ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವ ಹಾಗೂ ಜೀವನ

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಜೀವನದ ವಾಸ್ತವವನ್ನು ಒಪ್ಪಿಕೊಳ್ಳುವುದನ್ನು ಮನುಷ್ಯ ಅಭ್ಯಾಸ ಮಾಡಿಕೊಳ್ಳಬೇಕು. ತನ್ನನ್ನು, ತನ್ನತನವನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಜೀವನ ಸಾಗಿಸಲು ಒಂದು ಉದ್ದೇಶ ಕಾಣಿಸುತ್ತದೆ. ಉದ್ದೇಶವೇ ಇಲ್ಲದ ಬದುಕು ಅಸಹಜ. ಉದ್ದೇಶವಿದ್ದಾಗ ಮಾತ್ರ ಶಿಸ್ತಿನ ಜೀವನ ಸಾಧ್ಯವಾಗುತ್ತದೆ. ಉದ್ದೇಶವಿದ್ದಾಗಲಷ್ಟೇ ತಾನು ಜೀವನದಲ್ಲಿ ಏನು ಮಾಡಬೇಕು, ಹೇಗೆ ಮಾಡಬೇಕು ಎಂಬ ಅಂಶಗಳ ಅರಿವಾಗುತ್ತದೆ. ಬದುಕಲು ಒಂದು ಉದ್ದೇಶವೇ ಇಲ್ಲದೇ ಬದುಕುತ್ತಿದ್ದರೆ ಐಷಾರಾಮಿ ಜೀವನವೂ ದುಸ್ತರ ಎನ್ನಿಸುತ್ತದೆ. 

ಜೀವನದಲ್ಲಿ ಯಶಸ್ಸು ಹಾಗೂ ಸಂತೋಷ ಸಂಪಾದನೆಯಿಂದ ಮಾತ್ರ ಸಿಗುವಂತಹದ್ದು ಎಂಬುದು ಹಲವರ ಭಾವನೆ. ಸಂಪಾದನೆ ಒಂದಿದ್ದರೆ ಸಾಕು ನಾನು ಜೀವನಪೂರ್ತಿ ನೆಮ್ಮದಿಯಿಂದ ಬದುಕಬಹುದು ಎಂದುಕೊಳ್ಳುವವರು ಹಲವರು. ಆದರೆ ನಾವು ಹಣ ಸಂಪಾದಿಸುವ ಕೆಲಸದಲ್ಲಿ ನಮಗೆ ಖುಷಿಯೇ ಇಲ್ಲ ಎಂದರೆ ಸಂಪಾದಿಸುವ ಹಣಕ್ಕೆ ಮೌಲ್ಯವಿರುವುದಿಲ್ಲ. ಯಾಕೆಂದರೆ ನಾವು ನಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಇಷ್ಟವಿಲ್ಲದ ಕೆಲಸದಲ್ಲಿ ಕೇವಲ ಹಣದ ಹಿಂದೆ ಬಿದ್ದು ಕಳೆದುಕೊಂಡಿರುತ್ತೇವೆ. ಹಣವಷ್ಟೇ ನೆಮ್ಮದಿ ನೀಡುವುದು ಎಂದುಕೊಂಡು ನಮಗೆ ತಿಳಿಯದಂತೆ ಬದುಕಿನ ಅದೆಷ್ಟೋ ಅಮೂರ್ತ ಗಳಿಗೆಗಳನ್ನು ಕಳೆದಿರುತ್ತೇವೆ.

ಇನ್ನು, ನಾವು ಹಿಡಿದ ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ಈ ಕೆಲಸದ ಬಗ್ಗೆ ನಮ್ಮಲ್ಲಿ ಆಸಕ್ತಿ ಇರಬೇಕು; ಅಲ್ಲದೇ ಅದರಲ್ಲಿ ಹೊಸತನದ ತುಡಿತವಿರಬೇಕು. ನಮ್ಮ ಮಾಡುವ ಕೆಲಸ ಮೊದಲು ನಮಗೆ ಸಂತಸ ತರಬೇಕು. ಯಾವುದೋ ಒತ್ತಡಕ್ಕೆ ಸಿಲುಕಿ, ತರಾತುರಿಯಲ್ಲಿ ಕೆಲಸ ಮಾಡಲು ಹೊರಟರೆ ಅಚಾತುರ್ಯಗಳೇ ಸಂಭವಿಸುತ್ತವೆ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ‘ಈ ಕೆಲಸ ನನ್ನ ನೆಚ್ಚಿನದ್ದು. ಇದರಲ್ಲಿ ನಾನು ಯಶಸ್ಸು ಗಳಿಸುತ್ತೇನೆ, ಯಾರು ಈ ಕೆಲಸಕ್ಕೆ ಅಡ್ಡಿಬಂದರೂ ನಾನು ತಲೆ ಕಡೆಸಿಕೊಳ್ಳುವುದಿಲ್ಲ’ ಎಂದು ಧೈರ್ಯದಿಂದ ಮುನ್ನುಗುವ ಮನೋಭಾವ ನಮ್ಮದಾಗಬೇಕು.

ಹೀಗೆ ಜೀವನದಲ್ಲಿ ವಾಸ್ತವನ್ನು ಅರಿತುಕೊಂಡು ಬದುಕಿದಷ್ಟು ಸಂತಸಕರ ಜೀವನ ನಮ್ಮದಾಗುತ್ತದೆ. ಸ್ವಂತಿಕೆ ಇಲ್ಲದೇ ಯಾರದ್ದೋ ಇಷ್ಟಕ್ಕೋ, ಒತ್ತಾಯಕ್ಕೋ ಮಣಿದು ಸಾವಿರ ಗಂಟೆಗಳ ಕಾಲ ಕೆಲಸ ಮಾಡುವುದಕ್ಕಿಂತ ಸ್ವಂತಿಕೆಯಿಂದ ಒಂದು ಗಂಟೆ ಕೆಲಸ ಮಾಡಿದರೂ ಅದರಲ್ಲಿ ನಾವು ಖುಷಿ ಕಾಣಲು ಸಾಧ್ಯ.

ಎಚ್. ಎಂ. ವಿಶ್ವನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT