ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರ ಮಸೂದೆ ಮಂಡನೆ: ಪೋಷಕರನ್ನು ನಿರ್ಲಕ್ಷಿಸಿದರೆ 6 ತಿಂಗಳು ಜೈಲು

Last Updated 12 ಡಿಸೆಂಬರ್ 2019, 10:14 IST
ಅಕ್ಷರ ಗಾತ್ರ

ನವದೆಹಲಿ: ಪೋಷಕರು ಅಥವಾ ಹಿರಿಯ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿರ್ಲಕ್ಷಿಸಿದರೆ, ದೈಹಿಕ ಹಲ್ಲೆ ಮಾಡಿದರೆಇನ್ನು ಮುಂದೆ 6 ತಿಂಗಳು ಜೈಲು ಅಥವಾ ₹10.000 ದಂಡ ಅಥವಾ ಈ ಎರಡು ಶಿಕ್ಷೆಗಳಿಗೆ ಗುರಿಯಾಗಬೇಕಾಗುತ್ತದೆ.

ಪೋಷಕರು ಅಥವಾ ಹಿರಿಯ ನಾಗರಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ 2007ರ ಹಿರಿಯ ನಾಗರಿಕರ ಮಸೂದೆಗೆ ತಿದ್ದುಪಡಿ ತರಲಾಗಿದ್ದು, ಪೋಷಕರು ಹಾಗೂ ಹಿರಿಯ ನಾಗರಿಕರನ್ನು ಪೋಷಿಸುವ,ವೃದ್ಧಾಶ್ರಮಗಳ ನೋಂದಣಿ, ಕಾರ್ಯನಿರ್ವಹಣೆಯಲ್ಲಿ ಏಕರೂಪತೆ ತರುವ ಮತ್ತು ಲಭ್ಯವಿರಬೇಕಾದ ಕನಿಷ್ಠ ಸೌಲಭ್ಯಗಳನ್ನು ನಿಗದಿಪಡಿಸುವ ’ಪೋಷಕರು ಅಥವಾ ಹಿರಿಯ ನಾಗರಿಕರ ಕಲ್ಯಾಣ(ತಿದ್ದುಪಡಿ)ಮಸೂದೆ 2019‘ ಅನ್ನುಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ ಚಂದ್‌ ಗೆಹ್ಲೋಟ್‌ ಲೋಕಸಭೆಯಲ್ಲಿ ಬುಧವಾರ ಮಂಡಿಸಿದರು.

ಪೋಷಕರು ಅಥವಾ ಹಿರಿಯ ನಾಗರಿಕರನ್ನು ನಿಂದಿಸುವುದು, ಅಲಕ್ಷ್ಯ ಮಾಡುವುದು, ದೈಹಿಕವಾಗಿ ಹಲ್ಲೆ, ಮಾನಸಿಕ ಕಿರುಕುಳ, ಅಗತ್ಯ ಸೌಕರ್ಯಗಳನ್ನು ನೀಡದಿರುವುದು ಕೂಡ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ. ಸರಿಯಾಗಿ ನೋಡಿಕೊಳ್ಳದಿರುವಪೋಷಕರ ಅಥವಾ ಹಿರಿಯ ನಾಗರಿಕರ ಮಗ, ಮಗಳು ಅಥವಾ ದತ್ತು ಪುತ್ರ,ದತ್ತು ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.

ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕಾನೂನು ಬಲ ನೀಡಲಾಗಿದೆ. ದೇಶದ ಪ್ರತಿಯೊಂದು ಪೊಲೀಸ್‌ ಠಾಣೆಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯ ಒಬ್ಬರು ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಇವರು ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ.ಪ್ರತಿ ಜಿಲ್ಲೆಯಲ್ಲೂಜಿಲ್ಲಾ ಮಟ್ಟದ ವಿಶೇಷ ಪೊಲೀಸ್‌ ಘಟಕವನ್ನು ರಚಿಸಲಾಗುತ್ತದೆ. ಈ ಘಟಕದ ನೇತೃತ್ವವನ್ನು ಡಿಎಸ್‌ಪಿ ಶ್ರೇಣಿಯ ಪೊಲೀಸ್‌ ಅಧಿಕಾರಿ ವಹಿಸಿಕೊಳ್ಳುತ್ತಾರೆ.

ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಸಮಸ್ಯೆಗಳ ಪರಿಹಾರ ಮತ್ತು ಸಲಹೆಗಳಿಗಾಗಿ ನ್ಯಾಯಾಧೀಕರಣ ಸ್ಥಾಪನೆ ಮಾಡಲಾಗುತ್ತದೆ. 80 ವರ್ಷ ಮೇಲ್ಪಟ್ಟವರುಸಲ್ಲಿಸಿದ ಅರ್ಜಿಗಳನ್ನು 60 ದಿನಗಳ ಒಳಗಾಗಿ ಇತ್ಯರ್ಥ ಮಾಡಬೇಕು. ರಾಜ್ಯ ಸರ್ಕಾರಗಳು ನಿರ್ವಹಣಾ ಅಧಿಕಾರಿಯನ್ನು ನೇಮಿಸಬೇಕು. ಅವರುಪೋಷಕರು ಅಥವಾ ಹಿರಿಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಬೇಕುಎಂದು ಮಸೂದೆಯಲ್ಲಿ ಹೇಳಲಾಗಿದೆ.

ಮಸೂದೆಯಲ್ಲಿ ಪೋಷಕರು ಅಥವಾ ಹಿರಿಯ ನಾಗರಿಕರು ಎಂದರೆ ತಂದೆ, ತಾಯಿ, ಅತ್ತೆ, ಮಾವ, ತಾತ, ಅಜ್ಜಿಎಂದು ವ್ಯಾಖ್ಯಾನಿಸಲಾಗಿದೆ.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು ಇನ್ನು ಚರ್ಚೆಯಾಗಿಲ್ಲ, ಉಭಯ ಸದನಗಳಲ್ಲಿ ಅಂಗೀಕಾರವಾದರೆ ಮಾತ್ರ ಮಸೂದೆ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT