ಸೋಮವಾರ, ಮಾರ್ಚ್ 8, 2021
31 °C
ಕೇಜ್ರಿವಾಲ್‌ ಘೋಷಣೆ

ದೆಹಲಿಯಲ್ಲಿ 200 ಯೂನಿಟ್‌ ವರೆಗಿನ ವಿದ್ಯುತ್‌ ಬಳಕೆ ಉಚಿತ...ಉಚಿತ...!!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಿಳೆಯರಿಗೆ ಉಚಿತ ಮೆಟ್ರೊ ರೈಲು ಪ್ರಯಾಣ ಸೌಲಭ್ಯ ನೀಡುವ ಆಶಯ ವ್ಯಕ್ತಪಡಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಈಗ ರಾಜ್ಯದ ಜನರಿಗೆ ಮತ್ತೊಂದು ಕೊಡುಗೆ ಘೋಷಿಸಿದ್ದಾರೆ. ಜನರು ನಿಗದಿತ ವಿದ್ಯುತ್‌ ಬಳಕೆಗೆ ಯಾವುದೇ ಹಣ ಪಾವತಿಸಬೇಕಿಲ್ಲ!

200 ಯೂನಿಟ್‌ ಮಿತಿಯೊಳಗೆ ಬಳಸುವ ವಿದ್ಯುತ್‌ಗೆ ಜನರು ಇನ್ನು ಮುಂದೆ ಹಣ ಪಾವತಿಸಬೇಕಿಲ್ಲ. ದೆಹಲಿ ಸರ್ಕಾರವು 200 ಯೂನಿಟ್‌ ವರೆಗಿನ ವಿದ್ಯುತ್‌ಗೆ ಪೂರ್ಣ ಸಬ್ಸಿಡಿ ನೀಡಲಿದೆ ಎಂದು ಕೇಜ್ರಿವಾಲ್‌ ಗುರುವಾರ ಘೋಷಿಸಿದ್ದಾರೆ. 201 ರಿಂದ 400 ಯೂನಿಟ್‌ ವರೆಗಿನ ವಿದ್ಯುತ್‌ ಬಳಕೆ ದರಕ್ಕೆ ಶೇ 50ರಷ್ಟು ಸಬ್ಸಿಡಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. 

‘ದೆಹಲಿಯಲ್ಲಿ 200 ಯೂನಿಟ್‌ ವರೆಗೂ ವಿದ್ಯುತ್‌ ಬಳಸಿರುವವರಿಗೆ; ವಿದ್ಯುತ್‌ ಬಳಕೆಗೆ ನಿದಗಿಯಾಗಿದ್ದ ದರ ಪಾವತಿಸುವ ಅಗತ್ಯವಿಲ್ಲ’ ಎಂದು ಎಎಪಿ ಮುಖ್ಯಸ್ಥರೂ ಆಗಿರುವ ಕೇಜ್ರಿವಾಲ್‌ ಹೇಳಿದ್ದಾರೆ. ಇಂದಿನಿಂದಲೇ ಈ ಕೊಡುಗೆ ಅನ್ವಯವಾಗಲಿದೆ. 

ವಿದ್ಯುತ್‌ ಕೊಡುಗೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹1,800 ಕೋಟಿಯಿಂದ ₹2,000 ಕೋಟಿ ಹೊರೆಯಾಗಲಿದೆ. 200 ಯೂನಿಟ್‌ ವಿದ್ಯುತ್‌ ಬಳಕೆಗೆ ಯಾವುದೇ ದರ ಇಲ್ಲದ ಕಾರಣ, ಜನರು ವಿದ್ಯುತ್‌ ಉಳಿತಾಯ ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ ಎಂಬ ಭರವಸೆಯನ್ನು ಕೇಜ್ರಿವಾಲ್‌ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ವಿದ್ಯುತ್‌ ಬಳಕೆ ಪ್ರಮಾಣ 7,400 ಮೆಗಾವ್ಯಾಟ್‌ ಮುಟ್ಟಿತ್ತು. ಅಧಿಕಾರಿಗಳ ಪ್ರಕಾರ, ಬೇಸಿಗೆ ಸಮಯದಲ್ಲಿ ಒಟ್ಟು ವಿದ್ಯುತ್‌ ಬಳಕೆದಾರರ ಪೈಕಿ ಶೇ 35ರಷ್ಟು ಜನರು 200 ಯೂನಿಟ್‌ ಬಳಸುತ್ತಾರೆ. ಅದೇ ಚಳಿಗಾಲದಲ್ಲಿ ಶೇ 70ರಷ್ಟು ಜನರು 200 ಯೂನಿಟ್‌ ಮಿತಿಯೊಳಗೆ ವಿದ್ಯುತ್‌ ಬಳಸುತ್ತಾರೆ.  

2015ರ ಫೆಬ್ರುವರಿ, ಎಎಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ವಿದ್ಯುತ್‌ ಬಿಲ್‌ಗಳ ಮೇಲೆ ಶೇ 50ರಷ್ಟು ಸಬ್ಸಿಡಿ ಸೌಲಭ್ಯ ನೀಡಿದೆ. 

‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೆಹಲಿ ಸರ್ಕಾರ ವಿದ್ಯುತ್‌ ದರದಲ್ಲಿ ಒಮ್ಮೆಯೂ ಏರಿಕೆಯಾಗಲು ಅವಕಾಶ ನೀಡಿಲ್ಲ. ದೆಹಲಿಯ ಜನರು ಪ್ರಾಮಾಣಿಕ ಸರ್ಕಾರವನ್ನೇ ಚುನಾಯಿಸಿದ್ದಾರೆ. ದೇಶದಲ್ಲಿಯೇ ಇಲ್ಲಿ ಮಾತ್ರ ಅತಿ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಸರ್ಕಾರದ ಉಚಿತ ಕೊಡುಗೆಗಳ ಬಗೆಗೆ ಏಳಬಹುದಾದ ಟೀಕೆಗಳಿಗೆ ಪ್ರತಿಯಾಗಿ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ’ದೇಶದಲ್ಲಿ ಅಧಿಕಾರಿಗಳು ಹಾಗೂ ಪ್ರಮುಖ ನಾಯಕರಿಗೆ ಉಚಿತ ವಿದ್ಯುತ್‌ ಪೂರೈಕೆಯಾಗುತ್ತಿರುವ ಬಗ್ಗೆ ಏಕೆ ಯಾರೊಬ್ಬರೂ ಮಾತನಾಡುತ್ತಿಲ್ಲ?’ ಎಂದಿದ್ದಾರೆ. 

‘ಅಂಥದ್ದೇ ಸೌಲಭ್ಯವನ್ನು ದಿನದ 24 ತಾಸು ದುಡಿಯುವ ನನ್ನ ‘ಆಮ್‌ ಆದ್ಮಿ’(ಜನ ಸಾಮಾನ್ಯ)ಗೆ ಒದಗಿಸಲು ಮುಂದಾಗಿದ್ದೇನೆ’ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು