ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಸಿಎಎ ವಿರೋಧಿ ಪ್ರತಿಭಟನಾ ಸ್ಥಳದಲ್ಲಿ ಘರ್ಷಣೆ, ಕಲ್ಲುತೂರಾಟ

Last Updated 23 ಫೆಬ್ರುವರಿ 2020, 13:02 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಈಶಾನ್ಯ ದೆಹಲಿಯ ಜಫರಾಬಾದ್ ಸಮೀಪದ ಮೌಜ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮಧ್ಯೆ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆಸಿದ್ದಾರೆ.

ಕಳೆದ ರಾತ್ರಿಯಿಂದಲೂ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳೀಯ ಬಿಜೆಪಿ ಮುಖಂಡರು ಕಾನೂನಿನ ಪರವಾಗಿ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದರಿಂದ ಘರ್ಷಣೆ ಉಂಟಾಗಿದೆ.

ಪ್ರತಿಭಟನಾಕಾರರು ರಸ್ತೆಯ ಉದ್ದಕ್ಕೂ ಪರಸ್ಪರ ಕಲ್ಲುಗಳನ್ನು ಎಸೆಯುತ್ತಿರುವುದು ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.ಪೊಲೀಸ್ ಬ್ಯಾರಿಕೇಡ್‌ಗಳ ಹತ್ತಿರ ಪ್ರತಿಭಟನಾಕಾರರು ನಿಂತಿದ್ದಾರೆ.

ಪ್ಯಾರಾ ಮಿಲಿಟರಿ ಸಿಬ್ಬಂದಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸಿದ ಪೊಲೀಸರು, ಜನಸಮೂಹವನ್ನು ನಿಯಂತ್ರಣಕ್ಕೆ ತರಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಆದರೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರೂ ಕೂಡ ಪ್ರತಿಭಟನಾಕಾರರನ್ನು ಸಂಪೂರ್ಣವಾಗಿ ಚದುರಿಸಲಾಗಿಲ್ಲ.

ಸಿಎಎ ವಿರೋಧಿ ಪ್ರತಿಭಟನಾಕಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುವುದರಿಂದ ಪೊಲೀಸರು ಹೆಚ್ಚಿನ ಬಲ ಪ್ರಯೋಗಿಸಲು ಸಾಧ್ಯವಾಗಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಈಶಾನ್ಯ ದೆಹಲಿಯ ಜಫರಾಬಾದ್ ಮೆಟ್ರೋ ರೈಲು ನಿಲ್ದಾಣದ ಸಮೀಪ ಸುಮಾರು 500 ಮಹಿಳೆಯರು ಶನಿವಾರ ರಾತ್ರಿಯಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ. ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ತಡರಾತ್ರಿಯಿಂದಲೇ ಆರಂಭವಾದ ಪ್ರತಿಭಟನೆಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

'ಸಿಎಎ, ಎನ್‌ಆರ್‌ಸಿಯಿಂದ ನಮಗೆ ಸ್ವಾತಂತ್ರ್ಯ ಬೇಕು' ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ. ಮೆಟ್ರೋ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಇಂದು ಮುಂಜಾನೆಯಿಂದ ಮುಚ್ಚಲಾಗಿದೆ.

'ಮೋದಿಯನ್ನು ಸೋಲಿಸಲು ಹೋರಾಡಲಾಗದ ವಿಪಕ್ಷಗಳು ಈ ಪ್ರತಿಭಟನೆಯನ್ನು ಆಯೋಜಿಸಿವೆ. ಪೌರತ್ವ ತಿದ್ದುಪಡಿ ಕಾನೂನು ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ ಮತ್ತು ಅದರ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ' ಎಂದು ಬಿಜೆಪಿಯ ವಿಜಯ್ ಗೋಯಲ್ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT