ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಸಮಯ: ಪಶ್ಚಿಮ ಬಂಗಾಳದಲ್ಲಿ 'ಮಾಸ್ಕ್‌' ರಾಜಕೀಯ ಪ್ರಚಾರ

Last Updated 9 ಜೂನ್ 2020, 3:00 IST
ಅಕ್ಷರ ಗಾತ್ರ

ಕೋಲ್ಕತ್ತ: ಜನರ ಮಾತು, ಯೋಚನೆಗಳಲ್ಲಿ ಸದಾ ಉಳಿಯಬೇಕೆಂದರೆ ಆಗಾಗ್ಗೆ ಅವರ ಎದುರು ಕಾಣಿಸಿಕೊಳ್ಳುವುದು ರಾಜಕಾರಣಿಗಳು ಅನುಸರಿಸಬೇಕಾದ ಪ್ರಮುಖ ಅವಶ್ಯಕತೆಗಳಲ್ಲಿ ಒಂದು. ಕೋವಿಡ್‌–19ನಿಂದಾಗಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿಹ್ನೆಗಳು ಹಾಗೂ ಘೋಷವಾಕ್ಯಗಳನ್ನು ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಪಕ್ಷಗಳ ನಾಯಕರು ಮಾಸ್ಕ್‌ ತೊಡುವ ರಾಜಕೀಯ ಅನುಸರಿಸುತ್ತಿದ್ದಾರೆ.

ಮಾಸ್ಕ್ ಮೂಲಕ ರಾಜಕೀಯ ಪಕ್ಷವನ್ನು ಬಿಂಬಿಸುವ ನಡೆಯು ಕೆಲವು ವಾರಗಳ ಹಿಂದಷ್ಟೇ ಪಶ್ಚಿಮ ಬಂಗಾಳದಲ್ಲಿ ಶುರುವಾಗಿದೆ. ಬಿಜೆಪಿಯ ದಿಲೀಪ್‌ ಘೋಷ್‌ ಮಾಧ್ಯಮ ಗೋಷ್ಠಿಗಳಲ್ಲಿ ಬಿಜೆಪಿ ಗುರುತು ಕಮಲವನ್ನು ಒಳಗೊಂಡ ಮಾಸ್ಕ್‌ ಧರಿಸಿದ್ದಾರೆ. 'ನಾವು ರಾಜಕೀಯದ‌ಲ್ಲಿರುವಾಗ ಪ್ರಚಾರ ಪ್ರಮುಖವಾಗಿರುತ್ತದೆ. ಪಕ್ಷದ ಗುರುತು ಹೊಂದಿರುವ ಮಾಸ್ಕ್‌ ಬಳಸುವುದರಿಂದ ಪ್ರಚಾರವೂ ಆಗುತ್ತದೆ. ಉದಾಹರಣೆ, ನಮ್ಮ ಕಾರ್ಯಕರ್ತರು ಇಂಥದ್ದೇ ಮಾಸ್ಕ್‌ ಧರಿಸಿ ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿರುವಾಗ, ಕೆಲಸಗಳು ಬಿಜೆಪಿಯಿಂದ ಕೈಗೊಳ್ಳಲಾಗಿದೆ ಎಂಬುದು ಜನರಿಗೆ ತಿಳಿಯುತ್ತದೆ' ಎಂದು ಘೋಷ್‌ ಹೇಳಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪರಿಹಾರ ಸಾಮಗ್ರಿಗಳ ಮೇಲೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೊಗಳನ್ನು ಅಂಟಿಸುತ್ತಿರುವುದಾಗಿ ರಾಜ್ಯ ಬಿಜೆಪಿ ಮುಖ್ಯಸ್ಥ ಆರೋಪಿಸಿದ್ದಾರೆ.

'ನಾವು ಸಹ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ, ನಮ್ಮ ಪಕ್ಷಕ್ಕೂ ಪ್ರಚಾರ ಬೇಕಿದೆ. ಇದರಿಂದಾಗಿ ನಮಗೆ ಮಾಸ್ಕ್‌ ಯೋಚನೆ ಹೊಳೆಯಿತು. ಈಗ ಬೇರೆಯವರೂ ಇದನ್ನೇ ಅನುಸರಿಸುತ್ತಿದ್ದಾರೆ' ಎಂದು ಘೋಷ್‌ ಹೇಳಿದ್ದಾರೆ.

ಆದರೆ, ಟಿಎಂಪಿ ಮಾಸ್ಕ್‌ಗಳ ಮೇಲೆ ಕೇವಲ ಪಕ್ಷದ ಚಿಹ್ನೆಯನ್ನಷ್ಟೇ ಮುದ್ರಿಸುವ ಬದಲು ಘೋಷ ವಾಕ್ಯಗಳನ್ನು ಮುದ್ರಿಸಿದೆ. 'ಮಾ, ಮಾಟಿ, ಮಾನುಷ್‌' (ತಾಯಿ, ಮಣ್ಣ ಹಾಗೂ ಜನ) ಎಂದು ಮಾಸ್ಕ್‌ಗಳ ಮೇಲೆ ಮುದ್ರಿಸಲಾಗಿದೆ. ಮಮತಾ ಬ್ಯಾನರ್ಜಿ ಇಂಥ ಮಾಸ್ಕ್‌ಗಳನ್ನು ಧರಿಸುವ ಮೂಲಕ ಅವರ ಪಕ್ಷದಲ್ಲಿ ಟ್ರೆಂಡ್‌ ಹುಟ್ಟಿ ಹಾಕಿದವರೆನಿಸಿದ್ದಾರೆ. ಸರ್ಕಾರದ ಹಲವು ಕಾರ್ಯಗಳಲ್ಲಿ ಹಾಗೂ ಪಕ್ಷದ ಸಭೆಗಳಲ್ಲಿ ಅವರು ಬೆಂಗಾಲದ ನಕ್ಷೆ ಹಾಗೂ ಮಾ, ಮಾಟಿ ಎಂದು ಮುದ್ರಿಸಿದ ಮಾಸ್ಕ್‌ ಧರಿಸುತ್ತಿದ್ದಾರೆ.

ಟಿಎಂಸಿ ಹಿರಿಯ ಮುಖಂಡರು, 'ಜಿತ್ಬೆ ಬಂಗಲಾ' (ಬೆಂಗಾಲ್ ಗೆಲ್ಲುತ್ತದೆ) ಎಂಬ ಘೋಷ ವಾಕ್ಯವಿರುವ ಮಾಸ್ಕ್ ಧರಿಸುತ್ತಿದ್ದಾರೆ. ಸಿಪಿಐ (ಎಂ) ಕಾರ್ಯಕರ್ತರು ಸಹ ಸುತ್ತಿಗೆ ಮತ್ತು ಕುಡುಗೋಲ ಚಿಹ್ನೆ ಹೊಂದಿರುವ ಮಾಸ್ಕ್‌ಗಳನ್ನು ಧರಿಸಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT