ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ದೃಢಪಟ್ಟ ಬಳಿಕವೇ ಪ್ಲಾಸ್ಮಾ ಸಂಗ್ರಹಕ್ಕೆ ಅವಕಾಶ

Last Updated 30 ಜೂನ್ 2020, 15:37 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಹಲವು ರಾಜ್ಯ ಸರ್ಕಾರಗಳು ಉತ್ಸುಕವಾಗಿವೆ. ಆದರೆ, ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್‌ಗೆ ಪ‍ರಿಣಾಮಕಾರಿ ಎಂದು ಸಾಬೀತಾದ ಬಳಿಕ ಮಾತ್ರ ಪ್ಲಾಸ್ಮಾ ಸಂಗ್ರಹಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಕ್ತನಿಧಿಗಳಿಗೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

ಕೋವಿಡ್‌ನಿಂದ ಗುಣಮುಖರಾದ ವ್ಯಕ್ತಿಗಳ ಪ್ಲಾಸ್ಮಾವನ್ನು ಕೋವಿಡ್‌ನಿಂದ ತೀವ್ರವಾಗಿ ಬಾಧಿತರಾದ ರೋಗಿಗಳ ಚಿಕಿತ್ಸೆಗೆ ಬಳಸುವ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ ಪರೀಕ್ಷೆಗಳನ್ನು ನಡೆಸುತ್ತಿದೆ.

‘ಕೋವಿಡ್‌ ರೋಗಿಗಳ ಸಾಮಾನ್ಯ ಚಿಕಿತ್ಸೆಗೆ ಪ್ಲಾಸ್ಮಾ ಬಳಕೆ ಸಲ್ಲದು’ ಎಂದು ರಾಷ್ಟ್ರೀಯ ರಕ್ತ ನೀಡಿಕೆ ಪರಿಷತ್‌ ಹೇಳಿದೆ. ಇದು ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಸಂಸ್ಥೆ.

ಪ್ಲಾಸ್ಮಾ ಚಿಕಿತ್ಸೆಯ ಪರೀಕ್ಷೆಗಾಗಿ ದಾನಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಭಾರತೀಯ ಔಷಧ ಮಹಾ ನಿಯಂತ್ರಕರು ಅನುಮೋದಿಸಿರುವ ಶಿಷ್ಟಾಚಾರಗಳನ್ನು ಅನುಸರಿಸಬೇಕು ಎಂದೂ ರಕ್ತನಿಧಿಗಳಿಗೆ ಕಳುಹಿಸಲಾಗಿರುವ ಸಲಹಾ ಪತ್ರದಲ್ಲಿ ಹೇಳಲಾಗಿದೆ.

ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್‌ ಗುಣಪಡಿಸಲು ಪರಿಣಾಮಕಾರಿ ಎಂಬುದು ದೃಢಪಟ್ಟು, ಸಂಬಂಧಪಟ್ಟ ಸಮಿತಿಗಳು ಅದನ್ನು ಅನುಮೋದಿಸಬೇಕು. ಆ ಮೇಲೆಯೇ, ಕೋವಿಡ್‌ನಿಂದ ಗುಣಮುಖರಾದವರ ಪ್ಲಾಸ್ಮಾ ಸಂಗ್ರಹದ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಸಲಹಾ ಪತ್ರದಲ್ಲಿ ತಿಳಿಸಲಾಗಿದೆ.

ಕೋವಿಡ್‌ನಿಂದ ಗುಣಮುಖನಾದ ವ್ಯಕ್ತಿಯು ಆಸ್ಪತ್ರೆಯಿಂದ ಮನೆಗೆ ಮರಳಿ 28 ದಿನಗಳ ಬಳಿಕ ಅಥವಾ ರೋಗಿಯ ಮನೆ ಪ್ರತ್ಯೇಕವಾಸ ಮುಗಿದು 28 ದಿನಗಳ ಬಳಿಕವಷ್ಟೇ ಪ್ಲಾಸ್ಮಾ ಸಂಗ್ರಹಕ್ಕೆ ಅವಕಾಶ ಇದೆ ಎಂಬುದನ್ನು ಪುನರುಚ್ಚರಿಸಲಾಗಿದೆ.

‍ಕೋವಿಡ್‌ ಸೋಂಕು ತಗಲುವ ಅಪಾಯ ಹೆಚ್ಚು ಇರುವ ರಕ್ತದಾನಿಗಳಿಂದ ರಕ್ತ ಪಡೆಯಬಾರದು ಎಂದೂ ರಕ್ತನಿಧಿ ಹಾಗೂ ರಕ್ತದಾನ ಶಿಬಿರ ಏರ್ಪಡಿಸುವವರಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT