ಮಂಗಳವಾರ, ಮಾರ್ಚ್ 9, 2021
18 °C

ಭಾರತ ರತ್ನ ಎಂದರೇನು? ಭಾರತ ರತ್ನ ನೀಡಲು ಮಾನದಂಡಗಳು, ಅರ್ಹತೆಗಳೇನು?

ಗಣಪತಿ ಶರ್ಮಾ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎಂಬ ಆಗ್ರಹ ರಾಜಕೀಯ ಗಣ್ಯರಾದಿಯಾಗಿ ಹೆಚ್ಚಿನವರಿಂದ ಕೇಳಿಬರುತ್ತಿತ್ತು. ಶ್ರೀಗಳು ಸೋಮವಾರ (ಜ.21) ಲಿಂಗೈಕ್ಯರಾದ ಬಳಿಕ ಒತ್ತಾಯ ಹೆಚ್ಚಾಗಿತ್ತು. ಇದೀಗ ಕೇಂದ್ರ ಸರ್ಕಾರ ಭಾರತ ರತ್ನ ಪುರಸ್ಕೃತರ ಹೆಸರು ಘೋಷಿಸಿದೆ. ಆದರೆ ಅದರಲ್ಲಿ ಶಿವಕುಮಾರ ಸ್ವಾಮೀಜಿ ಹೆಸರು ಇಲ್ಲ.

ಇದನ್ನೂ ಓದಿ: ‘ಸ್ವಾಮೀಜಿಗೆ ಭಾರತ ರತ್ನ ಕೊಡಲು ಸಾಧ್ಯವಿಲ್ಲ’: ‘ಟೀಂಮೋದಿ’ ಕೊಡುವ ಕಾರಣ ನಿಜವೇ?

ಭಾರತ ರತ್ನ ಎಂದರೇನು? ಯಾಕಾಗಿ, ಯಾರಿಗೆಲ್ಲ ಇದನ್ನು ನೀಡಲಾಗುತ್ತದೆ? ಮಾನದಂಡಗಳು, ಅರ್ಹತೆಗಳೇನು? ಶ್ರೀಗಳಿಗೆ ಇನ್ನು ಭಾರತ ರತ್ನ ನೀಡಲು ಅವಕಾಶವಿದೆಯೇ? ಇದ್ದರೆ ಯಾರು ಕ್ರಮ ಕೈಗೊಳ್ಳಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ.

ಇದನ್ನೂ ಓದಿ: ‘ಭಾರತರತ್ನ’ ಪುರಸ್ಕಾರಕ್ಕೆ ರಾಜಕೀಯ ಲೇಪ ಯಾಕೆ?– ಪ್ರಜಾವಾಣಿ ಸಂಪಾದಕೀಯ

ಏನಿದು ಭಾರತ ರತ್ನ?

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಪರಮೋಚ್ಛ ಗೌರವವೇ ಭಾರತ ರತ್ನ. ಇದನ್ನು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಎಂದೂ ಪರಿಗಣಿಸಲಾಗಿದೆ. ಆಯ್ಕೆಯಾದವರಿಗೆ ಅಶ್ವತ್ಥ ಎಲೆಯ ಆಕಾರದಲ್ಲಿರುವ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

ಇದನ್ನೂ ಓದಿ: ‘ಶಿವಕುಮಾರ ಸ್ವಾಮೀಜಿ ಎಂದೂ ಭಾರತ ರತ್ನ ಬಯಸಿದವರಲ್ಲ’ –ಸಿದ್ಧಲಿಂಗ ಸ್ವಾಮೀಜಿ ಸಂದರ್ಶನ

ಅರ್ಹರು ಯಾರು?

ಆರಂಭದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಅಥವಾ ಸಾಧನೆ ಮಾಡಿದವರನ್ನು ಭಾರತ ರತ್ನಕ್ಕೆ ಪರಿಗಣಿಸಲಾಗುತ್ತಿತ್ತು. ಆದರೆ, 2011ರ ಡಿಸೆಂಬರ್‌ನಲ್ಲಿ ತಿದ್ದುಪಡಿ ಮಾಡಿ ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಅರ್ಹರು ಎಂದು ಪರಿಗಣಿಸಲು ತೀರ್ಮಾನಿಸಲಾಯಿತು. ಭಾರತ ರತ್ನ ನೀಡಲು ಜನಾಂಗ, ಲಿಂಗ, ವೃತ್ತಿ ಇತ್ಯಾದಿಗಳೆಲ್ಲವನ್ನೂ ಮೀರಿ ಸಾಧನೆಯನ್ನು ಮಾತ್ರ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.

ಇದನ್ನೂ ಓದಿ: ನಡೆದಾಡುವ ದೇವರಿಗೆ ಒಲಿಯದ ‘ರತ್ನ’: ಆಕ್ರೋಶ

ಆಯ್ಕೆ ಮಾಡುವವರು ಯಾರು?

ಭಾರತ ರತ್ನಕ್ಕೆ ಕೇಂದ್ರ ಗೃಹ ಇಲಾಖೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಅರ್ಹತೆ, ಮಾನದಂಡ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿಗಳು ಹೆಸರನ್ನು ಆಯ್ಕೆ ಮಾಡಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ರಾಷ್ಟ್ರಪತಿಗಳು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ವರ್ಷ ಮೂವರು ಸಾಧಕರನ್ನು ಆಯ್ಕೆ ಮಾಡಲು ಅವಕಾಶವಿದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗೆ ಇಲ್ಲ ಭಾರತ ರತ್ನ, ಮೋದಿ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ

ನಗದು ಪುರಸ್ಕಾರ ಇಲ್ಲ

ಭಾರತ ರತ್ನದ ಜತೆ ನಗದು ಪುರಸ್ಕಾರ ಇರುವುದಿಲ್ಲ. ಆದರೆ, ಗೌರವಕ್ಕೆ ಪಾತ್ರರಾದವರು ಸರ್ಕಾರದ ಕೆಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರೈಲುಗಳಲ್ಲಿ ಉಚಿತ ಪ್ರಯಾಣ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಆದ್ಯತೆ ಸೇರಿದಂತೆ ಕೆಲವು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಅಲ್ಲದೆ, ಭಾರತ ರತ್ನಕ್ಕೆ ಪಾತ್ರರಾದವರು ಭಾರತ ಸರ್ಕಾರದ ಗಣ್ಯರ ಪಟ್ಟಿ ಅಥವಾ ಪ್ರೊಟೊಕಾಲ್‌ನಲ್ಲಿ ಏಳನೇ ಸ್ಥಾನ ಪಡೆಯುತ್ತಾರೆ. ಅಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ, ಮಾಜಿ ರಾಷ್ಟ್ರಪತಿ, ಉಪಪ್ರಧಾನ ಮಂತ್ರಿ, ಮುಖ್ಯ ನ್ಯಾಯಾಧೀಶ, ಲೋಕಸಭಾ ಸ್ಪೀಕರ್‌, ಕ್ಯಾಬಿನೆಟ್‌ ಮಂತ್ರಿ, ಮುಖ್ಯಮಂತ್ರಿ, ಮಾಜಿ ಪ್ರಧಾನ ಮಂತ್ರಿ ಮತ್ತು ಸಂಸತ್ತಿನ ಎರಡೂ ಸದನದ ವಿರೋಧ ಪಕ್ಷದ ನಾಯಕರ ನಂತರದ ಸ್ಥಾನ ಪಡೆಯುತ್ತಾರೆ.

ಇದನ್ನೂ ಓದಿ: ‘ಸ್ವಾಮೀಜಿ ಹೆಚ್ಚು ಅರ್ಹರಲ್ಲವಾ? –ಗೃಹ ಸಚಿವ ಪಾಟೀಲ್ ಪ್ರಶ್ನೆ

ಪದಕ ಹೀಗಿರುತ್ತದೆ...

ಅಶ್ವತ್ಥ ಎಲೆಯ ಆಕಾರದಲ್ಲಿ ಪದಕವಿರುತ್ತದೆ. ಇದರ ಒಂದು ಬದಿಯಲ್ಲಿ ರಾಷ್ಟ್ರಲಾಂಛನವಿದ್ದು ‘ಸತ್ಯಮೇವ ಜಯತೇ’ ಎಂದು ಬರೆದಿರುತ್ತದೆ. ಮತ್ತೊಂದು ಬದಿಯಲ್ಲಿ ಸೂರ್ಯನ ಚಿತ್ರ ಮತ್ತು ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ‘ಭಾರತ ರತ್ನ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಪ್ರಣವ್‌ ಮುಖರ್ಜಿ ‘ಭಾರತ ರತ್ನ’

ಆರಂಭವಾದದ್ದು ಯಾವಾಗ?

1954ರಲ್ಲಿ ಭಾರತ ರತ್ನ ನೀಡಲು ಆರಂಭವಾಯಿತು. ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ, ಶಿಕ್ಷಣ ತಜ್ಞ ಮತ್ತು ದೇಶದ ಮೊದಲ ಉಪರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್, ಭೌತವಿಜ್ಞಾನಿ ಸಿ.ವಿ. ರಾಮನ್ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾದರು.

ಇದನ್ನೂ ಓದಿ: ಭಾರತ ರತ್ನ, ಆಯ್ಕೆಗೆ ಅಪಸ್ವರ

ಮರಣೋತ್ತರವಾಗಿ ನೀಡಲು ಅವಕಾಶ ಇದೆಯೇ?

ಭಾರತ ರತ್ನ ನೀಡಲು ಆರಂಭಿಸಿದಾಗ ಮರಣೋತ್ತರವಾಗಿ ನೀಡಲು ಅವಕಾಶ ಇರಲಿಲ್ಲ. ಆದರೆ, 1955ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಮರಣೋತ್ತರವಾಗಿ ನೀಡಲು ಅವಕಾಶ ಕಲ್ಪಿಸಲಾಯಿತು. ಮರಣೋತ್ತರವಾಗಿ ಮೊದಲು ಈ ಗೌರವಕ್ಕೆ ಪಾತ್ರರಾದವರು ಮಾಜಿ ಪ್ರಧಾನಿ ದಿ. ಲಾಲ್‌ ಬಹದ್ದೂರ್ ಶಾಸ್ತ್ರಿ. 1966ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ: ಮುಗಿದ ಅಧ್ಯಾಯ –ಸಂಸದ ಸುರೇಶ ಅಂಗಡಿ


ನೆಲ್ಸನ್ ಮಂಡೇಲಾ

ವಿದೇಶಿಯರಿಗೂ ನೀಡಲಾಗಿದೆ...
ಸಾಮಾನ್ಯವಾಗಿ ಭಾರತೀಯ ಸಾಧಕರಿಗೆ ಭಾರತ ರತ್ನ ನೀಡಲಾಗುತ್ತಿದೆ. 1980ರಲ್ಲಿ ಮದರ್ ತೆರೆಸಾ ಅವರನ್ನು ಭಾರತೀಯರು ಎಂದು ಪರಿಗಣಿಸಿ ಭಾರತ ರತ್ನ ನೀಡಿದ ಬಳಿಕ ಇಬ್ಬರು ವಿದೇಶಿಯರಿಗೆ ಈ ಗೌರವ ಸಂದಿದೆ. ಅವಿಭಜಿತ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್‌ ಗಫ‌ರ್‌ ಖಾನ್‌ ಅವರಿಗೆ 1987ರಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ 1990ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ: ‘ಭಾರತ ರತ್ನ’ ಕಾಡಿ, ಬೇಡಿ ಪಡೆಯ‌ಬೇಕಿಲ್ಲ -ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ

ಯಾವತ್ತಾದರೂ ಭಾರತ ರತ್ನ ಘೋಷಣೆಯಾಗಿ ರದ್ದಾಗಿತ್ತೇ?

ಹೌದು ಒಂದು ಬಾರಿ ಭಾರತ ರತ್ನ ಘೋಷಣೆಯಾಗಿ ನಂತರ ರದ್ದು ಮಾಡಬೇಕಾದ ಸಂದರ್ಭ ಒದಗಿಬಂದಿತ್ತು. ಅದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ. 1992ರಲ್ಲಿ ಸುಭಾಷ್‌ಚಂದ್ರ ಬೋಸ್‌ಗೆ ಮರಣೊತ್ತರವಾಗಿ ಭಾರತ ರತ್ನ ಗೌರವ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ನೇತಾಜಿಯವರು ಬದುಕಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಇಂತಹ ಸಂದರ್ಭದಲ್ಲಿ ಅವರಿಗೆ ಭಾರತ ರತ್ನ ನೀಡುವ ನಿರ್ಧಾರ ಸರಿಯೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಕೊನೆಗೆ 1997ರಲ್ಲಿನ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಬೋಸ್ ಅವರಿಗೆ ಭಾರತ ರತ್ನ ನೀಡುವ ನಿರ್ಧಾರವನ್ನು ರದ್ದುಗೊಳಿಸಲಾಗಿತ್ತು. ಒಮ್ಮೆ ಒಬ್ಬ ವ್ಯಕ್ತಿಗೆ ಭಾರತ ರತ್ನ ಘೋಷಿಸಿ ನಂತರ ರದ್ದು ಮಾಡಿದ್ದು ಇದೇ ಮೊದಲು ಹಾಗೂ ಕೊನೆಯಾಗಿದೆ.‌

ಇದನ್ನೂ ಓದಿ: ಕೇಂದ್ರ ಸ್ಪಂದಿಸದಿದ್ದರೆ ಸಂಸದರು ಪ್ರತಿಭಟಿಸಲಿ– ಯತ್ನಾಳ

ಇತರ ವಿವಾದಗಳು...

ಭಾರತ ರತ್ನ ನೀಡುವ ವಿಚಾರವೂ ಹಲವು ಬಾರಿ ವಿವಾದಕ್ಕೀಡಾಗಿದೆ. ಸುಭಾಷ್‌ ಚಂದ್ರ ಬೋಸ್ ಪ್ರಕರಣದ ನಂತರ, 2013ರಲ್ಲಿ ವಿಜ್ಞಾನಿ ಸಿ.ಎನ್.ಆರ್. ರಾವ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಘೋಷಣೆಯಾದಾಗ ಆಕ್ಷೇಪ ವ್ಯಕ್ತವಾಗಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಲವಾರು ಮಂದಿ ಕೆಲವು ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೋಮಿ ಭಾಭಾ, ವಿಕ್ರಮ್ ಸರಾಭಾಯಿಯಂತಹ ವಿಜ್ಞಾನಿಗಳು ಸಿ.ಎನ್.ಆರ್. ರಾವ್ ಅವರಿಗಿಂತಲೂ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಅರ್ಜಿಗಳಲ್ಲಿ ಪ್ರತಿಪಾದಿಸಲಾಗಿತ್ತು. ಸಚಿನ್ ತೆಂಡೂಲ್ಕರ್ ಅವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದು, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಚಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು. ಆದರೆ ಕೊನೆಯಲ್ಲಿ, ಎಲ್ಲ ಅರ್ಜಿಗಳನ್ನು ರದ್ದುಪಡಿಸಿದ್ದ ಹೈಕೋರ್ಟ್‌ಗಳು ಮತ್ತು ಚುನಾವಣಾ ಆಯೋಗ ರಾವ್ ಮತ್ತು ಸಚಿನ್ ಕೊಡುಗೆಯನ್ನು ಕೊಂಡಾಡಿದ್ದವು.

ಇದನ್ನೂ ಓದಿ: ಭಾರತ ರತ್ನ, ಶಿವಕುಮಾರ ಶ್ರೀಗಳನ್ನು ಪರಿಗಣಿಸಿ –ಬಾಬಾ ರಾಮ್‌ದೇವ್‌

ಮರಣೊತ್ತರವಾಗಿ ಗೌರವಕ್ಕೆ ಪಾತ್ರರಾದವರು ಯಾರೆಲ್ಲ?

* ಲಾಲ್ ಬಹದ್ದೂರ್ ಶಾಸ್ತ್ರಿ (ಮಾಜಿ ಪ್ರಧಾನಿ)

* ಕುಮಾರಸ್ವಾಮಿ ಕಾಮರಾಜ್ (ತಮಿಳುನಾಡಿನ ಮಾಜಿ ಮುಖ್ಯಮಂತ್ರಿ)

* ವಿನೋಬಾ ಭಾವೆ (ಭೂದಾನ ಚಳವಳಿಯ ಹರಿಕಾರರು)

* ಡಾ. ಎಮ್. ಜಿ. ರಾಮಚಂದ್ರನ್ (ತಮಿಳು ನಟ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ)

* ಡಾ. ಬಿ.ಆರ್.ಅಂಬೇಡ್ಕರ್ (ಸಂವಿಧಾನ ಶಿಲ್ಪಿ)

* ರಾಜೀವ್ ಗಾಂಧಿ (ಮಾಜಿ ಪ್ರಧಾನಿ)

* ಸರ್ದಾರ್ ವಲ್ಲಭಭಾಯ್ ಪಟೇಲ್ (ದೇಶದ ಮೊದಲ ಗೃಹ ಸಚಿವ)

* ಮೌಲಾನಾ ಅಬ್ದುಲ್ ಕಲಮ್ ಆಜಾದ್ (ಸ್ವಾತಂತ್ರ್ಯ ಹೋರಾಟಗಾರ)

* ಅರುಣಾ ಅಸಫ್ ಅಲಿ (ಸ್ವಾತಂತ್ರ್ಯ ಹೋರಾಟಗಾರ)

* ಗೋಪಿನಾಥ್ ಬೋರ್ಡೊಲೋಯಿ (ಸ್ವಾತಂತ್ರ್ಯ ಹೋರಾಟಗಾರ)

* ಮದನ ಮೋಹನ ಮಾಳವೀಯ (ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ)

ಇದನ್ನೂ ಓದಿ: ಬಿಜೆಪಿಯವರು ಹೋರಾಡಿದ್ದರೆ ಶ್ರೀಗಳಿಗೆ ಭಾರತರತ್ನ ಸಿಗುತ್ತಿತ್ತು–ಪ್ರಿಯಾಂಕ್ ಖರ್ಗೆ

ಪ್ರಮುಖರು...

ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು, ವಿಜ್ಞಾನಿ ಸಿ.ವಿ.ರಾಮನ್, ಖ್ಯಾತ ಗಾಯಕಿಯರಾದ ಲತಾ ಮಂಗೇಶ್ಕರ್, ಸುಬ್ಬುಲಕ್ಷ್ಮೀ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ಗಣ್ಯರು ಜೀವಿತಾವಧಿಯಲ್ಲೇ ಭಾರತ ರತ್ನಕ್ಕೆ ಪಾತ್ರರಾಗಿದ್ದಾರೆ.

* ಅತಿ ಕಿರಿಯ ವಯಸ್ಸಿನಲ್ಲೇ ಭಾರತ ರತ್ನಕ್ಕೆ ಪಾತ್ರರಾದವರು – ಸಚಿನ್ ತೆಂಡೂಲ್ಕರ್ (40ನೇ ವಯಸ್ಸಿನಲ್ಲಿ)

* ಭಾರತ ರತ್ನಕ್ಕೆ ಪಾತ್ರರಾದ ಮೊದಲ ಕನ್ನಡಿಗ – ಸರ್.ಎಂ.ವಿಶ್ವೇಶ್ವರಯ್ಯ


ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಚಿನ್ ತೆಂಡೂಲ್ಕರ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು