ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 31ರ ವರೆಗೂ ಮುಂಬೈನಲ್ಲಿ ಕಚೇರಿ, ಮಳಿಗೆಗಳು ಬಂದ್‌: ಅಗತ್ಯ ಸೇವೆ ಲಭ್ಯ 

Last Updated 20 ಮಾರ್ಚ್ 2020, 9:42 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಪಟ್ಟಣಗಳಲ್ಲಿ ಕಚೇರಿಗಳು ಹಾಗೂ ಮಳಿಗೆಗಳ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇದು ಮಾರ್ಚ್‌ 31ರ ವರೆಗೂ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶುಕ್ರವಾರ ಪ್ರಕಟಿಸಿದ್ದಾರೆ.

ಮುಂಬೈ, ಪುಣೆ, ಪಿಂಪ್ರಿ ಚಿಂಚ್ವಾಡಾಹಾಗೂ ನಾಗ್‌ಪುರ್‌ದಲ್ಲಿನ ಎಲ್ಲ ಕಚೇರಿಗಳು ಮುಚ್ಚಲಿವೆ ಹಾಗೂ ಕೇವಲ ನಿತ್ಯದ ಅಗತ್ಯಗಳ ಸೇವೆಗಳನ್ನು ನೀಡುವ ಮಳಿಗೆಗಳು ಮಾತ್ರ ತೆರೆದಿರಲಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಪ್ರಕರಣಗಳು ಮತ್ತಷ್ಟು ಹೆಚ್ಚದಂತೆ ತಡೆಯುವ ಸಲುವಾಗಿ ಈ ನಿರ್ಧಾರ ಪ್ರಕಟಿಸಲಾಗಿದೆ. ಉದ್ಯೋಗಿಗಳಿಗೆ ಸಂಬಳ ನಿಲ್ಲಿಸದಂತೆ ಉದ್ಯೋಗದಾತರಲ್ಲಿ ಮನವಿ ಮಾಡಿರುವ ಉದ್ಧವ್‌ ಠಾಕ್ರೆ, 'ಬಿಕ್ಕಟ್ಟು ಎದುರಾಗುತ್ತದೆ ಹಾಗೂ ಮಾಯವಾಗುತ್ತದೆ. ಆದರೆ, ಮಾನವೀಯತೆಯನ್ನು ಮರೆಮಾಚಬೇಡಿ' ಎಂದಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ಹಾಗೂ ಲೋಕಲ್‌ ಟ್ರೇನ್‌ಗಳಲ್ಲಿ ಸಂಚರಿಸುವುದನ್ನು ನಿಲ್ಲಿಸದಿದ್ದರೆ, ಸಾರ್ವಜನಿಕ ಸಾರಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವುದೊಂದೆ ದಾರಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಸರ್ಕಾರಿ ಕಚೇರಿಗಳು ಶೇ 25 ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲಿವೆ ಹಾಗೂ ಬ್ಯಾಂಕ್‌ಗಳು ಸೇವೆ ಮುಂದುವರಿಸಲಿವೆ. ಇದು ರಜೆ ಸಮಯವಲ್ಲ, ಆದರೆ ಗುಂಪು ಗೂಡುವುದನ್ನು ತಪ್ಪಿಸುವುದು ಅಗತ್ಯವಾಗಿದೆ. ಅಗತ್ಯ ಸೇವೆಗಳು ಸಿಗಲಿದ್ದು, ಇನ್ನಾವುದೇ ಸೇವೆ ಅಗತ್ಯವೆಂದು ತೋರಿದಲ್ಲಿ ಜಿಲ್ಲಾಧಿಕಾರಿಗಳು ಅದಕ್ಕೆ ತಕ್ಕಂತೆ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಆಹಾರ ಪದಾರ್ಥಗಳು, ದಿನಸಿ, ಹಾಲು ಸೇರಿದಂತೆ ನಿತ್ಯ ಬಳಕೆಯಾಗುವ ವಸ್ತುಗಳು ಸಿಗಲಿವೆ. ಆದರೆ, ಜನರು ಅನಗತ್ಯ ಸಂಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಗುರುವಾರ ಮುಂಬೈನಲ್ಲಿ ಡಬ್ಬಾವಾಲಾಗಳು ತಮ್ಮ ಸೇವೆಗಳನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದರು.

ಇನ್ನೂ ಒಂದನೇ ತರಗತಿಯಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಎಲ್ಲ ಪರೀಕ್ಷೆಗಳನ್ನು ನಿಲ್ಲಿಸಲಾಗಿದೆ. ಪರೀಕ್ಷೆಗಳಿಲ್ಲದೆ ಅವರಿಗೆ ಮುಂದಿನ ತರಗತಿಗಳಿಗೆ ಪ್ರವೇಶ ನೀಡಲು ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್‌ ಸೂಚಿಸಿದ್ದಾರೆ. ಒಂಬತ್ತು ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಏಪ್ರಿಲ್‌ 15ರ ನಂತರ ಪರೀಕ್ಷೆಗಳಿಗೆ ಹಾಜರಾಗುವಂತೆ ತಿಳಿಸಲಾಗಿದೆ. 10ನೇ ತರಗತಿಯ ಪರೀಕ್ಷೆಗಳ ಎರಡು ಪತ್ರಿಕೆಗಳು ಮಾತ್ರ ಬಾಕಿ ಉಳಿದಿದ್ದು, ಅವು ನಿಗದಿಯಂತೆ ನಡೆಯಲಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT