ಬುಧವಾರ, ಅಕ್ಟೋಬರ್ 21, 2020
25 °C
ಕೇಂದ್ರ ಸಂಪುಟದ ಮಾಜಿ ಕಾರ್ಯದರ್ಶಿ ಚತುರ್ವೇದಿ ಆರೋಪ

ನಷ್ಟವನ್ನು ಉತ್ಪ್ರೇಕ್ಷಿಸಿದ್ದ ವಿನೋದ್ ರಾಯ್‌

ಶೆಮಿನ್‌ ಜಾಯ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸಂಪುಟದ ಮಾಜಿ ಕಾರ್ಯದರ್ಶಿ ಬಿ.ಕೆ. ಚತುರ್ವೇದಿ ಅವರು ಆಗಿನ ಮಹಾಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ವಿರುದ್ಧ ಹರಿಹಾಯ್ದಿದ್ದಾರೆ. ನಷ್ಟವನ್ನು ಉತ್ಪ್ರೇಕ್ಷಿಸಲು ಅವರು ಬಯಸಿದ್ದರು. ತಮ್ಮ ವರದಿಗಳನ್ನು ಸಂಸತ್‌ ಸಮಿತಿಯು ಪರಿಶೀಲನೆಗೆ ಒಳಪಡಿಸಬೇಕು ಎಂಬುದನ್ನು ನಿರ್ಲಕ್ಷಿಸಿ ಜನರನ್ನೇ ತಮ್ಮ ಪ್ರೇಕ್ಷಕರು ಎಂದು ಪರಿಗಣಿಸಿದ್ದರು ಎಂದು ಚತುರ್ವೇದಿ ಆರೋಪಿಸಿದ್ದಾರೆ.

‘ಚಾಲೆಂಜಸ್‌ ಆಫ್‌ ಗವರ್ನೆನ್ಸ್‌: ಅ್ಯನ್‌ ಇನ್‌ಸೈಡರ್ಸ್‌ ವ್ಯೂ’ ಎಂಬ ಪುಸ್ತಕದಲ್ಲಿ ಚತುರ್ವೇದಿ ಅವರು ಈ ಆರೋಪ ಮಾಡಿದ್ದಾರೆ. ತಮ್ಮ ಲೆಕ್ಕಪರಿಶೋಧನಾ ವರದಿಗಳ ಮೂಲಕ ಅವರು ನೀತಿ ನಿರೂಪಣೆಯ ಕೆಲಸದಲ್ಲಿ ತೊಡಗಿದ್ದರು. ಸರ್ಕಾರದ ನೀತಿಗಳು ಯಾವ ರೀತಿ ಇರಬೇಕು ಎಂದು ಮೊದಲಿಗೆ ಅವರು ಅಂದಾಜಿಸುತ್ತಿದ್ದರು. ಈ ನೀತಿಯನ್ನು ಅನುಸರಿಸದೇ ಇದ್ದ ಕಾರಣಕ್ಕೆ ಖಾಸಗಿ ಸಂಸ್ಥೆಗಳಿಗೆ ಇಷ್ಟೊಂದು ಲಾಭವಾಗಿದೆ ಎಂದು ಲೆಕ್ಕ ಹಾಕಿ ವರದಿ ಸಿದ್ಧಪಡಿಸುತ್ತಿದ್ದರು ಎಂದು ಚತುರ್ವೇದಿ ಆರೋಪಿಸಿದ್ದಾರೆ.

‘ಭ್ರಷ್ಟಾಚಾರವನ್ನು ಗುರುತಿಸುವುದು ಅಥವಾ ವ್ಯವಸ್ಥೆಯನ್ನು ಸರಿಪಡಿಸುವುದು ಅಥವಾ ಇನ್ನಾವುದೇ ಮಹತ್ವದ ಕಾರ್ಯ ಇರಲಿ, ಯಾವುದೇ ಸಂಸ್ಥೆ ತನ್ನ ಮಿತಿಯನ್ನು ಮೀರಬಾರದು. 2007ರಿಂದ 2014ರ ನಡುವಣ ಅವಧಿಯು ಪ್ರಕ್ಷುಬ್ಧತೆಯಿಂದ ಕೂಡಿತ್ತು. ಸಂಸ್ಥೆಗಳು ತಮ್ಮ ಎಲ್ಲೆಗಳನ್ನು ಮೀರಿ ಕಾರ್ಯಾಂಗದ ವ್ಯಾಪ್ತಿಯನ್ನು ಪ್ರವೇಶಿಸಿದ್ದವು’ ಎಂದು ಅವರು ಹೇಳಿದ್ದಾರೆ.

‘ಕಲ್ಲಿದ್ದಲು ಮತ್ತು ತರಂಗಾಂತರಕ್ಕೆ ಸಂಬಂಧಿಸಿದ ಎರಡು ವರದಿಗಳಲ್ಲಿ ಸಿಎಜಿ, ಸರ್ಕಾರದ ಆರ್ಥಿಕ ನೀತಿ ನಿರೂಪಕನ ಪಾತ್ರ ವಹಿಸಿತು. ಬಳಿಕ ನಷ್ಟವನ್ನು ಲೆಕ್ಕ ಹಾಕಿತು. ಇದು ಅತ್ಯಂತ ಅಪಾಯಕಾರಿಯಾದ ಧೋರಣೆ. ಆಡಳಿತದ ಎಲ್ಲ ನಿಯಮಗಳ ಉಲ್ಲಂಘನೆ’ ಎಂದು ಅವರು ಪ್ರತಿಪಾದಿಸಿದ್ದಾರೆ. ಚತುರ್ವೇದಿ ಅವರು 2007ರಲ್ಲಿ ಸಂಪುಟ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದರು. ಬಳಿಕ ಅವರನ್ನು ಯೋಜನಾ ಆಯೋಗದ ಸದಸ್ಯರಾಗಿ ನೇಮಿಸಲಾಗಿತ್ತು. 

ಸಿಎಜಿ ವರದಿಯಲ್ಲಿದ್ದ ಅಸಂಗತ ಅಂಶಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ತಾವು ಪ್ರತಿಪಾದಿಸಿದ ನೀತಿಯನ್ನು ಸರ್ಕಾರ ಅನುಸರಿಸಿದ್ದರೆ ಬೊಕ್ಕಸಕ್ಕೆ ಇಷ್ಟು ಲಾಭವಾಗುತ್ತಿತ್ತು ಎಂದಷ್ಟೇ ಸಿಎಜಿ ವರದಿ ಹೇಳುತ್ತಿದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಈ ಬೆಳವಣಿಗೆ ದೀರ್ಘಾವಧಿಯಲ್ಲಿ ನಮ್ಮ ಸಮಾಜ, ರಾಜಕಾರಣ ಮತ್ತು ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.  

ತರಂಗಾಂತರ ಶುಲ್ಕವನ್ನು ಯುಪಿಎ ಸರ್ಕಾರವು ಹೆಚ್ಚಿಸಬೇಕಿತ್ತು ಎಂಬ ವಾದದಲ್ಲಿ ಅರ್ಥವಿದೆ. ಹಾಗೆಯೇ, ಕಲ್ಲಿದ್ದಲು ನಿಕ್ಷೇಪಗಳನ್ನು ಇರಿಸಿಕೊಂಡಿದ್ದ ಮಾಲೀಕರಿಗೆ, ಇತರರಿಗೆ ಹೋಲಿಸಿದರೆ ಇದ್ದ ಅನುಕೂಲಗಳನ್ನು ರದ್ದು ಮಾಡಬೇಕಿತ್ತು ಎಂಬುದೂ ಮೌಲಿಕ. ಲೆಕ್ಕಪರಿಶೋಧಕರು ಅಥವಾ ನ್ಯಾಯಾಲವು ಸರ್ಕಾರದ ನೀತಿಯನ್ನು ಟೀಕಿಸಬಹುದು, ಸಲಹೆಗಳನ್ನು ನೀಡಬಹುದು. ಆದರೆ, ಸರ್ಕಾರದ ನೀತಿ ಹೀಗೆಯೇ ಇರಬೇಕು ಎಂದು ಹೇಳುವುದು ಅನಾರೋಗ್ಯಕರ ಎಂದು ಅವರು ಹೇಳಿದ್ದಾರೆ. 

ತರಂಗಾಂತರ ಹಂಚಿಕೆ ಬಗ್ಗೆ ಸಿಎಜಿ, 2010ರ ನವೆಂಬರ್‌ನಲ್ಲಿ ವರದಿ ಸಲ್ಲಿಸಿತ್ತು. ಸರ್ಕಾರದ ನೀತಿಯಿಂದಾಗಿ ಬೊಕ್ಕಸಕ್ಕೆ ₹1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಿತ್ತು. 

***

ಸಿಎಜಿ ವರದಿಯ ಧೋರಣೆ ಬಗ್ಗೆ ನನಗೆ ಗಂಭೀರ ಭಿನ್ನಾಭಿಪ್ರಾಯ ಇದೆ. ನೀತಿಯನ್ನು ಸಿಎಜಿ ತಾನೇ ರೂಪಿಸಿತ್ತು. ಅದರ ಪ್ರಕಾರ ಸರ್ಕಾರ ನಡೆದುಕೊಳ್ಳದ್ದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಹೇಳಿತ್ತು

ಬಿ.ಕೆ. ಚತುರ್ವೇದಿ, ಕೇಂದ್ರ ಸಂಪುಟದ ಮಾಜಿ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು