ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಕಿತ್ತಾಟ: ಸಿಬಿಐ ಘನತೆಗೆ ಕುತ್ತು

Last Updated 23 ಅಕ್ಟೋಬರ್ 2018, 19:12 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಯನ್ನು (ಸಿಬಿಐ) ‘ಪಂಜರದೊಳಗಿನ ಗಿಣಿ’ ಎಂದು ಸುಪ್ರೀಂ ಕೋರ್ಟ್‌ ಕರೆದು ಬಹಳ ಕಾಲವೇನೂ ಕಳೆದು ಹೋಗಿಲ್ಲ. ಈಗ, ಇಬ್ಬರು ಅತ್ಯಂತ ಹಿರಿಯ ಅಧಿಕಾರಿಗಳ ಕಿತ್ತಾಟದಿಂದಾಗಿದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಗೆ ಮತ್ತೆ ಕುತ್ತು ಬಂದಿದೆ.

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಸಂಸ್ಥೆಯೊಳಗಿನ ಅವ್ಯವಸ್ಥೆಯ ಜತೆಗೆ, ಬಿಕ್ಕಟ್ಟು ತೀವ್ರಗೊಂಡಿದ್ದರೂ ರಾಜಕೀಯ ನಾಯಕತ್ವದ ಮೌನ ಮತ್ತು ನಿಷ್ಕ್ರಿಯತೆಗೂ ಬೆಳಕು ಚೆಲ್ಲಿದೆ. ಅಸ್ತಾನಾ ಅವರು ಗುಜರಾತ್ ಕೇಡರ್‌ನ ಐಪಿಎಸ್‌ ಅಧಿಕಾರಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸ್ತಾನಾ ಅವರು ಅಚ್ಚುಮೆಚ್ಚು.

ಅಸ್ತಾನಾ ಅವರನ್ನೇ ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಬೇಕು ಎಂಬ ಉತ್ಸಾಹ ಸರ್ಕಾರಕ್ಕೆ ಇದ್ದರೂ ಆ ಹುದ್ದೆಗೆ ಏರಲು ಅವರಿಗೆ ಸಾಧ್ಯವಾಗಿಲ್ಲ. ಲಂಚ ಪಡೆದ ಆರೋಪದಲ್ಲಿ ಅಸ್ತಾನಾ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಹಾಗಾಗಿ ಅಸ್ತಾನಾ ಮತ್ತು ಅಲೋಕ್‌ ನಡುವಣ ಕಚ್ಚಾಟ ಬಯಲಿಗೆ ಬಂದಿದೆ. ಸರ್ಕಾರದಲ್ಲಿರುವ ಪ್ರಭಾವಿಗಳೂ ಒಂದೊಂದು ಬಣಗಳಾಗಿ ಒಬ್ಬೊಬ್ಬರ ಪರ ನಿಂತಿದ್ದಾರೆ. ಹಾಗಾಗಿ ಕಿತ್ತಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯೇ ಹೆಚ್ಚು.

ಪರಸ್ಪರರನ್ನು ಭ್ರಷ್ಟ ಎಂದು ಕರೆಯುವ ಯಾವ ಅವಕಾಶವನ್ನೂ ಈ ಇಬ್ಬರು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ‘ಮುಷ್ಟಿ ಕಾಳಗ’ ನಡೆಯುತ್ತಲೇ ಇದ್ದರೂ ಸಿಬಿಐಯನ್ನು ನಿರ್ವಹಿಸುವ ಸಿಬ್ಬಂದಿ ಸಚಿವಾಲಯ ದಿವ್ಯ ಮೌನಕ್ಕೆ ಶರಣಾಗಿದೆ.

ಇಬ್ಬರ ನಡುವಣ ಜಗಳದ ಕಿಡಿ ಕಳೆದ ಅಕ್ಟೋಬರ್‌ನಲ್ಲಿಯೇ ಕಾಣಿಸಿಕೊಂಡಿತ್ತು. ಅಸ್ತಾನಾ ಅವರಿಗೆ ವಿಶೇಷ ನಿರ್ದೇಶಕರಾಗಿ ಬಡ್ತಿ ನೀಡುವುದನ್ನು ಅಲೋಕ್‌ ವಿರೋಧಿಸಿದ್ದರು. ಅಸ್ತಾನಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆ ಎಂದು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಅಲೋಕ್‌ ಅವರು ಪತ್ರ ಬರೆದಿದ್ದರು.

ಆದರೆ, ಅಸ್ತಾನಾ ಅವರ ಬಡ್ತಿ ತಡೆಯಲು ಅಲೋಕ್‌ ಅವರಿಗೆ ಸಾಧ್ಯವಾಗಲಿಲ್ಲ.

ನೇಮಕಾತಿಯಂತಹ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಪ್ರತಿನಿಧಿಯಾಗಿ ಅಸ್ತಾನಾ ಅವರು ಕೆಲಸ ಮಾಡಲಾಗದು ಎಂದು ಇದೇ ಜುಲೈನಲ್ಲಿ ಸಿವಿಸಿಗೆ ಅಲೋಕ್‌ ಅವರು ತಿಳಿಸಿದ್ದರು.

ಕಳೆದ ತಿಂಗಳು, ಅಲೋಕ್‌ ವಿರುದ್ಧವೂ ಅಸ್ತಾನಾ ಅವರು ಸಿವಿಸಿಗೆ ದೂರು ನೀಡಿ ತಮ್ಮ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮೇಲ್ನೋಟಕ್ಕೆ ಇದು ಇಬ್ಬರ ಅಹಂ ನಡುವಣ ಮೇಲಾಟ ಎಂದು ಕಾಣಿಸುತ್ತಿದೆ. ಆದರೆ, ಸರ್ಕಾರದಲ್ಲಿರುವ ಕೆಲವರು ತಮ್ಮ ಕೈ ಮೇಲಾಗಬೇಕು ಎಂಬ ಕಾರಣಕ್ಕೆ ನಡೆಸುತ್ತಿರುವ ಕಾರ್ಯತಂತ್ರವೇ ಈ ಕಿತ್ತಾಟದ ಹಿಂದಿನ ಕಾರಣ ಎಂದು ಕೆಲವು ಅಧಿಕಾರಿಗಳು ಹೇಳುತ್ತಿದ್ದಾರೆ. ಸಿಬಿಐನಲ್ಲಿ ಗುಜರಾತ್ ಕೇಡರ್‌ನ ಅಧಿಕಾರಿಗಳ ಪ್ರಭಾವದಿಂದಾಗಿ ಈ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಸರ್ಕಾರದ ಹಿಡಿತದಿಂದ ಸಿಬಿಐಯನ್ನು ಬಿಡಿಸಲು ಇದು ಸಕಾಲ ಎಂಬುದನ್ನು ಈ ಜಗಳ ತೋರಿಸುತ್ತದೆ ಎಂದು ಕೆಲವು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕಲಹದ ಹಾದಿ

* ರಾಕೇಶ್ ಅಸ್ತಾನಾ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿ 2016ರ ಡಿಸೆಂಬರ್‌ನಲ್ಲಿ ಸರ್ಕಾರವು ಆದೇಶ ಹೊರಡಿಸಿತು

* ಅಸ್ತಾನಾ ನೇಮಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

* ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಅವರನ್ನು ನೇಮಿಸಿ 2017ರ ಜನವರಿ 19ರಂದು ಸರ್ಕಾರ ಆದೇಶ ಹೊರಡಿಸಿತು

* ಅಲೋಕ್ ವರ್ಮಾ ಅವರ ಆಕ್ಷೇಪದ ಮಧ್ಯೆಯೂ ಸಿಬಿಐ ವಿಶೇಷ ನಿರ್ದೇಶಕರಾಗಿ ಅಸ್ತಾನಾ ಅವರಿಗೆ ಬಡ್ತಿ ನೀಡಿದ್ದನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಅನುಮೋದಿಸಿತು

* ಸಿಬಿಐ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮನ್ನು ಪ್ರತಿನಿಧಿಸುವ ಅಧಿಕಾರ ಅಸ್ತಾನಾ ಅವರಿಗಿಲ್ಲ ಎಂದು ವರ್ಮಾ ಅವರು ಸಿವಿಸಿಗೆ ಪತ್ರ ಬರೆದರು

* ಇದೇ ಸೆಪ್ಟೆಂಬರ್‌ನಲ್ಲಿ ಅಸ್ತಾನಾ ಅವರು ವರ್ಮಾ ವಿರುದ್ಧ ಸಿವಿಸಿಗೆ ದೂರು ನೀಡಿದರು

* ಅಕ್ಟೋಬರ್ 15ರಂದು ಅಸ್ತಾನಾ ವಿರುದ್ಧ ಸಿಬಿಐನಲ್ಲೇ ಪ್ರಕರಣ ದಾಖಲಾಯಿತು

ಸಿಬಿಐನ ಇಬ್ಬರು ಅಧಿಕಾರಿಗಳ ಜಗಳದಲ್ಲಿ ಮದ್ಯಪ್ರವೇಶಿಸಬೇಕಿದ್ದ ಸಮಯದಲ್ಲಿ ಸರ್ಕಾರ ಆ ಕೆಲಸ ಮಾಡಲಿಲ್ಲ. ಇದರಿಂದ ಸಿಬಿಐನ ಘನತೆಗೆ ಧಕ್ಕೆಯಾಗಿದೆ ಎಂಬುದು ನಿವೃತ್ತ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಅವರ ದಿಟ್ಟ ನುಡಿ. ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪ್ರಕಾಶ್ ಅವರು, ಸಿಬಿಐನ ಈಗಿನ ಆಂತರಿಕ ಜಗಳದ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಈಚಿನ ಬೆಳವಣಿಗೆಗಳಿಂದ ಸಿಬಿಐನ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆಯೇ?

ಖಂಡಿತವಾಗಿಯೂ ಇದರಿಂದ ಸಿಬಿಐನ ವಿಶ್ವಾಸಾರ್ಹತೆಗೆ ಕುಂದುಬಂದಿದೆ. ಇದು ದೇಶದ ಅತ್ಯುನ್ನತ ತನಿಖಾ ಸಂಸ್ಥೆ. ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳು ಪರಸ್ಪರ ಕಿತ್ತಾಡುತ್ತಿರುವುದು ದುರಂತವೇ ಸರಿ. ಸಿಬಿಐ ತನ್ನದೇ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅಧಿಕಾರಿಗಳು ಪರಸ್ಪರರ ಮೇಲೆ ಆರೋಪ–ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದು ಅತ್ಯಂತ ವಿಪರ್ಯಾಸದ ಬೆಳವಣಿಗೆ.

* ಈ ಇಬ್ಬರು ಅಧಿಕಾರಿಗಳ ನಡುವಣ ಜಗಳ ಬಹಿರಂಗವಾದ್ದದು ಇದೇ ಮೊದಲಲ್ಲ. ಈ ಜಗಳದಲ್ಲಿ ಮಧ್ಯಪ್ರವೇಶಿಸಲು ಸರ್ಕಾರವು ತಡಮಾಡಿತೇ?

ಸಿಬ್ಬಂದಿ ಸಚಿವಾಲಯದ ಅಧೀನದಲ್ಲಿ ಸಿಬಿಐ ಬರುತ್ತದೆ. ಸಚಿವಾಲಯವು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಬೇಕಿತ್ತು, ವಿವಾದವನ್ನು ಬಗೆಹರಿಸಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ.

* ಈ ವಿಚಾರದಲ್ಲಿ ಸರ್ಕಾರಕ್ಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿಮ್ಮ ಸಲಹೆಯೇನು?

ಸರ್ಕಾರಕ್ಕೆ ನಾನು ಸಲಹೆ ನೀಡುವುದು ಅತಿಯಾಗುತ್ತದೆ. ಆದರೆ ಪೊಲೀಸ್ ಅಧಿಕಾರಿಗಳು ತಮ್ಮ ನಡುವಣ ನಾಯಿಜಗಳ–ಕೋಳಿಜಗಳಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ಜಗಳದಿಂದ ಸಿಬಿಐನ ಘನತೆ ಮಣ್ಣುಪಾಲಾಗುತ್ತಿದೆ. ಯಾವುದೇ ಸ್ವರೂಪದ ಬಾಹ್ಯ ಒತ್ತಡಗಳಿಂದ ಸಿಬಿಐ ನಿರ್ದೇಶಕರನ್ನು ರಕ್ಷಿಸುವ ಉದ್ದೇಶದಿಂದಲೇ ಅವರ ಹುದ್ದೆಯ ಅವಧಿಯನ್ನು ಎರಡು ವರ್ಷಕ್ಕೆ ಮಿತಿಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಅದ್ಯಾವುದೂ ಪಾಲನೆಯಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT