ಶನಿವಾರ, ಜೂನ್ 19, 2021
26 °C

ಮೋದಿ ಧ್ಯಾನಕ್ಕೆ ಕುಳಿತ ಗುಹೆಯಲ್ಲಿ ಅತ್ಯಾಧುನಿಕ ಸೌಕರ್ಯ; ದಿನದ ಬಾಡಿಗೆ ₹990 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್: ಉತ್ತರಾಖಂಡದ  ಕೇದಾರನಾಥದ ಗುಹೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನಕ್ಕೆ ಕುಳಿತಿದ್ದು, ಮೋದಿ ಧ್ಯಾನದ ಚಿತ್ರ ಶನಿವಾರ ವೈರಲ್ ಆಗಿತ್ತು.

ಗುಹೆಯಲ್ಲಿ ಧ್ಯಾನಮಗ್ನರಾಗಿರುವ ಮೋದಿ, ಗುಹೆಯ ಒಂದು ಬದಿಯಲ್ಲಿ ಹ್ಯಾಂಗರ್ - ಇದೆನ್ನೆಲ್ಲಾ ನೋಡಿ ಇದೆಂಥಾ ಗುಹೆ ಎಂದು ನೆಟ್ಟಿಗರು ಚರ್ಚಿಸಿದ್ದರು. ಅಂದಹಾಗೆ ಮೋದಿ ಧ್ಯಾನಕ್ಕೆ ಕುಳಿತಿರುವ ಗುಹೆಯಲ್ಲಿ ಅತ್ಯಾಧುನಿಕ ಸೌಕರ್ಯಗಳು ಇವೆ. ಈ ಗುಹೆಯ ಬಾಡಿಗೆ ದಿನಕ್ಕೆ ₹990! 

ಧ್ಯಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕಳೆದ ವರ್ಷ ಕೇದಾರನಾಥದಲ್ಲಿ ಧ್ಯಾನ ಗುಹೆಗಳನ್ನು ನಿರ್ಮಿಸಲಾಗಿತ್ತು.  ಗಡ್‌ವಾಲ್ ಮಂಡಲ್ ವಿಕಾಸ್ ನಿಗಮವು (ಜಿಎಂವಿಎನ್) ಈ ಗುಹೆಗಳನ್ನು ನಿರ್ಮಿಸಿದ್ದು, ಈ ವರ್ಷ ಗುಹೆಯ ಬಾಡಿಗೆ ಕಡಿಮೆ ಮಾಡಿದೆ.

ಕೇದಾರನಾಥ ದೇವಾಲಯದ ಸುತ್ತಲಿನ ಜಾಗದಲ್ಲಿ ರುದ್ರಾ ಧ್ಯಾನ ಗುಹೆಗಳನ್ನು ನಿರ್ಮಿಸಲು ಮೋದಿಯವರೇ ಸಲಹೆ ನೀಡಿದ್ದರು ಅಂತಾರೆ ಜಿಎಂವಿಎನ್ ಅಧಿಕಾರಿಗಳು. ಈ ಧ್ಯಾನ ಗುಹೆಯ ಬಾಡಿಗೆ ದಿನಕ್ಕೆ ₹3000 ಇತ್ತು. ಆದರೆ ಕಳೆದ ವರ್ಷ ಗುಹೆಯಲ್ಲಿ ಧ್ಯಾನ ಮಾಡಲು ಬಂದ ಜನರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಬಾಡಿಗೆ ದಿನಕ್ಕೆ ₹990 ಮಾಡಲಾಗಿತ್ತು.

ಗುಹೆ ನಿರ್ಮಾಣವಾಗಿ ಮೊದಲ ಬಾರಿ ಬುಕ್ಕಿಂಗ್ ಆರಂಭಿಸಿದಾಗ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿಲ್ಲ. ಹವಾಮಾನವೂ ತಂಪಾಗಿತ್ತು, ಬಾಡಿಗೆಯೂ ಜಾಸ್ತಿಯಾಗಿದ್ದ ಕಾರಣ ಪ್ರವಾಸಿಗರು ಬರಲಿಲ್ಲ ಎಂದು ಜಿಎಂವಿಎನ್ ಜನರಲ್ ಮ್ಯಾನೇಜರ್  ಬಿಎಲ್ ರಾಣಾ ಹೇಳಿದ್ದಾರೆ.

ಈ ಹಿಂದೆ ಗುಹೆ ಕಾಯ್ದಿರಿಸುವುದಾದರೆ ಪ್ರವಾಸಿಗರು ಮೂರು ದಿನಗಳಿಗಾಗಿ ಬುಕ್ಕಿಂಗ್ ಮಾಡಬೇಕಿತ್ತು. ಆದರೆ ಇದಕ್ಕೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಲಭಿಸಲಿಲ್ಲ. ಹಾಗಾಗಿ ಈ ರೀತಿಯ ಬುಕ್ಕಿಂಗ್‌ನ್ನು ಈ ವರ್ಷ ರದ್ದು ಮಾಡಲಾಗಿದೆ.

ಗುಹೆಯಲ್ಲಿ ಏನೇನಿದೆ? 
ವಿದ್ಯುತ್, ಕುಡಿಯುವ ನೀರು, ವಾಶ್‍ರೂಂ ಎಲ್ಲವೂ ಗುಹೆಯೊಳಗೆ ಇದೆ. ಗುಹೆಯ ಹೊರಭಾಗವು ಕಲ್ಲಿನಿಂದ ನಿರ್ಮಿಸಿದ್ದು, ಮರದಿಂದ ಮಾಡಿದ ಬಾಗಿಲು ಇದೆ. ಗುಹೆಯೊಳಗಿರುವವರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ, ಎರಡು ಹೊತ್ತು ಚಹಾ ನೀಡಲಾಗುತ್ತದೆ.  24X7  ಸಹಾಯಕರು ಲಭ್ಯವಾಗಿದ್ದು,  ಗುಹೆಯೊಳಗೆ ಕರೆಗಂಟೆಯೂ ಇದೆ.

ಗುಹೆಯೊಳಗೆ ಒಬ್ಬರಿಗೆ ಮಾತ್ರ ಪ್ರವೇಶವಿದೆ. ಏಕಾಂತದಲ್ಲಿರಲು ಎಲ್ಲ ಸೌಕರ್ಯಗಳು ಇಲ್ಲಿದ್ದರೂ  ತುರ್ತು ಸಂದರ್ಭಕ್ಕಾಗಿ ಫೋನ್ ಕೂಡಾ ಗುಹೆಯೊಳಗೆ ಇದೆ. ಪ್ರಧಾನಿ ಮೋದಿ ಗುಹೆಯಲ್ಲಿ ಧ್ಯಾನಮಗ್ನರಾಗಿರುವುದರಿಂದ  ಸಿಸಿಟಿವಿಯನ್ನೂ ಇಲ್ಲಿ ಅಳವಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು