ಭಾನುವಾರ, ಏಪ್ರಿಲ್ 5, 2020
19 °C

ಅಣ್ಣಾ, ಕಾಂಗ್ರೆಸ್ ಬಿಟ್ಬಿಡಿ: ಕೇಜ್ರಿವಾಲ್ ಹೊಗಳಿದ ಮಿಲಿಂದ್‌ಗೆ ಅಜಯ್ ತಿರುಗೇಟು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಅರವಿಂದ ಕೇಜ್ರಿವಾಲ್ ಅವರು ಮತ್ತೊಂದು ಅವಧಿಗೆ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದನ್ನು ಶ್ಲಾಘಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ ಅವರನ್ನು ಪಕ್ಷದ ಮತ್ತೊಬ್ಬ ನಾಯಕ ಅಜಯ್ ಮಾಕನ್ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಕಡಿಮೆ ತಿಳಿದಿರುವ ಮತ್ತು ಸ್ವಾಗತಾರ್ಹ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ. ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಆದಾಯವನ್ನು ₹ 60,000 ಕೋಟಿಗೆ ದ್ವಿಗುಣಗೊಳಿಸಿದೆ. ಹೆಚ್ಚುವರಿ ಆದಾಯ ಕಾಯ್ದುಕೊಂಡಿದೆ. ಹಣಕಾಸಿನ ವಿಚಾರದಲ್ಲಿ ಅತ್ಯಂತ ವಿವೇಕಯುತ ಸರ್ಕಾರಗಳ ಸಾಲಿನಲ್ಲಿ ಈಗ ದೆಹಲಿ ಕೂಡ ಒಂದಾಗಿದೆ’ ಎಂದು ಮಿಲಿಂದ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಅಜಯ್ ಮಾಕನ್, ‘ಸಹೋದರಾ, ನೀವು ಕಾಂಗ್ರೆಸ್ ಪಕ್ಷ ತ್ಯಜಿಸಬೇಕು ಎಂದು ಬಯಸಿದ್ದರೆ ಹಾಗೆಯೇ ಮಾಡಿ. ನಂತರ ಅರೆಬೆಂದ ಸಂಗತಿಗಳನ್ನು ಪ್ರಚಾರ ಮಾಡಿ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ, ‘ಇನ್ನೂ ಕೆಲವು ಕಡಿಮೆ ತಿಳಿದಿರುವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ’ ಎಂದು ಉಲ್ಲೇಖಿಸಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೆಹಲಿಯ ಆದಾಯಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಎಎಪಿ ಸರ್ಕಾರದ ಅವಧಿಯಲ್ಲಿನ ಆದಾಯದ ಜತೆ ತುಲನೆ ಮಾಡಿದ್ದಾರೆ.

ದೆಹಲಿ ಜನ ಎಎಪಿಯನ್ನು ಗೆಲ್ಲಿಸಿ ಇತರ ರಾಜ್ಯಗಳಿಗೆ ಮಾದರಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇದ್ದರು. ಇದಕ್ಕೆ ದೆಹಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶರ್ಮಿಷ್ಠಾ ಮುಖರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಬಿಜೆಪಿಯನ್ನು ಸೋಲಿಸುವ ಕೆಲಸವನ್ನು ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ನೀಡಿದೆಯೇ? ಇಲ್ಲವೆಂದಾದಲ್ಲಿ, ನಮ್ಮ ಸೋಲಿನ ಬಗ್ಗೆ ಕಾಳಜಿ ವಹಿಸುವ ಬದಲು ಎಎಪಿಯ ವಿಜಯವನ್ನು ಸಂಭ್ರಮಿಸುವುದೇಕೆ? ಹಾಗೆಂದಾದಲ್ಲಿ ನಾವು ನಮ್ಮ ಪಕ್ಷದ ಕಚೇರಿಯನ್ನು ಮುಚ್ಚಬೇಕೇ’ ಎಂದು ಶರ್ಮಿಷ್ಠಾ ಪ್ರಶ್ನಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು