ಶುಕ್ರವಾರ, ಜನವರಿ 21, 2022
30 °C

ಲಾಕ್‌ಡೌನ್ ಬಿಟ್ಟು ಬೇರೆ ದಾರಿ ಇರಲಿಲ್ಲ, ದಯಮಾಡಿ ಕ್ಷಮಿಸಿ: ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್ ನಿರ್ಧಾರ ಬಿಟ್ಟು ಬೇರೆ ದಾರಿ ಇರಲಿಲ್ಲ, ನಿಮಗೆ ತೊಂದರೆಯಾಗಿದ್ದರೆ ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿಕೊಂಡರು.

ಭಾನುವಾರ ಬೆಳಗ್ಗೆ ತಮ್ಮ ಜನಪ್ರಿಯ ಕಾರ್ಯಕ್ರಮ 'ಮನ್‌ ಕೀ ಬಾತ್‌'ನಲ್ಲಿ ಮಾತನಾಡಿದ ಅವರು ದೇಶದಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್‌ ಅನಿವಾರ್ಯವಾಗಿತ್ತು ಎಂದು ಹೇಳಿದರು.

ಲಾಕ್‌ಡೌನ್‌ ನಿಯಮ ಮುರಿದರೆ ಕೊರೊನಾ ಸೋಂಕಿನಿಂದ ಬಚಾವಾಗುವುದಕ್ಕೆ ಸಾಧ್ಯವಿಲ್ಲ ಎಂದು ಅವರು ನುಡಿದರು.

ಇದೇ ಕೋವಿಡ್‌-19 ಪ್ರಕರಣಗಳ ಪರೀಕ್ಷೆ ನಡೆಸುತ್ತಿರುವ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರು ಸದಾ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಪರಿವಾರವನ್ನು ನೆನಪಿಸಿಕೊಳ್ಳಿ. ಎಲ್ಲ ಮುನ್ನೆಚ್ಚರಿಕೆಗಳನ್ನು ತಪ್ಪದೆ ಪಾಲಿಸಿ' ಎಂದು ತಿಳಿಹೇಳಿದರು.

ಕೋವಿಡ್‌-19 ಹರಡುವಿಕೆ ತಡೆಗಟ್ಟುವ, ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುವ ಕ್ರಿಯೆಯಲ್ಲಿ ತೊಡಗಿಸಿಕೊಂಡವರನ್ನು ನೆನಪಿಸಿಕೊಂಡಿರುವ ಮೋದಿ, 'ಹಣದ ಆಸೆ ಬಿಟ್ಟು, ಜೀವದಯೆಯಿಂದ ವೈದ್ಯರು ಕೆಲಸ ಮಾಡಬೇಕು ಎಂದು ಚರಕರು ಹೇಳಿದ್ದರು. ಈಗಿನ ವೈದ್ಯರು ಅದೇ ರೀತಿ ಕೆಲಸ ಮಾಡುತ್ತಿದ್ದಾರೆ' ಎಂದರು.

ಆಶಾ ಕಾರ್ಯಕರ್ತೆಯರು, ನರ್ಸ್‌, ಲ್ಯಾಬ್ ಟೆಕ್ನಿಷಿಯನ್‌ಗಳ ಬಗ್ಗೆ ದೇಶ ಕಾಳಜಿ ಮಾಡುತ್ತಿದೆ. ನಮ್ಮ ನರ್ಸ್‌ ಸೋದರಿಯರು ಫ್ಲಾರೆನ್ಸ್ ನೈಂಟಿಗೇಲ್ ಪ್ರತಿಪಾದಿಸಿದ ಆಶಯಗಳನ್ನು ಎತ್ತಿಹಿಡಿಯುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದೇ ವೇಳೆ ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟ ಎದುರಿಸುತ್ತಿರುವ ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಮೋದಿ, 'ನಮ್ಮ ದೇಶದಲ್ಲಿ ಸಾಕಷ್ಟು ಜನರು ನಿಜ ಜೀವನದ ಹೀರೊಗಳಾಗಿ ಹೊರಹೊಮ್ಮುತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿಯೂ ದಿನಸಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಚಾಲಕರು ಅವಶ್ಯಕ ವಸ್ತುಗಳ ಸಾಗಣೆಗೆ ಶ್ರಮಿಸುತ್ತಿದ್ದಾರೆ. ಬ್ಯಾಂಕ್‌ಗಳನ್ನು ತೆರೆಯಲು ಸಿಬ್ಬಂದಿ ಹಿಂಜರಿಯುತ್ತಿಲ್ಲ. ಅವರೆಲ್ಲರಿಗೂ ನಮ್ಮ ಧನ್ಯವಾದಗಳು' ಎಂದು ಹೇಳಿದರು.

ಸೋಂಕಿತರ ಅವಹೇಳನ ಮಾಡಬೇಡಿ

ಕೋವಿಡ್-19 ದೃಢಪಟ್ಟಿರುವವನ್ನು ಕೀಳಾಗಿ ಕಾಣಬೇಡಿ. ಅದರಲ್ಲಿ ಅವರ ತಪ್ಪು ಏನೂ ಇಲ್ಲ. ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಕಾರಣಕ್ಕೆ ಅವರನ್ನು ದೈಹಿಕವಾಗಿ ಪ್ರತ್ಯೇಕವಾಗಿ ಇಡಬೇಕಾಗಿದೆ. ಭಾವನಾತ್ಮಕವಾಗಿ ಅವರನ್ನು ದೂರ ಮಾಡಬೇಡಿ. ಅವರನ್ನು ಪ್ರೀತಿಯಿಂದ ಕಾಣಿ. ಗುಣಮುಖವಾಗಲು ನೆರವಾಗಿ ಎಂದು ಮೋದಿ ಒತ್ತಿ ಹೇಳಿದರು.

ಲಾಕ್‌ಡೌನ್ ಅವಧಿಯ ಸದುಪಯೋಗ ಮಾಡಿಕೊಳ್ಳಿ

ಜನರು ಲಾಕ್‌ಡೌನ್‌ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದಿರುವ ಮೋದಿ, 'ಲಾಕ್‌ಡೌನ್ ಅವಧಿಯಲ್ಲಿ ಹಲವರು ಇಷ್ಟದ ಪುಸ್ತಕಗಳನ್ನು ಓದುತ್ತಿದ್ದಾರೆ. ಸಂಗೀತ ಅಭ್ಯಾಸ ಆರಂಭಿಸಿದ್ದಾರೆ. ಹಳೆಯ ಸ್ನೇಹಿತರೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ನೀವು ಇಂಥದ್ದೇನಾದರೂ ಮಾಡಬಹುದು' ಎಂದು ಹೇಳಿದರು.

ಬಡವರನ್ನು ಪ್ರೀತಿಯಿಂದ ಕಾಣಲು ಮೋದಿ ಸಲಹೆ

ಬಡವರನ್ನು ಪ್ರೀತಿಯಿಂದ ಕಾಣೋಣ. ಮೊದಲು ಅವರ ಹೊಟ್ಟೆ ತುಂಬಿಸಲು ಯತ್ನಿಸೋಣ. ಇದು ನಮ್ಮ ಸಂಸ್ಕೃತಿ. ಇಂದು ಎಲ್ಲ ಭಾರತೀಯರು ಮನೆಗಳಲ್ಲಿ ಬಂಧಿಗಳಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದೇ ಭಾರತೀಯ ಕಷ್ಟಪಟ್ಟು ದುಡಿದು ದೇಶ ಕಟ್ಟುತ್ತಾನೆ ಎಂಬ ಆಶಯವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. 

ಕೊರೊನಾ ವಿರುದ್ಧದ ಯುದ್ದವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ದೇಶದ ಜನರಲ್ಲಿ ಮೋದಿ ಭರವಸೆ ತುಂಬಿದರು.

ಇಂದಿನ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ವೈದ್ಯರು, ಕೋವಿಡ್‌-19ನಿಂದ ಹೊರಬಂದವರು ತಮ್ಮ ಅಭಿಪ್ರಾಯ ಹಂಚಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು