ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು: ಅಣ್ಣಾ ಹಜಾರೆ

ಮುಂಬೈ: ಒಸ್ಮಾನಾಬಾದ್ನ ತೆರ್ನಾ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಕಾರಣಕ್ಕೆ ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸಿಬಿಐನ ವಿಶೇಷ ಕೋರ್ಟ್ಗೆ ಹೇಳಿಕೆ ನೀಡಿದ್ದಾರೆ.
2006ರ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಪವನ್ ರಾಜೇ ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಅಣ್ಣ ಹಜಾರೆ ಅವರು ನ್ಯಾಯಮೂರ್ತಿಗಳಾದ ಆನಂದ್ ಯಾವಲ್ಕರ್ ನೇತೃತ್ವದ ಸಿಬಿಐ ವಿಶೇಷ ಕೋರ್ಟ್ ಎದುರು ಮಂಗಳವಾರ ಹಾಜರಾಗಿದರು.
ಮಹಾರಾಷ್ಟ್ರದ ಮಾಜಿ ಸಚಿವ, ಎನ್ಸಿಪಿಯ ನಾಯಕ, ಒಸ್ಮಾನಾಬಾದ್ ಸಕ್ಕರೆ ಕಾರ್ಖಾನೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಪದ್ಮ ಸಿನ್ಹಾ ಪಾಟೀಲ್ ಅವರು ನಿಂಬಾಳ್ಕರ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ. ನಿಂಬಾಳ್ಕರ್ ಅವರು ಪಾಟೀಲ್ಗೆ ಸೋದರ ಸಂಬಂಧಿಯೂ ಆಗಿದ್ದರು.
‘ನಿಂಬಾಳ್ಕರ್ ಕೊಲೆ ಬಗ್ಗೆ ಅಣ್ಣಾ ಹಜಾರೆ ಅವರಿಗೆ ಮಾಹಿತಿ ಇತ್ತು. ಹಾಗಾಗಿ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ, ವಿಚಾರಣೆ ನಡೆಸಬೇಕು,’ ಎಂದು ಮೃತ ನಿಂಬಾಳ್ಕರ್ ಪತ್ನಿ ಆನಂದಿದೇವಿ ಅವರು ನ್ಯಾಯಾಲಯವನ್ನು ಕೋರಿದ್ದರು. ಆದರೆ, ಅದನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತ್ತು. ನಂತರ ಆನಂದಿದೇವಿ ಅವರು ಸುಪ್ರೀಂ ಕೋರ್ಟ್ಗೆ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಣ್ಣಾ ಹಜಾರೆ ಅವರನ್ನೂ ಸಾಕ್ಷಿಯಾಗಿ ಪರಿಗಣಿಸುವಂತೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರು ಮಂಗಳವಾರ ಸಿಬಿಐ ಕೋರ್ಟ್ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ.
‘ಪದ್ಮ ಸಿನ್ಹಾ ಪಾಟೀಲ್ ಅವರು ಒಬ್ಬ ಜನಪ್ರತಿನಿಧಿ ಎಂಬುದು ನನಗೆ ಗೊತ್ತು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಈ ಬಗ್ಗೆ ನಾನು ಅವರ ಮೇಲೆ ಆರೋಪಗಳನ್ನೂ ಮಾಡಿದ್ದೇನೆ. ಭ್ರಷ್ಟಾರದ ತನಿಖೆಗೆ ಸಮಿತಿಗಳೂ ನೇಮಕವಾಗಿವೆ. ನಿಂಬಾಳ್ಕರ್ ಅವರ ಹತ್ಯೆ ನನಗೆ ಮಾಧ್ಯಮಗಳ ಮೂಲಕವಷ್ಟೇ ಗೊತ್ತು. ಅಲ್ಲದೆ, ತೆರ್ನಾ ಸಕ್ಕರೆ ಕಾರ್ಖಾನೆ ವಿರುದ್ಧ ದನಿ ಎತ್ತಿದ್ದಕ್ಕೆ ನನ್ನನ್ನು ಕೊಲ್ಲಲು ಸುಪಾರಿಯನ್ನೂ ನೀಡಲಾಗಿತ್ತು ಎಂದು ಗೊತ್ತಾಯಿತು. ಹಾಗಾಗಿ ನಾನು ಪೊಲೀಸರಿಗೆ ದೂರು ನೀಡಿದ್ದೆ. ಇದಕ್ಕೂ ಮೊದಲು ನಾನು ಪ್ರಧಾನಿ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೂ ವಿಷಯ ಗಮನಕ್ಕೆ ತಂದಿದ್ದೆ. ಅವರ್ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಿದ್ದೆ,‘ ಎಂದು ಅವರು ಕೋರ್ಟ್ನಲ್ಲಿ ಹೇಳಿದ್ದಾರೆ.
ಪದ್ಮಸಿನ್ಹಾ ಅವರ ನಂಟಿರುವ ಒಸ್ಮಾನಾಬಾದ್ ತೇರ್ನಾ ಸಕ್ಕರೆ ಕಾರ್ಖಾನೆಯ ಅವ್ಯವಹಾರಗಳ ವಿರುದ್ಧ ಅಣ್ಣಾ ಹಜಾರೆ ಹೋರಾಟಗಳನ್ನು ಮಾಡಿದ್ದರು. ಇದು ಪದ್ಮಸಿನ್ಹಾ ಅವರ ಕೆಂಗಣ್ಣಿಗೆ ಕಾರಣವಾಗಿತ್ತು ಎನ್ನಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.