವ ಸಲುವಾಗಿ ಅವರು ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಸುಳ್ಳು ಆರೋಪದ ಮೇರೆಗೆ ನಮ್ಮ ಪಕ್ಷದ ಆರು ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.ಇದೀಗ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಕಾಶೀನಾಥ್‌ನ್ನು ಅವರು ಹತ್ಯೆ ಮಾಡಿದ್ದಾರೆ ಎಂದು ಘೋಷ್ ಆರೋಪಿಸಿದ್ದಾರೆ.

ಈ ಆರೋಪವನ್ನು ತಳ್ಳಿ ಹಾಕಿದ ಟಿಎಂಸಿ ಜಿಲ್ಲಾಧ್ಯಕ್ಷ ದಿಲೀಪ್ ಯಾದವ್, ನಾವು ಹಿಂಸಾಚಾರ ಮತ್ತು ಹತ್ಯೆಯ ರಾಜಕಾರಣದಲ್ಲಿ ನಂಬಿಕೆ ಇಟ್ಟವರಲ್ಲ.ಬಿಜೆಪಿ ಕಾರ್ಯಕರ್ತರೊಬ್ಬರ ಮೃತದೇಹ ಪತ್ತೆಯಾಗಿದೆ ಎಂಬು ಸುದ್ದಿ ಸಿಕ್ಕಿತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿ.ಪ್ರತಿಯೊಂದು ಘಟನೆ ನಡೆದಾಗಲೂ ಬಿಜೆಪಿ ನಮ್ಮ ಪಕ್ಷದ ಹೆಸರನ್ನು ಎಳೆದು ತರುತ್ತದೆ ಎಂದಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗೋಘಾಟ್ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ಸಮೀರ್ ಡೇ, ಕಾಶೀನಾಥ್ ದೇಹದಲ್ಲಿ ಗಾಯಗಳು ಕಂಡು ಬಂದಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT