ಮಂಗಳವಾರ, ಮೇ 18, 2021
28 °C

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು: ಅಮಿತ್ ಶಾ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಬಿಜೆಪಿ ಬಯಕೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಟಿವಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಪ್ರತಿದಿನ ವಿಚಾರಣೆ ನಡೆಸಿ ಹತ್ತು ದಿನಗಳ ಒಳಗೆ ತೀರ್ಪು ನೀಡಬೇಕು ಎಂದು ಹೇಳಿದ್ದಾರೆ.

‘2019ರ ಜನವರಿಯಲ್ಲಿ ವಿಚಾರಣೆ ಆರಂಭವಾಗುವ ವಿಶ್ವಾಸವಿದೆ. ತೀರ್ಪು ಏನೇ ಇರಲಿ ಅದನ್ನು ಸುಪ್ರೀಂ ಕೋರ್ಟ್‌ ಬೇಗನೇ ಪ್ರಕಟಿಸಬೇಕು. ಕೇವಲ ನನ್ನ ಪಕ್ಷ ಮಾತ್ರವಲ್ಲ, ಕೋಟ್ಯಂತರ ಜನ ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗುವುದನ್ನು ಬಯಸುತ್ತಿದ್ದಾರೆ’ ಎಂದು ಶಾ ಹೇಳಿದ್ದಾರೆ.

ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು 2019ರ ಜನವರಿಯಲ್ಲಿ ಸೂಕ್ತ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ ಎಂದು ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಇದರಿಂದ, ವೇಗವಾಗಿ ಪ್ರಕರಣದ ಇತ್ಯರ್ಥವಾಗಬೇಕು ಎಂದು ಬಯಸಿದ್ದ ಬಿಜೆಪಿಯ ಹಲವು ನಾಯಕರಿಗೆ ಹಿನ್ನಡೆಯಾಗಿತ್ತು. ಮತ್ತೊಂದೆಡೆ, 2019ರ ಲೋಕಸಭಾ ಚುನಾವಣೆ ನಂತರವೇ ಅಯೋಧ್ಯೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

‘ಅಯೋಧ್ಯೆಯದ್ದು ಭೂವಿವಾದ. 2014ಕ್ಕಿಂತಲೂ ಬಹಳ ಮೊದಲೇ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಈ ಪ್ರಕರಣಕ್ಕೆ ಆದ್ಯತೆ ನೀಡುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ’ ಎಂದು ಶಾ ತಿಳಿಸಿದ್ದಾರೆ.

ಶಬರಿಮಲೆ ಪ್ರಕರಣ ನಂಬಿಕೆಗೆ ಸಂಬಂಧಿಸಿದ್ದು: ಶಬರಿಮಲೆ ದೇಗುಲ ಪ್ರವೇಶಕ್ಕೆ ಎಲ್ಲ ವಯಸ್ಸಿನ ಸ್ತ್ರೀಯರಿಗೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಶಾ, ಧಾರ್ಮಿಕ ನೆಲೆಗಟ್ಟಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ ಪರಾಮರ್ಶೆ ಸಲ್ಲ ಎಂದು ಹೇಳಿದ್ದಾರೆ. ‘ಶಬರಿಮಲೆ ಪ್ರಕರಣ ಲಿಂಗ ತಾರತಮ್ಯಕ್ಕೆ ಸಂಬಂಧಿಸಿದ್ದಲ್ಲ, ನಂಬಿಕೆಗೆ ಸಂಬಂಧಿಸಿದ್ದು. ನ್ಯಾಯಾಂಗದ ಪರಾಮರ್ಶೆ ಸಾಧ್ಯವಾಗದ ಇಂತಹ ಅನೇಕ ಪ್ರಕರಣಗಳಿವೆ. ಇವುಗಳನ್ನು ಜನರಿಗೇ ಬಿಟ್ಟುಬಿಡಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು