ಗುರುವಾರ , ಏಪ್ರಿಲ್ 15, 2021
30 °C
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಂದುವರಿದ ಪ್ರತಿಭಟನೆ: 12 ಪೊಲೀಸರು ಸೇರಿ 21 ಮಂದಿಗೆ ಗಾಯ

ದೆಹಲಿ: ಹಿಂಸೆಗಿಳಿದ ‘ಅಗೋಚರ ಗುಂಪು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ದೆಹಲಿಯಲ್ಲಿ ಮಂಗಳವಾರವೂ ಹಿಂಸೆಗೆ ತಿರುಗಿತು. ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದರು ಮತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದರು. ಒಂದು ಪೊಲೀಸ್‌ ಚೌಕಿಯನ್ನು ಧ್ವಂಸ ಮಾಡಲಾಗಿದೆ. ಬಸ್‌ಗಳ ಗಾಜುಗಳನ್ನು ಪುಡಿಗಟ್ಟಲಾಗಿದೆ. ಜನರನ್ನು ಚದುರಿಸುವುದಕ್ಕಾಗಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ ಮತ್ತು ಲಾಠಿ ಪ್ರಹಾರ ಮಾಡಿದ್ದಾರೆ.

ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಸುಮಾರು 90 ನಿಮಿಷ ಮುಖಾಮುಖಿ ನಡೆಯಿತು. ನಾಲ್ಕರಿಂದ ಐದು ಸಾವಿರ ಜನರಿದ್ದ ‘ಅಗೋಚರ ಗುಂಪು’ ಸಂಘರ್ಷಕ್ಕೆ ಇಳಿಯಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಹಾಗಿದ್ದರೂ ಉದ್ವಿಗ್ನ ಪರಿಸ್ಥಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈಶಾನ್ಯ ದೆಹಲಿಯ ಸೀಲಂಪುರ ದಲ್ಲಿ ಮಂಗಳವಾರ ಸಂಜೆ ಈ ಸಂಘರ್ಷ ನಡೆಯಿತು. ಇದರಲ್ಲಿ 21 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 12 ಪೊಲೀಸರೂ ಸೇರಿದ್ದಾರೆ. ಪ್ರತಿಭಟನಕಾರರನ್ನು ನಿಯಂತ್ರಿಸಲು ಗುಂಡು ಹಾರಿಸಿಲ್ಲ ಎಂದು ಪೊಲೀಸ್‌ ಜಂಟಿ ಆಯುಕ್ತ ಅಲೋಕ್‌ ಕುಮಾರ್‌ ಹೇಳಿದ್ದಾರೆ. 

ಮಧ್ಯಾಹ್ನ 2 ಗಂಟೆಗೆ ಪ್ರತಿಭಟನೆ ಆರಂಭವಾಗಬೇಕಿತ್ತು. ಆದರೆ, 1.15ರ ಹೊತ್ತಿಗೆ ಜನರು ಸೇರಿದರು. ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿಯೇ ಇತ್ತು. ಆದರೆ, ಅರ್ಧ ಗಂಟೆ ಬಳಿಕ ಚೆದುರಿ ಹೋಗುವಂತೆ ಜನರಿಗೆ ಸೂಚಿಸಿದಾಗ ಅವರು ವ್ಯಗ್ರರಾದರು ಎಂದು ಪೊಲೀಸರು ಹೇಳಿದ್ದಾರೆ. 

ವಾಪಸ್‌ ಕರೆಸಿಕೊಳ್ಳಲು ಬಾಂಗ್ಲಾ ಸಿದ್ಧ

ಕೋಲ್ಕತ್ತ: ‘ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದರ ಬಗ್ಗೆ ಸಾಕ್ಷ್ಯಾಧಾರಗಳನ್ನು ನೀಡಿದರೆ ಅಂಥವರನ್ನು ವಾಪಸ್‌ ಕರೆಯಿಸಿಕೊಳ್ಳಲು ಸಿದ್ಧ’ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಕ್‌ ಹಸೀನಾ ಅವರ ಸಲಹೆಗಾರ ಗೌಹರ್‌ ರಿಝ್ವಿ ಹೇಳಿದ್ದಾರೆ.

ಪಾಕ್‌ಗೆ ತಿರುಗೇಟು

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪಾಕಿಸ್ತಾನದ ಸಂಸತ್ತಿನಲ್ಲಿ ಅಂಗೀಕರಿಸಿದ್ದ ನಿರ್ಣಯವನ್ನು ಭಾರತ ವಿರೋಧಿಸಿದೆ. ‘ಪಾಕಿಸ್ತಾನವು ತನ್ನದೇ ನೆಲದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳತ್ತ ಗಮನಹರಿಸುವುದು ಅಗತ್ಯ’ ಎಂದು ಭಾರತ ತಿರುಗೇಟು ನೀಡಿದೆ.

ಅಮೆರಿಕ: ವಿದ್ಯಾರ್ಥಿಗಳ ಆಕ್ರೋಶ

ಜಾಮಿಯಾ ಮತ್ತು ಅಲೀಗಡ ವಿ.ವಿ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳಿ ಇಲ್ಲವೇ ರಾಜೀನಾಮೆ ಕೊಡಿ ಎಂದು ಅಮೆರಿಕದ ಪ‍್ರತಿಷ್ಠಿತ ವಿಶ್ವವಿದ್ಯಾಲಯಗಳ ಭಾರತ ಮೂಲದ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಆಗ್ರಹಿಸಿದ್ದಾರೆ.  ಪ್ರತಿಭಟನೆಯನ್ನು ಕೇವಲ ದೊಂಬಿ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರು ಬಣ್ಣಿಸಿರುವುದಕ್ಕೂ ಹಾರ್ವರ್ಡ್‌, ಕೊಲಂಬಿಯಾ, ಷಿಕಾಗೊ, ಯೇಲ್‌ ಮತ್ತು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ಇದು ವಿದೇಶಿಯರಿಗೆ ಅನ್ವಯವಾಗುವ ಕಾನೂನೇ ವಿನಾ ಭಾರತೀಯ ನಾಗರಿಕರಿಗಲ್ಲ. ಉದ್ದೇಶಪೂರ್ವಕವಾಗಿ ತಪ್ಪು ತಿಳಿವಳಿಕೆಯನ್ನು ಬಿತ್ತಿ ಜನರನ್ನು ಪ್ರಚೋದಿಸಲಾಗುತ್ತಿದೆ.

- ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಈಶಾನ್ಯದಲ್ಲಿ ಶಾಂತಿ, ಬಂಗಾಳದಲ್ಲಿ ಪ್ರತಿಭಟನೆ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿನ ಪ್ರತಿಭಟನೆಯು ಐದನೇ ದಿನವೂ ಮುಂದುವರಿದಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ರೈಲು, ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಾಗೂ ಗಲಭೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ 354 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಅಸ್ಸಾಂ ಸಹಜ ಸ್ಥಿತಿಗೆ ಮರಳುತ್ತಿದ್ದು, ಗುವಾಹಟಿಯಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ.  

ಕೇರಳ, ತಮಿಳುನಾಡು, ತೆಲಂಗಾಣ ಹಾಗೂ ದೇಶದ ಇನ್ನೂ ಕೆಲ ರಾಜ್ಯಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆದಿದೆ.

ಎಬಿವಿಪಿ ಪ್ರತಿಭಟನೆ: ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ದೆಹಲಿ ವಿಶ್ವವಿದ್ಯಾಲಯದದಲ್ಲಿ ಪ್ರತಿಭಟನೆ ನಡೆಸಲಾಗಿದೆ. ವಿ.ವಿ. ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ಆಯೋಜಿಸಿದ್ದರು. ಕಾಯ್ದೆಯ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರಮಾಡುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 

ನೋಟು ರದ್ದತಿಯು ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿತ್ತು. ಪೌರತ್ವ ಮಸೂದೆಯು ಸಂವಿಧಾನದ ಬೆನ್ನ ಮೂಳೆಯನ್ನು ಮುರಿಯುತ್ತಿದೆ, ನಮ್ಮ ಕಾಲ ಕೆಳಗಿನ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ

- ಅರುಂಧತಿ ರಾಯ್‌, ಲೇಖಕಿ, ಹೋರಾಟಗಾರ್ತಿ

ಸನ್ಯಾಸಿಯು ಲೈಂಗಿಕತೆಯ ಬಗ್ಗೆ ಸಲಹೆ ನೀಡಬಾರದು. ಹಾಗೆಯೇ ಕಾಲೇಜು ಮೆಟ್ಟಿಲನ್ನು ಹತ್ತದ ರಾಜಕಾರಣಿಗಳು ವಿದ್ಯಾರ್ಥಿ ಚಟುವಟಿಕೆಗಳ ಬಗ್ಗೆ ಸಲಹೆ ನೀಡಬಾರದು

- ದೇವದತ್ತ ಪಟ್ನಾಯಕ್‌, ಲೇಖಕ

ಅನುಮತಿ ಇಲ್ಲದೆಯೇ ಜಾಮಿಯಾ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸುವ ಮೂಲಕ ಪ್ರತಿ ವಿಶ್ವವಿದ್ಯಾಲಯಕ್ಕೂ ಅಪಾಯಕಾರಿಯಾಗಬಲ್ಲಂಥ ಸಂಪ್ರದಾಯಕ್ಕೆ ಪೊಲೀಸರು ನಾಂದಿ ಹಾಡಿದ್ದಾರೆ

- ಜಾವೇದ್‌ ಅಖ್ತರ್‌, ಲೇಖಕ

ಪೌರತ್ವ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ. ನಮ್ಮ ಸಂಸ್ಕೃತಿಯು ದ್ವೇಷವನ್ನು ಕಲಿಸುವುದಿಲ್ಲ. ಭಾರತದಲ್ಲಿರುವ ಪ್ರತಿ ಮುಸಲ್ಮಾನನನ್ನು ನನ್ನ ಕುಟುಂಬದ ಸದಸ್ಯ ಎಂದು ನಾನು ಪರಿಗಣಿಸುತ್ತೇನೆ

- ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು