ಶುಕ್ರವಾರ, ಏಪ್ರಿಲ್ 3, 2020
19 °C

ಕೊರೊನಾ: ಆತಂಕಕ್ಕಿಲ್ಲ ಕಾರಣ, ಹರಡುವಿಕೆ ಕಂಡು ಬಂದಿಲ್ಲ ಎಂದ ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್‌19 ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಜನರು ಆತಂಕಗೊಳ್ಳುವ ಅಗತ್ಯವೇನೂ ಇಲ್ಲ. ಸಾಮುದಾಯಿಕವಾಗಿ ಇಲ್ಲಿ ವೈರಸ್‌ ಹರಡುತ್ತಿಲ್ಲ. ಸ್ಥಳೀಯವಾಗಿ ಸೋಂಕು ಹರಡಿದ ಕೆಲವು ಪ್ರಕರಣಗಳಷ್ಟೇ ಇಲ್ಲಿ ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿದೇಶದಲ್ಲಿರುವ ಭಾರತದ ಪ್ರಜೆಗಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಇರಾನ್‌ನಲ್ಲಿರುವ ಭಾರತೀಯರನ್ನು ಕರೆತರಲು ಶುಕ್ರವಾರದಿಂದ ಕಾರ್ಯಾಚರಣೆ ಆರಂಭವಾಗಲಿದೆ. ಮೂರು ಕಾರ್ಯಾಚರಣೆಗಳು ಬೆನ್ನುಬೆನ್ನಿಗೆ ನಡೆಯಲಿವೆ ಎಂದು ಸರ್ಕಾರ ಹೇಳಿದೆ. 

ಪಿಡುಗು ಎಂದು ಕೊರೊನಾ–2 ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಸೋಂಕು ದೃಢಪಟ್ಟ 74 ಮಂದಿಯ ಸಂಪರ್ಕಕ್ಕೆ ಬಂದಿದ್ದ 1,500 ಮಂದಿಯ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಇವರಲ್ಲದೆ, ಇತರ 30 ಸಾವಿರ ಮಂದಿಯ ಮೇಲೆಯೂ ನಿಗಾ ಇದೆ. ಭಾರತದಲ್ಲಿ ಈಗಾಗಲೇ ಒಂದು ಲಕ್ಷ ಪರೀಕ್ಷಾ ಕಿಟ್‌ಗಳು ಇವೆ. ಇನ್ನಷ್ಟು ಕಿಟ್‌ಗಳನ್ನು ತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ. 

ಲಸಿಕೆಗೆ ಬೇಕು 2 ವರ್ಷ
ಕೊರೊನಾ ವೈರಸ್‌ ಅನ್ನು ಪ್ರತ್ಯೇಕಿಸುವುದು ಕಷ್ಟದ ಕೆಲಸ. ಹಾಗಿದ್ದರೂ ಪುಣೆಯ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿಯ ವಿಜ್ಞಾನಿಗಳು 11 ಮಂದಿಯಿಂದ ವೈರಸ್‌ ಅನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಲಸಿಕೆ ತಯಾರಿಸಲು ಒಂದೂವರೆಯಿಂದ ಎರಡು ವರ್ಷ ಬೇಕು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು
ತಿಳಿಸಿದ್ದಾರೆ. 

ಪ್ರವಾಸೋದ್ಯಮಕ್ಕೆ ₹8,500 ಕೋಟಿ ನಷ್ಟ
ಕೊರೊನಾ-2 ಪಿಡುಗಿನಿಂದಾಗಿ ಭಾರತದ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದೆ. ವೀಸಾ ಅಮಾನತು ಮತ್ತು ಕೊರೊನಾ ವೈರಸ್‌ ಹರಡುವ ಭೀತಿಯಿಂದಾಗಿ ದೇಶಕ್ಕೆ ಬರುವ ವಿದೇಶಿಯರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ. ಪ್ರವಾಸ ಆಯೋಜಕರು, ಹೋಟೆಲ್‌ಗಳು, ನಾಗರಿಕ ವಿಮಾನಯಾನ ಉದ್ಯಮದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಈ ಉದ್ಯಮಗಳು ಏನಿಲ್ಲವೆಂದರು ₹8,500 ಕೋಟಿಯಷ್ಟು ವರಮಾನ ಕಳೆದುಕೊಳ್ಳಲಿವೆ ಎಂದು ಅಂದಾಜಿಸಲಾಗಿದೆ. 

ಕೊರೊನಾ-2 ಒಂದು ಪಿಡುಗು ಎಂದು ವಿಶ್ವಸಂಸ್ಥೆ ಘೋಷಿಸಿದ ಬಳಿಕ ಕಾಯ್ದಿರಿಸಿದ ವಿಮಾನ ಟಿಕೆಟ್‌ಗಳು, ಹೋಟೆಲ್‌ ಕೊಠಡಿಗಳನ್ನು ಪ್ರವಾಸಿಗರು ರದ್ದು ಮಾಡಲು ಆರಂಭಿಸಿದ್ದಾರೆ.  ಹೋಟೆಲ್‌ಗಳ ಕನಿಷ್ಠ ಶೇ 40ರಷ್ಟು ಕೊಠಡಿಗಳು ಖಾಲಿ ಬಿದ್ದಿವೆ. ಔತಣಕೂಟಗಳು ಕೂಡ ರದ್ದಾಗುತ್ತಿವೆ ಎಂದು ಉದ್ಯಮ ಸಂಘಟನೆಗಳು ಹೇಳಿವೆ.

ಪ್ರವಾಸ ಆಯೋಜಕರ ಜನವರಿ–ಮಾರ್ಚ್‌ ಅವಧಿಯ ವರಮಾನವು ಶೇ 60ರಷ್ಟು ಇಳಿಕೆಯಾಗಲಿದೆ. ಭಾರತಕ್ಕೆ ಪ್ರತಿ ತಿಂಗಳು ಸುಮಾರು 10 ಲಕ್ಷ ಪ್ರವಾಸಿಗರು ಬರುತ್ತಾರೆ. ಆದರೆ, ವೀಸಾ ಅಮಾನತಿನಿಂದಾಗಿ ಮುಂದಿನ ಒಂದೆರಡು ತಿಂಗಳು ಈ ಸಂಖ್ಯೆ ಪಾತಾಳಕ್ಕೆ ಕುಸಿಯಲಿದೆ. 

ಈ ಬಿಕ್ಕಟ್ಟು ಉದ್ಯೋಗ ನಷ್ಟಕ್ಕೂ ಕಾರಣವಾಗಬಹುದು. ಭಾರಿ ನಷ್ಟದ ಭೀತಿಯಲ್ಲಿರುವ ಈ ಉದ್ದಿಮೆಗಳು ಅನಗತ್ಯ ನೌಕರರನ್ನು ಮನೆಗೆ ಕಳುಹಿಸಬಹುದು. ವೀಸಾ ಅಮಾನತು ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಉದ್ದಿಮೆ ಸಂಘಟನೆಗಳು ಒತ್ತಾಯಿಸಿವೆ.

ನಕಲಿ ಲಸಿಕೆ: ಮೂವರ ಬಂಧನ 
ಜಲ್ನಾ(ಮಹಾರಾಷ್ಟ್ರ) (ಪಿಟಿಐ):
ಕೊರೊನಾ ವೈರಸ್‌ಗೆ ನಕಲಿ ಲಸಿಕೆ ಹಾಕುತ್ತಿದ್ದ ಮೂವರು ಮಹಿಳೆಯರನ್ನು ಗುರುವಾರ ಬಂಧಿಸಲಾಗಿದೆ.

ಬೀಡ್ ನಿವಾಸಿಗಳಾದ ರಾಧಾ ರಾಮನಾಥ ಸಾಮ್ಸೆ, ಸೀಮಾ ಕೃಷ್ಣ ಆಂಧಲೆ ಹಾಗೂ ಸಂಗೀತ ರಾಜೇಂದ್ರ ಆವ್ಹಾಡ್ ಬಂಧಿತ ಆರೋಪಿಗಳು.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಎಂದು ಸುಳ್ಳು ಹೇಳಿ ಇವರು ಜನರನ್ನು ವಂಚಿಸುತ್ತಿದ್ದರು. ಆರೋಪಿಗಳು ಜಲ್ನಾ ಜಿಲ್ಲೆಯ ಅಂಬಾದ್ ತಾಲ್ಲೂಕಿನ ಪೀಪಲ್‌ಗಾಂವ್ ಗ್ರಾಮಕ್ಕೆ ತೆರಳಿಕೊರೊನಾ ವೈರಸ್ ತಡೆಗೆ ನೀಡುವ ಲಸಿಕೆ ತಮ್ಮ ಬಳಿ ಇದೆ ಎಂದು ಜನರನ್ನು ನಂಬಿಸುತ್ತಿದ್ದರು. ಇವರನ್ನು ನೋಡಿದ ಕೆಲ ಗ್ರಾಮಸ್ಥರು ಸ್ಥಳೀಯ ವೈದ್ಯಾಧಿಕಾರಿಗೆ ದೂರು ನೀಡಿದರು. ತಕ್ಷಣ ದಾಳಿ ನಡೆಸಿದ ಅಧಿಕಾರಿಗಳು ನಕಲಿ ಲಸಿಕೆ ಮತ್ತು ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ದೊಡ್ಡ ಗಾತ್ರದ ವೈರಸ್‌: ದಿಲೀಪ್‌ ಘೋಷ್‌
ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು ಕೊರೊನಾ ವೈರಸ್‌ ನಿಯಂತ್ರಣಕ್ಕೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ಕೊರೊನಾ ವೈರಸ್‌ ಗಾತ್ರದಲ್ಲಿ ಬಹಳ ದೊಡ್ಡದು. ಹಾಗಾಗಿ, ಮನೆಯಲ್ಲಿ ಸಾಮಾನ್ಯ ಬಟ್ಟೆಯಿಂದ ತಯಾರಿಸಿದ ಗವಸುಗಳನ್ನು ಬಳಸಿದರೆ ಸಾಕು ಎಂದಿದ್ದಾರೆ. 

ಸಾಮಾನ್ಯ ಬಟ್ಟೆಯ ಗವಸಿನಿಂದ ವೈರಸ್‌ ಅನ್ನು ತಡೆಯಬಹುದು ಎಂದು ವಿಜ್ಞಾನಿಗಳೇ ತಮಗೆ ಹೇಳಿದ್ದಾರೆ. ಈಗ, ಮುಖಗವಸು ಲಭ್ಯತೆ ಕಡಿಮೆ ಇದೆ. ಹಾಗಾಗಿ, ಸ್ವಚ್ಛ ಬಟ್ಟೆಯ ಗವಸುಗಳನ್ನು ಜನರು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. 

ಕೊರೊನಾ ಕಾರುಬಾರು
* ದೊಡ್ಡ ಸಾರ್ವಜನಿಕ ಸಮಾರಂಭಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ತಿಳಿಸಿದ್ದಾರೆ

* ಕೊರೊನಾ -2 ಸೋಂಕು ವ್ಯಾಪಕವಾಗಿರುವ ದೇಶಗಳಿಂದ ಕರೆತರುವ ಭಾರತೀಯರನ್ನು ಪ್ರತ್ಯೇಕಿಸಲಾದ ಕೇಂದ್ರದಲ್ಲಿ ಇರಿಸಲು ಏಳು ಹೊಸ ಕೇಂದ್ರಗಳನ್ನು ರಕ್ಷಣಾ ಸಚಿವಾಲಯವು ಆರಂಭಿಸಲಿದೆ.

* ಪ್ರಯಾಣ ನಿರ್ಬಂಧ, ವಿವಿಧ ದೇಶಗಳಲ್ಲಿ ವೈರಸ್‌ ವ್ಯಾಪಿಸಿರುವುದರಿಂದ ಮಾಹಿತಿ ತಂತ್ರಜ್ಞಾನ ಕಂಪನಿಗಳ ವರಮಾನ ಕುಸಿಯಲಿದೆ.

* ಕೊರೊನಾ-2 ಅನ್ನು ಪಿಡುಗು ಎಂದು ದೆಹಲಿ ಸರ್ಕಾರ ಘೋಷಿಸಿದೆ. ಅಲ್ಲಿನ ಸಿನಿಮಾ ಮಂದಿರಗಳು, ಶಾಲೆ ಮತ್ತು ಕಾಲೇಜುಗಳನ್ನು ಇದೇ 31ರವರೆಗೆ ಮುಚ್ಚಲು ಆದೇಶಿಸಿದೆ. ಶಾಲೆ–ಕಾಲೇಜುಗಳಲ್ಲಿ ಪರೀಕ್ಷೆ ಮಾತ್ರ ಅವಕಾಶ ನೀಡಲಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು