ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವನ್ ಕಣಿವೆ ತನ್ನದು ಎಂದ ಚೀನಾ

Last Updated 17 ಜೂನ್ 2020, 14:36 IST
ಅಕ್ಷರ ಗಾತ್ರ

ಬೀಜಿಂಗ್: ಲಡಾಖ್‌ನ ಗಾಲ್ವನ್ ಕಣಿವೆ ನಮ್ಮದು ಎಂದು ಚೀನಾ ಪ್ರತಿಪಾದಿಸಿದೆ. ‘ಗಾಲ್ವನ್ ಕಣಿವೆಯು ಯಾವತ್ತಿಗೂ ನಮ್ಮದೇ ಆಗಿತ್ತು. ಅದು ನಮ್ಮದೇ ಭಾಗ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾಒ ಲಿಜಿಯನ್ ಹೇಳಿದ್ದಾರೆ.

‘ಸೋಮವಾರ ರಾತ್ರಿ ಎರಡೂ ದೇಶಗಳ ಸೇನೆಗಳ ನಡುವೆ ಘರ್ಷಣೆ ನಮ್ಮ ಭಾಗದಲ್ಲಿ ನಡೆದಿದೆ. ಗಡಿಯಿಂದ ಒಳಗೆ ನಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಈ ಘರ್ಷಣೆ ಸಲುವಾಗಿ ಚೀನಾವನ್ನು ಯಾರೂ ದೂರಬೇಕಿಲ್ಲ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಗಾಲ್ವನ್‌ ಕಣಿವೆಯಲ್ಲಿ ಯಾವುದೇ ಗಡಿ ತಕರಾರು ಇರಲಿಲ್ಲ. ಇದಕ್ಕಿದ್ದ ಹಾಗೆ ಈ ಘರ್ಷಣೆ ನಡೆದದ್ದು ಹೇಗೆ ಎಂದು ಮಾಧ್ಯಮ ಪ್ರತಿನಿಧಿಗಳು ಲಿಜಿಯನ್ ಅವನ್ನು ಪ್ರಶ್ನಿಸಿದರು. ‘ಗಾಲ್ವನ್‌ಗೆ ಸಂಬಂಧಿಸಿದಂತೆ ನಾವು ಸೇನೆ ಮತ್ತು ರಾಜತಾಂತ್ರಿಕ ವಿಧಾನದ ಮೂಲಕ ವ್ಯವಹರಿಸುತ್ತಿದ್ದೇವೆ. ಇದರಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬುದು ಸ್ಪಷ್ಟವಾಗಿದೆ. ಆದರೆ ಈ ವಿಚಾರದಲ್ಲಿ ಮತ್ತಷ್ಟು ಸಾವುನೋವು ಉಂಟಾಗಬಾರದು ಎಂಬುದು ಚೀನಾದ ಅಭಿಲಾಷೆ’ ಎಂದು ಅವರು ಉತ್ತರಿಸಿದ್ದಾರೆ.

ಸಂಘರ್ಷದಲ್ಲಿ ಚೀನಾದ 43 ಸೈನಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ‘ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ನಿಯಂತ್ರಿಸಬಹುದಾದ ಮಟ್ಟದಲ್ಲೇ ಇದೆ. ಈ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಚೀನಾ ಮತ್ತು ಭಾರತದ ಸೇನೆಗಳು ಗಡಿಯಲ್ಲಿ ಜಂಟಿಯಾಗಿ ಕೆಲಸ ಮಾಡುತ್ತಿವೆ. ಈ ಬಗ್ಗೆ ನಾನು ಹೇಳುವುದು ಏನೂ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಈ ಭಿನ್ನಾಭಿಪ್ರಾಯಕ್ಕಿಂತ ಎರಡೂ ದೇಶಗಳ ಪರಸ್ಪರ ಹಿತಾಸಕ್ತಿಗಳು ಮಹತ್ವದ್ದಾಗಿವೆ. ಜನರ ಹಿತಾಸಕ್ತಿಯ ಸಲುವಾಗಿ ಈ ಭಿನ್ನಾಭಿಪ್ರಾಯವನ್ನು ಮರೆತು ಸಂಬಂಧ ಮುಂದುವರಿಸುವುದರ ಬಗ್ಗೆ, ಎರಡೂ ದೇಶಗಳ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ವಿಚಾರದಲ್ಲಿ ಭಾರತವೂ ನಮ್ಮೊಂದಿಗೆ ಇರುತ್ತದೆ ಎಂದು ಭಾವಿಸಿದ್ದೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಾಲ್ವನ್‌ನಲ್ಲಿ ಇನ್ನೂ ಇವೆ ಸೇನಾ ವಾಹನಗಳು

ಗಾಲ್ವನ್‌ ಕಣಿವೆಯಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಭಾರತ ಮತ್ತು ಚೀನಾ ಸೇನೆಗಳು ಜೂನ್ 6ರಂದೇ ಒಮ್ಮತಕ್ಕೆ ಬಂದಿದ್ದವು. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಸಂಘರ್ಷ ಉಂಟಾಗಿದೆ. ಆದರೆ, ಸಂಘರ್ಷದ ನಂತರವೂ ಆ ಜಾಗದಲ್ಲಿ ಸೇನಾ ವಾಹನಗಳು ಭಾರಿ ಸಂಖ್ಯೆಯಲ್ಲಿ ಇವೆ ಎಂಬುದು ಪತ್ತೆಯಾಗಿದೆ. ಪ್ಲಾನೆಟ್‌ ಲ್ಯಾಬ್ಸ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಸೇನಾ ವಾಹನಗಳು ಕಾಣಿಸಿವೆ.

ಸೋಮವಾರ ರಾತ್ರಿ ಸಂಘರ್ಷ ನಡೆದಿದೆ. ಪ್ಲಾನೆಟ್ ಲ್ಯಾಬ್ಸ್‌ನ ಉಪಗ್ರಹಗಳು ಮಂಗಳವಾರ ಮಧ್ಯಾಹ್ನ ಗಾಲ್ವನ್ ಕಣಿವೆಯ ಚಿತ್ರವನ್ನು ಸೆರೆಹಿಡಿದಿವೆ. ಒಟ್ಟು ನಾಲ್ಕು ಉಪಗ್ರಹ ಚಿತ್ರಗಳನ್ನು ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿದೆ. ಈ ಚಿತ್ರಗಳನ್ನು ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್‌, ಎಪಿ ಮತ್ತು ಎಎಫ್‌ಪಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿವೆ.

ಇಡೀ ಗಾಲ್ವನ್ ಕಣಿವೆಯ ಪಕ್ಷಿನೋಟವಿರುವ ಒಂದು ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಗಾಲ್ವನ್ ನದಿಯ ಬಲದಂಡೆಯಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಡೇರೆಯಂತಹ ರಚನೆಗಳಿರುವುದು ಈ ಚಿತ್ರದಲ್ಲಿ ಕಾಣಿಸುತ್ತದೆ.ಇನ್ನು ಉಳಿದ ಚಿತ್ರಗಳನ್ನು ಹತ್ತಿರದಿಂದ ತೆಗೆಯಲಾಗಿದೆ. ಮೊದಲ ಚಿತ್ರದಲ್ಲಿ ಇರುವ ಕೆಂಪು ಮತ್ತು ಬಿಳಿ ಡೇರೆಯಂತಹ ರಚನೆಗಳನ್ನು ಇನ್ನೂ ಕಡಿಮೆ ಎತ್ತರದಿಂದ ಸೆರೆಹಿಡಿಯಲಾಗಿದೆ.

ಗಾಲ್ವನ್ ನದಿಯ ಎಡದಂಡೆಯಲ್ಲಿ 200ಕ್ಕೂ ಹೆಚ್ಚು ಸೇನಾವಾಹನಗಳು ಸಾಲಾಗಿ ನಿಂತಿರುವುದು ಮತ್ತು ಕೆಂಪು ಬಣ್ಣದ ಡೇರೆಗಳು ಇರುವುದು ಸೆರೆಯಾಗಿದೆ. ಆದರೆ, ಈ ವಾಹನಗಳು ಮತ್ತು ಡೇರೆಗಳು ಭಾರತೀಯ ಸೇನೆಯದ್ದೇ ಅಥವಾ ಚೀನಾ ಸೇನೆಯದ್ದೇ ಎಂಬುದನ್ನು ಪ್ಲಾನೆಟ್‌ ಲ್ಯಾಬ್ಸ್ ಗುರುತಿಸಿಲ್ಲ. ಹೀಗಾಗಿ ಸುದ್ದಿಸಂಸ್ಥೆಗಳೂ ಈ ವಿವರವನ್ನು ನೀಡಿಲ್ಲ.

ಮತ್ತೊಂದು ಚಿತ್ರದಲ್ಲಿ ಗಾಲ್ವನ್ ನದಿಯ ಎಡದಂಡೆಯಲ್ಲೂ ಕೆಲವು ಸೇನಾ ವಾಹನಗಳು ಇರುವುದು ಸೆರೆಯಾಗಿದೆ. ಎಡದಂಡೆಯಲ್ಲಿ ಕೆಲವು ವಾಹನಗಳಷ್ಟೇ ಇವೆ. ಎಡದಂಡೆ ಮತ್ತು ಬಲದಂಡೆ ಎರಡರಲ್ಲೂ ಸೇನಾ ವಾಹನಗಳು ಮುಖಾಮುಖಿಯಾಗಿ ನಿಂತಿರುವ ದೃಶ್ಯ ಇನ್ನೊಂದು ಚಿತ್ರದಲ್ಲಿದೆ. ಆದರೆ, ಇವು ಭಾರತೀಯ ಸೇನೆಯ ವಾಹನಗಳೇ ಅಥವಾ ಚೀನಾ ಸೇನೆಯ ವಾಹನಗಳೇ ಎಂಬ ವಿವರ ಬಹಿರಂಗವಾಗಿಲ್ಲ.

ಗಾಲ್ವನ್‌ ನದಿ ಭಾರತದ ಲಡಾಖ್‌ನ ವ್ಯಾಪ್ತಿಯಲ್ಲಿಯೇ ಬರುತ್ತದೆ. ಸಂಘರ್ಷ ನಡೆದಿರುವ ಗಾಲ್ವನ್ ಕಣಿವೆಯ ಪ್ರದೇಶದಿಂದ ಐದಾರು ಕಿ.ಮೀ. ದೂರದಲ್ಲಿ, ಕಣಿವೆಗೆ ಸಮಾನಾಂತರವಾಗಿಯೇ ವಾಸ್ತವ ಗಡಿ ರೇಖೆ (ಎಲ್‌ಎಸಿ) ಸಾಗುತ್ತದೆ. ಚಿತ್ರದಲ್ಲಿರುವ ವಾಹನಗಳು ಚೀನಾ ಸೇನೆಯದ್ದೇ ಆಗಿದ್ದರೆ, ಅವು ಖಂಡಿತಾ ಭಾರತದ ನೆಲದಲ್ಲಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT