ಶುಕ್ರವಾರ, ಜೂನ್ 5, 2020
27 °C

ಕಟ್ಟಿಗೆಯ ಗಾಡಿಯಲ್ಲಿ ಗರ್ಭಿಣಿ ಪತ್ನಿಯನ್ನು ಕುಳ್ಳಿರಿಸಿ ಕರೆದೊಯ್ದ ವಲಸೆ ಕಾರ್ಮಿಕ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

migrant

ಭೋಪಾಲ್ : ಮಧ್ಯಪ್ರದೇಶದ ವಲಸೆ ಕಾರ್ಮಿಕ ರಾಮು ಹೈದರಾಬಾದ್‌ನಿಂದ ಪಯಣ ಆರಂಭಿಸಿದ್ದು ಗರ್ಭಿಣಿ ಪತ್ನಿ ಧನವಂತಾ ಮತ್ತು ಪುಟ್ಟ ಮಗು ಅನುರಾಗಿಣಿ ಜತೆ. ಲಾಕ್‌ಡೌನ್ ಕಾರಣ ಊರಿಗೆ ಹೋಗಲು ಯಾವುದೇ ವಾಹನ ಸಿಗಲಿಲ್ಲ.ಹಾಗಾಗಿ ತನ್ನ ಪತ್ನಿಯನ್ನು ಮರದ ಹಲಗೆ ಮತ್ತು ಕಟ್ಟಿಗೆಯಿಂದ ಮಾಡಿದ ಗಾಡಿಯೊಂದರಲ್ಲಿ ಕೂರಿಸಿ ರಸ್ತೆಯಲ್ಲಿ ಆ ಗಾಡಿ ಎಳೆದುಕೊಂಡು ಹೋಗಿದ್ದಾನೆ.

ರಾಮು ತನ್ನ ಪತ್ನಿ ಮತ್ತು 2 ವರ್ಷದ ಮಗುವನ್ನು ಗಾಡಿಯಲ್ಲಿ ಕೂರಿಸಿಕೊಂಡು ಎಳೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಅಂದಹಾಗೆ ರಾಮು ಮತ್ತು ಕುಟುಂಬ ಮಂಗಳವಾರ ಬಲಘಾಟ್ ಜಿಲ್ಲೆಗೆ ತಲುಪಿದೆ.

ನನ್ನ ಮಗಳನ್ನು ಹೊತ್ತು ನಡೆಯಲು ಪ್ರಯತ್ನಿಸಿದ್ದೆ.  ಆದರೆ ಗರ್ಭಿಣಿ ಪತ್ನಿಗೆ ನಡೆಯುವುದು ಕಷ್ಟವಾಗಿತ್ತು.ಹಾಗಾಗಿ  ನಾನು ಕಟ್ಟಿಗೆಯಿಂದ ಗಾಡಿಯೊಂದನ್ನು ತಯಾರಿಸಿ ಬಲಘಾಟ್‌ವರೆಗೆ ಎಳೆದುಕೊಂಡು ಬಂದೆ. ಊಟ ತಿಂಡಿ ಏನೂ ಮಾಡಿಲ್ಲ  ಎಂದು ರಾಮು ಹೇಳಿದ್ದಾರೆ.

ಮಹಾರಾಷ್ಟ್ರಕ್ಕೆ ತಲುಪಿದಾಗ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ನಿತೇಶ್ ಭಾರ್ಗವ ಅವರ ನೇತೃತ್ವದ ಪೊಲೀಸರು ಆಹಾರ ನೀಡಿದ್ದಾರೆ. ಅವರೇ ಚಪ್ಪಲಿ ಕೂಡಾ ಕೊಟ್ಟರು.ಅಲ್ಲಿಂದ ನಮ್ಮನ್ನು ಬಲಘಾಟ್‌ಗೆ ವಾಹನದಲ್ಲಿ ಕಳಿಸಿಕೊಟ್ಟರು ಅಂತಾರೆ ರಾಮು
ಈ ಕುಟುಂಬವನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ 14 ದಿನ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ ಎಂದು ಭಾರ್ಗವ ಹೇಳಿದ್ದಾರೆ.

ಘಟನೆ- 2
ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕರೊಬ್ಬರು ಎತ್ತಿನ ಗಾಡಿಯಲ್ಲಿ ಸಹೋದರ ಮತ್ತು ಅತ್ತೆಯನ್ನು ಕರೆದೊಯ್ಯುತ್ತಿರುವ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಂದೇ ಒಂದು ಎತ್ತು ಗಾಡಿಯನ್ನೆಳೆಯುತ್ತಿದ್ದು ಅದರ ಜತೆ ಆ ಯುವಕ ಹೆಗಲು ನೀಡಿದ್ದಾರೆ. ನಾವು ಬೆಳಗ್ಗೆ ಮಹೌನಿಂದ ಹೊರಟಿದ್ದು ಪತ್ತಾರ್ ಮುಂಡ್ಲಾ ಗ್ರಾಮಕ್ಕೆ ತಲುಪಬೇಕಿದೆ. ಲಾಕ್‍ಡೌನ್‌ನಿಂದಾಗಿ ಯಾವುದೇ ವಾಹನ ಸಿಗದೇ ಇದ್ದಾಗ ಎತ್ತಿನ ಗಾಡಿಯಲ್ಲಿ ಪಯಣ ಆರಂಭಿಸಿದೆವು. ಇಂದೋರ್ ಜಿಲ್ಲೆಯ ಮಹೌ ಈತನ ಗ್ರಾಮದಿಂದ ಸುಮಾರು 25 ಕಿಮೀ ದೂರದಲ್ಲಿದೆ.

ಘಟನೆ-3
 ವಲಸೆ ಕಾರ್ಮಿಕರ ಕುಟುಂಬವೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದು, ಪುಟ್ಟ ಬಾಲಕನೊಬ್ಬ ಸೂಟ್‌ಕೇಸ್ ಮೇಲೆ ಮಲಗಿ ಆ ಸೂಟ್‌ಕೇಸ್‌ನ್ನು  ಮಹಿಳೆಯೊಬ್ಬರು ಎಳೆದೊಯ್ಯುತ್ತಿರುವ ದೃಶ್ಯ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಘಟನೆ-4
ಬಿಹಾರದ ಕತಿಹಾರ್ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಬಿಸ್ಕೆಟ್‌ ಪ್ಯಾಕೆಟ್‌ಗಾಗಿ ಮುಗಿಬೀಳುತ್ತಿರುವ ದೃಶ್ಯವೂ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆ ವಿಡಿಯೊಗಳು ಲಾಕ್‌ಡೌನ್ ಹೊತ್ತಲ್ಲಿ ವಲಸೆ ಕಾರ್ಮಿಕರು ಊರಿಗೆ ಮರಳಲು ಅನುಭವಿಸುತ್ತಿರುವ ಕಷ್ಟಗಳನ್ನು ತೋರಿಸುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು