ಗುರುವಾರ , ಜೂಲೈ 9, 2020
28 °C
ವೈದ್ಯಕೀಯ ತಜ್ಞರ ಅಭಿಮತ; ಕೋಲ್ಕತ್ತ, ಮುಂಬೈ, ಅಹಮದಾಬಾದ್‌ನಲ್ಲಿ ಇವೆ ಪುರವೆ

ಸಮುದಾಯದ ಸನಿಹಕ್ಕೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎರಡು ತಿಂಗಳ ಲಾಕ್‌ಡೌನ್‌ನ ಹೊರತಾಗಿಯೂ ಕೊರೊನಾ ವೈರಾಣು ಸಮುದಾಯದ ಮೂಲಕ ಸದ್ದಿಲ್ಲದಂತೆ ಇತರರಿಗೆ ಲಗ್ಗೆಯಿಡುತ್ತಿದೆ. ಈ ಬಗ್ಗೆ ಸರ್ಕಾರಗಳು ಮೌನವಾಗಿದ್ದರೂ, ವೈದ್ಯರು ಹಾಗೂ ಆರೋಗ್ಯ ವಲಯದ ತಜ್ಞರು ಇದನ್ನು ಪತ್ತೆ ಮಾಡಿದ್ದಾರೆ. 

ಶೇ 70ರಷ್ಟು ಪ್ರಕರಣಗಳು ಕಂಡುಬಂದಿರುವ 13 ನಗರಗಳ ಮೇಲೆ 5ನೇ ಹಂತದ ಲಾಕ್‌ಡೌನ್ ಕೇಂದ್ರೀಕೃತವಾುಹನ ಸಾಧ್ಯತೆಯಿದೆ. ಈ ಹೊತ್ತಿನಲ್ಲಿ ವೈದ್ಯಕೀಯ ವಲಯದ ತಜ್ಞರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ವೈರಾಣು ಪರಿಸರದಲ್ಲಿ ಹರಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  

‘ಕ್ಲಸ್ಟರ್ ಮಟ್ಟದಲ್ಲಿ ಇದ್ದ ಸೋಂಕು ಇದೀಗ ಸಮುದಾಯವನ್ನು ಹೊಕ್ಕಿದೆ. ಸಾಂಕ್ರಾಮಿಕ ಪಿಡುಗು ನಿರೀಕ್ಷೆಯಂತೆ ವ್ಯಾಪಿಸುತ್ತಿದೆ’ ಎಂದು ಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಯಪ್ರಕಾಶ್ ಮುಲಿಯಿಲ್ ಹೇಳಿದ್ದಾರೆ.

ಗುಜರಾತಿನ ಆರೋಗ್ಯ ಅಧಿಕಾರಿಗಳೂ ಇದನ್ನು ಒಪ್ಪಿಕೊಂಡಿದ್ದಾರೆ. ಅಹಮದಾಬಾದ್, ಸೂರತ್ ಮತ್ತು ವಡೋದರ ನಗರಗಳಲ್ಲಿ ಸೋಂಕಿನ ಹಾದಿ ಪತ್ತೆಹಚ್ಚುವ ಯತ್ನವನ್ನು ಕೈಬಿಡಲಾಗಿದೆ. ಎಲ್ಲಿಗೂ ಪ್ರಯಾಣ ಮಾಡದ ಹಾಗೂ ಸೋಂಕಿತರಗೊಂದಿಗೆ ಸಂಪರ್ಕ ಹೊಂದಿದ ಜನರಿಗೂ ಪಿಡುಗು ಅಂಟಿಕೊಳ್ಳುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಅಹಮದಾಬಾದ್ ನಗರವೊಂದರಲ್ಲೇ ಹಾಲು ಹಾಕುವ, ದಿನಸಿ ವಿತರಿಸುವ, ತರಕಾರಿ ಮಾರುವ ಸುಮಾರು 700 ಜನರಲ್ಲಿ ಕೋವಿಡ್–19 ಸೋಂಕು ‌ಕಂಡುಬಂದಿತ್ತು. ಇದು ಸೋಂಕು ಸಮುದಾಯಕ್ಕೆ ಹರಡಿರುವುದರ ಫಲ ಎಂದು ತಜ್ಞರು ಹೇಳಿದ್ದಾರೆ. 

ಕೋಲ್ಕತ್ತದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಂಕಿತರ ಸಂಪರ್ಕವಿಲ್ಲದ, ಪ್ರಯಾಣದ ದಾಖಲೆಯಿಲ್ಲದ ವ್ಯಕ್ತಿಗಳಿಗೂ ಸೋಂಕು ಹರಡಿದೆ. 

‘ಬಹುತೇಕ ಸೋಂಕು ಪೀಡಿತ ಪ್ರದೇಶದ ಸಮುದಾಯದಲ್ಲಿ ಅದು ಪಸರಿಸುತ್ತಿದೆ. ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿರುವುದು ಈಗಿರುವ ದೊಡ್ಡ ಸವಾಲು. ಪರಿಸ್ಥಿತಿ ಯಾವ ಪ್ರಮಾಣದಲ್ಲಿ ಉಲ್ಬಣಿಸಲಿದೆ ಎಂಬುದಕ್ಕೆ ಇನ್ನೆರಡು ವಾರ ಕಾಯಬೇಕು’ ಎಂದು ಅವರು ಹೇಳಿದ್ದಾರೆ.  

ಐಸಿಎಂಆರ್‌ನ ಸಂಶೋಧಕರು ಫೆಬ್ರುವರಿ 15 ಮತ್ತು ಏಪ್ರಿಲ್ 2ರ ನಡುವೆ ಎಸ್ಎಆರ್‌ಐ ಹಾಗೂ ಐಎಲ್‌ಐನಿಂದ ಬಳಲುತ್ತಿದ್ದ 5,911 ರೋಗಿಗಳನ್ನು ತಪಾಸಣೆಗೆ ಒಳಪಡಿಸಿದಾಗ 104 ಜನರಿಗೆ ಕೋವಿಡ್ ದೃಢಪಟ್ಟಿತ್ತು.  ಈ ಪೈಕಿ 40 ಪಾಸಿಟಿವ್ ಪ್ರಕರಣಗಳಿಗೆ ಯಾವುದೇ ಪ್ರಯಾಣ ದಾಖಲೆಯಾಗಲೀ, ಸೋಂಕಿತರ ಸಂಪರ್ಕವಾಗಲೀ ಇರಲಿಲ್ಲ. ಇದು ಸಮುದಾಯಕ್ಕೆ ಹರಡುವಿಕೆಗೆ ಸ್ಪಷ್ಟ ನಿದರ್ಶನವಾಗಿತ್ತು.

ವಾಸ್ತವ ಒಪ್ಪಿಕೊಳ್ಳದ ಐಸಿಎಂಆರ್

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಕೈಗೊಂಡಿರುವ ಕೆಲವು ಕ್ರಮಗಳು ವಾಸ್ತವವನ್ನು ಒಪ್ಪಿಕೊಂಡಂತೆ ತೋರುತ್ತಿವೆ. ಉದಾಹರಣೆಗೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪ್ರತಿಬಂಧಕ ಔಷಧವಾಗಿ ವೈದ್ಯರು, ನರ್ಸ್‌, ಪೊಲೀಸರು ಹಾಗೂ ಕೋವಿಡ್–19 ಕೆಲಸದಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ನೀಡಲು ಪರಿಷತ್ ಸಲಹೆ ನೀಡಿತ್ತು. ಒಂದು ವೇಳೆ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದಾದರೆ, ದೊಡ್ಡ ಪ್ರಮಾಣದಲ್ಲಿ ವಿವಾದಿತ ಮಾತ್ರೆಗಳ ಬಳಕೆಯನ್ನು ಪರಿಷತ್ ಶಿಫಾರಸು ಮಾಡಿದ್ದೇಕೆ ಎಂದು ತಜ್ಞರು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು 2ನೇ ಹಂತದಿಂದ ಮೂರನೇ ಹಂತಕ್ಕೆ ಪ್ರವೇಶ ಪಡೆದಿದೆ ಎಂದು ಐಸಿಎಂಆರ್ ವಿಜ್ಞಾನಿಗಳಾಗಲೀ, ಕೇಂದ್ರ, ರಾಜ್ಯ ಸರ್ಕಾರಗಳ ಆರೋಗ್ಯಾಧಿಕಾರಿಗಳಾಗಲೀ ಒಪ್ಪಿಕೊಂಡಿಲ್ಲ. ಆದರೆ ಸರ್ಕಾರದ ಹೊರಗಿನ ತಜ್ಞರ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದೆ.

ತಜ್ಞರ ಪ್ರತಿಕ್ರಿಯೆ

ಮುಂಬೈ ನಗರದಲ್ಲಿ ಕ್ಲಿನಿಕ್‌ಗಳನ್ನು ತೆರೆದ ಸಾಕಷ್ಟು ವೈದ್ಯರಿಗೆ ಕೋವಿಡ್ ಕಾಣಿಸಿಕೊಂಡಿದೆ. ಇದು ಆಗಿದ್ದೇಗೆ. ಸಮುದಾಯಕ್ಕೆ ಪಸರಿಸಿದ್ದೇ ಇದಕ್ಕೆ ಕಾರಣ ಎಂದು 
ಮಹಾರಾಷ್ಟ್ರ ವೈದ್ಯಕೀಯ ಸಂಘದ ಹಿರಿಯ ವೈದ್ಯರೊಬ್ಬರು ಪ್ರತಿಕ್ರಿಯಿಸಿದರು.

ಮಾರ್ಚ್ ಮಧ್ಯಭಾಗದಲ್ಲೇ ಸೋಂಕು ಸಮುದಾಯಕ್ಕೆ ಹರಡಿದೆ. ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿದ್ದರೆ, ಒಂದಿಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂದು ವೆಲ್ಲೂರಿನ ಖ್ಯಾತ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಟಿ. ಜಾಕೋಬ್ ಜಾನ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು