ಶನಿವಾರ, ಜೂನ್ 19, 2021
22 °C

ಕಾಂಗ್ರೆಸ್ ಸಂಸದೀಯ ನಾಯಕನ ಆಯ್ಕೆ: ಇನ್ನೂ ಬಗೆಹರಿಯದ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆ ಅಧಿವೇಶನ ಸೋಮವಾರವೇ ಆರಂಭವಾಗಿದೆ. ಆದರೆ ಈವರೆಗೆ ಸದನದಲ್ಲಿ ತನ್ನ ನಾಯಕ ಯಾರು ಎಂದು ಕಾಂಗ್ರೆಸ್‌ ಘೋಷಿಸಿಲ್ಲ. ಭಾರತದ ಅತಿಹಿರಿಯ ಪಕ್ಷವು ಮತ್ತೊಂದು ಅವಧಿಗೆ ಪ್ರತಿಪಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿಯಲ್ಲಿ ಅನುಭವಿಸುತ್ತಿರುವ ಗೊಂದಲವನ್ನು ಈ ಬೆಳವಣಿಗೆ ಸಾರಿ ಹೇಳುತ್ತದೆ.

ಅಧಿವೇಶನದ ಮೊದಲ ದಿನವಾದ ಸೋಮವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಸಂಜೆಯ ನಂತರ. ಉತ್ತರ ಪ್ರದೇಶದ ಅಮೇಠಿಯಿಂದ ಸೋತಿರುವ ರಾಹುಲ್ ವಯನಾಡ್‌ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ರಾಹುಲ್ ಗಾಂಧಿ ಸದನದಲ್ಲಿ ಉಪಸ್ಥಿತರಿರಲಿಲ್ಲ. ‘ನಾನು ಇಂದೇ ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗೊಂದಲ ಪರಿಹರಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸುವುದಿಲ್ಲ: ರಣದೀಪ್ ಸುರ್ಜೇವಾಲಾ

‘ಲೋಕಸಭಾ ಸದಸ್ಯನಾಗಿ ನನ್ನ ನಾಲ್ಕನೇ ಅವಧಿ ಇಂದಿನಿಂದ ಆರಂಭವಾಗಿದೆ. ಕೇರಳದ ವಯನಾಡ್ ಸಂಸದನಾಗಿ ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುತ್ತೇನೆ. ಭಾರತದ ಸಂವಿಧಾನದ ಬಗ್ಗೆ ನನಗಿರುವ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ’ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಳೆದ ತಿಂಗಳು ಘೋಷಿಸಿದ್ದರು. ಪಕ್ಷವು ‘ರಾಹುಲ್ ಗಾಂಧಿಯೇ ಅಧ್ಯಕ್ಷ’ ಎಂದು ಅಧಿಕೃತವಾಗಿ ಹೇಳುತ್ತಲೇ ಬಂದಿದೆ. ಆದರೆ ರಾಹುಲ್ ತಮ್ಮ ಮನಸ್ಸು ಬದಲಿಸುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಗೊಂದಲಗಳು ಮುಂದುವರಿದಿವೆ.

ಇದನ್ನೂ ಓದಿ: ನೂತನ ಸಂಸದರ ಪ್ರಮಾಣ; ಸಂಸತ್ತಿನಲ್ಲಿ ಹಬ್ಬದ ಸಂಭ್ರಮ​

ಕಾಂಗ್ರೆಸ್ ಸಂಸದರ ಕರತಾಡನದೊಂದಿಗೆ ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಸೋನಿಯಾಗಾಂಧಿ ಅಥವಾ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನಿಗೆ ಮೀಸಲಿರುವ ಸ್ಥಾನದಲ್ಲಿ ಕುಳಿತುಕೊಳ್ಳಲಿಲ್ಲ. ಇವರಿಬ್ಬರೂ ಪ್ರತಿಪಕ್ಷ ನಾಯಕರಾಗಿ ಇರುವುದಿಲ್ಲ ಎನ್ನುವ ಅನುಮಾನಗಳಿಗೆ ಈ ನಡೆ ಕಾರಣವಾಯಿತು. ಈ ಬಾರಿಯೂ ಕಾಂಗ್ರೆಸ್‌ 55 ಸ್ಥಾನ ಗೆಲ್ಲುವಲ್ಲಿ ವಿಫಲವಾಗಿರುವುದರಿಂದ ಪ್ರತಿಪಕ್ಷ ಸ್ಥಾನಮಾನ ಸಿಗುವುದು ಕಷ್ಟ.

ಇದನ್ನೂ ಓದಿ: ವಿರೋಧ ಪಕ್ಷಗಳ ಪ್ರತಿ ಮಾತಿಗೂ ಗೌರವ: ಮೋದಿ​

ಕೇರಳದಿಂದ ಆಯ್ಕೆಯಾದ ಸಂಸದರಾದ ಕೆ.ಸುರೇಶ್, ಶಶಿ ತರೂರ್ ಅಥವಾ ಪಂಜಾಬ್‌ನಿಂದ ಆಯ್ಕೆಯಾಗಿರುವ ಹಿರಿಯ ನಾಯಕ ಮನೀಶ್ ತಿವಾರಿ ಅವರನ್ನು ಸದನದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಪಾಲಿಗೆ ಸ್ಥಿತ್ಯಂತರ ಕಾಲಘಟ್ಟವಾಗಿರುವ ಈ ಸಂದರ್ಭವನ್ನು ರಾಹುಲ್ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಅವರ ಭವಿಷ್ಯದ ದೃಷ್ಟಿಯಿಂದ ಅತಿಮುಖ್ಯ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು