ಮಂಗಳವಾರ, ಆಗಸ್ಟ್ 3, 2021
24 °C
ಹಿರಿಯ ಮುಖಂಡನ ಉಪಸ್ಥಿತಿ ಅಗತ್ಯ ಮನಗಂಡ ವರಿಷ್ಠರು

ರಾಜ್ಯಸಭೆಗೆ ಖರ್ಗೆ: ಭರವಸೆ ಈಡೇರಿಸಿದ ಸೋನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

‘ಸೋಲಿಲ್ಲದ ಸರದಾರ’ ಎಂದೇ ಹೆಸರಾಗಿದ್ದ ಖರ್ಗೆ ಅವರು ಕಳೆದ ವರ್ಷ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ತವರು ಕ್ಷೇತ್ರ ಕಲಬುರ್ಗಿಯಿಂದ ಸ್ಪರ್ಧಿಸಿ ಬಿಜೆಪಿಯ ಡಾ.ಉಮೇಶ್‌ ಜಾಧವ್‌ ಅವರ ವಿರುದ್ಧ ಸೋಲನುಭವಿಸಿದಾಗ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ನೀಡಿದ್ದ ವಾಗ್ದಾನದಂತೆ ಮತ್ತೆ ಅವರ ಸಂಸತ್‌ ಪ್ರವೇಶಕ್ಕೆ ರಹದಾರಿ ದೊರೆತಿದೆ.

ಲೋಕಸಭೆ ಚುನಾವಣೆಯ ಪರಾಭವದಿಂದ ಅತೀವ ಬೇಸರದಲ್ಲಿದ್ದ ಖರ್ಗೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಮಾತುಗಳನ್ನಾಡಿದ್ದ ಪಕ್ಷದ ಅಧಿನಾಯಕಿ ಸೋನಿಯಾ, ‘ಸಂಸತ್‌ನಲ್ಲಿ ನಿಮ್ಮಂಥ ನಾಯಕರ ಅಗತ್ಯವಿದ್ದು, ಪಕ್ಷ ಆ ಕುರಿತು ಆಲೋಚಿಸುತ್ತಿದೆ. ನೀವು ರಾಜ್ಯಸಭೆಗೆ ಪ್ರವೇಶಿಸಬೇಕಾಗಬಹುದು’ ಎಂದು ಹೇಳಿದ್ದರು. ಅಲ್ಲದೆ, ಸಂಸತ್‌ನ ಮೇಲ್ಮನೆಗೆ ಆಯ್ಕೆ ಮಾಡುವ ಕುರಿತೂ ಭರವಸೆ ನೀಡಿದ್ದರು. ಇದೀಗ ಆ ಭರವಸೆ ಈಡೇರಿಸಿದ್ದಾರೆ.

2014ರಿಂದ 2019ರವರೆಗೆ ಲೋಕಸಭೆಯಲ್ಲಿ ಪ್ರಮುಖ ವಿಪಕ್ಷವಾಗಿದ್ದ ಕಾಂಗ್ರೆಸ್‌ ಗುಂಪಿನ ನಾಯಕ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದ ಖರ್ಗೆ ಅವರು, ಪಕ್ಷ ನಿಷ್ಠೆಗೂ ಮತ್ತೊಂದು ಹೆಸರು. ಈ ಎರಡೂ ಅಂಶಗಳಿದಾಗಿ, ‘ದೆಹಲಿ ರಾಜಕಾರಣದಲ್ಲಿ ಖರ್ಗೆ ಅವರು ಇರಬೇಕು. ಇದ್ದರೆ ಪಕ್ಷಕ್ಕೆ ಒಳಿತು’ ಎಂದು ಸೋನಿಯಾ ಭಾವಿಸಿದ್ದರು. ಅಂತೆಯೇ ಅವರನ್ನು ರಾಜ್ಯಸಭೆಗೆ ಕರೆತರುವ ವಾಗ್ದಾನವನ್ನೂ ನೀಡಿದ್ದರು ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪಕ್ಷದ ರಾಜ್ಯ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸುವ ಗೋಜಿಗೂ ಹೋಗದೇ  ಕಾಂಗ್ರೆಸ್‌ ಹೈಕಮಾಂಡ್‌ ಖರ್ಗೆ ಅವರ ಹೆಸರನ್ನು ಏಕಪಕ್ಷೀಯವಾಗಿ ಅಂತಿಮಗೊಳಿಸಿದೆ. ಸಂಸತ್‌ನಲ್ಲಿ ಖರ್ಗೆ ಅವರಂತಹ ನಾಯಕರ ಉಪಸ್ಥಿತಿಯ ಅಗತ್ಯವಿದೆ ಎಂಬುದು ವರಿಷ್ಠರಿಗೆ ಮನವರಿಕೆ ಆಗಿದ್ದರಿಂದಲೇ ಅವರು ರಾಜ್ಯಸಭೆಗೆ ಬರುವಂತಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ಹಿಂದೆಯೇ ರಾಜಸ್ಥಾನ ಅಥವಾ ತಮಿಳುನಾಡು ವಿಧಾನಸಭೆಗಳಿಂದ ಖರ್ಗೆ ಅವರನ್ನು ರಾಜ್ಯಸಭೆಗೆ ಕರೆಸಿಕೊಳ್ಳುವ ವಿಚಾರ ಮಾಡಲಾಗಿತ್ತು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ರಾಜಸ್ಥಾನದಿಂದ ಆಯ್ಕೆ ಮಾಡುವುದು ಅನಿವಾರ್ಯ ಆಗಿದ್ದರಿಂದ ಕರ್ನಾಟಕ ಮೂಲದ ನಾಯಕನಿಗೆ ಅವಕಾಶ ತಪ್ಪಿತ್ತು. ಮುಂದೆ ತಮಿಳುನಾಡಿನಿಂದ ಅವಕಾಶ ಇದ್ದಾಗಲೂ ಮಿತ್ರಪಕ್ಷವಾದ ಡಿಎಂಕೆ ಸೂಕ್ತವಾಗಿ ಸ್ಪಂದಿಸದ್ದರಿಂದ ಖರ್ಗೆ ಅವರ ರಾಜ್ಯಸಭೆ ಪ್ರವೇಶ ವಿಳಂಬವಾಗಿತ್ತು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು