ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 30ರ ವರೆಗೂ ಲಾಕ್‌ಡೌನ್‌: ಕರ್ಫ್ಯೂ ಅವಧಿ ಇಳಿಕೆ

ಜೂನ್ 8ರಿಂದ ತೆರೆಯಲಿವೆ ಮಂದಿರ, ಮಾಲ್
Last Updated 31 ಮೇ 2020, 2:12 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ:ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಜೂನ್‌ 30ರವರೆಗೂ ಲಾಕ್‌ಡೌನ್‌ ಅನ್ನು ಮುಂದುವರಿಸಿ ಕೇಂದ್ರದ ಗೃಹಸಚಿವಾಲಯವು ಶನಿವಾರ ಹೊಸ ನಿರ್ದೇಶನ ನೀಡಿದೆ. ಇತರ ಪ್ರದೇಶಗಳಲ್ಲಿ ಜೂನ್‌ 8ರಿಂದ ಲಾಕ್‌ಡೌನ್‌ ಸಡಿಲಿಸುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಎಲ್ಲಾ ನಿರ್ಬಂಧಗಳು ಜೂನ್‌ 30ರವರೆಗೆ ಮುಂದುವರಿಯಲಿವೆ. ಕಂಟೈನ್‌ಮೆಂಟ್‌ ಪ್ರದೇಶದ ಹೊರಗೆ ಮೂರು ಹಂತಗಳಲ್ಲಿ ಲಾಕ್‌ಡೌನ್‌ಅನ್ನು ಸಡಿಲಗೊಳಿಸಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಯಾವ ಹಂತದಲ್ಲಿ ಯಾವುದಕ್ಕೆ ಅವಕಾಶ?

ಜೂನ್‌ 8ರಿಂದ (ಮೊದಲ ಹಂತ)
ಧಾರ್ಮಿಕ ಕ್ಷೇತ್ರ ಹಾಗೂ ಪೂಜಾ ಸ್ಥಳಗಳು, ಹೋಟೆಲ್‌ ಹಾಗೂ ಮಾಲ್‌ಗಳನ್ನು ಜೂನ್‌ 8ರಿಂದ ತೆರೆಯಬಹುದು. ಇಂಥ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ, ಪಾಲಿಸಬೇಕಾದ ನಿಯಮಾವಳಿಯ ವಿವರ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು

ಜುಲೈ ತಿಂಗಳು (ಎರಡನೇ ಹಂತ)
ಜುಲೈ ತಿಂಗಳಿನಿಂದ ಶಾಲಾ ಕಾಲೇಜು, ಕೋಚಿಂಗ್‌ ಸೆಂಟರ್‌ಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪಾಲಕರ ಜತೆ ರಾಜ್ಯ ಸರ್ಕಾರಗಳು ಸಭೆ ನಡೆಸಿ, ಅಭಿಪ್ರಾಯ ಸಂಗ್ರಹ ಮಾಡಬಹುದು.

ದಿನಾಂಕ ನಿರ್ಧಾರವಿಲ್ಲ (ಮೂರನೇ ಹಂತ)

ಅಂತರರಾಷ್ಟ್ರೀಯ ವಿಮಾನಯಾನ, ಮೆಟ್ರೊ ರೈಲು ಸೇವೆ, ಚಿತ್ರಮಂದಿರ, ಜಿಮ್‌, ಈಜುಕೊಳ, ಬಾರ್‌, ಸಭಾಗೃಹ ಮುಂತಾದವುಗಳನ್ನು ಆರಂಭಿಸುವ ದಿನಾಂಕವನ್ನು ಪರಿಸ್ಥಿತಿಯ ಅವಲೋಕನ ನಡೆಸಿದ ಬಳಿಕ ನಿರ್ಧರಿಸಲಾಗುವುದು. ಸಭೆ ಸಮಾರಂಭ, ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವ ಬಗ್ಗೆಯೂ ಮೂರನೇ ಹಂತದಲ್ಲಿ ನಿರ್ಧರಿಸಲಾಗುವುದು

ಕರ್ಫ್ಯೂ ಅವಧಿ ಇಳಿಕೆ

* ರಾತ್ರಿ 7 ರಿಂದ ಮುಂಜಾನೆ 7 ಗಂಟೆಯವರೆಗೆ ಇದ್ದ ಕರ್ಫ್ಯೂ ಅವಧಿಯನ್ನು ಸಡಿಲಿಸಿ, ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಗದಿ ಮಾಡಲಾಗಿದೆ

* ರಾಜ್ಯದೊಳಗೆ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಮತ್ತು ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಪರವಾನಗಿ/ಪರ್ಮಿಟ್‌ ಪಡೆಯುವ ಅಗತ್ಯವಿಲ್ಲ. ಆದರೆ, ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಯಾವುದೇ ರಾಜ್ಯವು ಇಂಥ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಲು ಇಚ್ಛಿಸುವುದಾದರೆ, ಮೊದಲೇ ಆ ಕುರಿತು ಜನರಿಗೆ ತಿಳಿವಳಿಕೆ ನೀಡಬೇಕು

* ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಸರಕುಗಳ ಸಾಗಾಣಿಕೆಗೆ ಅಡ್ಡಿಪಡಿಸುವಂತಿಲ್ಲ

ದೇಶದಲ್ಲಿ ಒಟ್ಟು ಕೋವಿಡ್‌–19 ಪ್ರಕರಣಗಳ ಸಂಖ್ಯೆ 1.7 ಲಕ್ಷ ದಾಟಿದ್ದು, ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 5,000 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT