ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಪೀಡಿತ ವ್ಯಕ್ತಿ ಜತೆಗೆ ಬರ್ತ್‌ಡೇ ಪಾರ್ಟಿ: ಭೀತಿಯಿಂದ ಎರಡು ಶಾಲೆಗಳು ಬಂದ್

ಕೊರೊನಾ ವೈರಸ್ ಭೀತಿ: ಮೂರು ದಿನಗಳವರೆಗೆ ಎರಡು ಶಾಲೆಗಳನ್ನು ಮುಚ್ಚಿದ ಆಡಳಿತ ಮಂಡಳಿ
Last Updated 3 ಮಾರ್ಚ್ 2020, 11:30 IST
ಅಕ್ಷರ ಗಾತ್ರ

ನೋಯ್ಡಾ: 6ನೇ ತರಗತಿಯ ವಿದ್ಯಾರ್ಥಿಯೊಬ್ಬನ ತಂದೆಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಸೋಂಕು ಹರಡುವ ಭೀತಿಯಿಂದ ನೋಯ್ಡಾದ ಪ್ರಸಿದ್ಧ ಶಾಲೆಯನ್ನು ಮೂರು ದಿನ ಮುಚ್ಚಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮತ್ತೊಂದು ಶಾಲೆ ಕೂಡ ಬುಧವಾರದಿಂದ ಮಾರ್ಚ್ 11ರವರೆಗೆ ಮುಚ್ಚಲು ನಿರ್ಧರಿಸಿದೆ.

ದೆಹಲಿಯಲ್ಲಿ ಸೋಮವಾರ ವರದಿಯಾದ ಮೊದಲ ಕೊರೊನಾ ವೈರಸ್ ಸೋಂಕು ಪೀಡಿತ ವ್ಯಕ್ತಿಯು ಹುಟ್ಟುಹಬ್ಬದ ಸಂತೋಷ ಕೂಟವನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಶಾಲೆಯ ಹಲವಾರು ಮಕ್ಕಳು ಹಾಜರಿದ್ದರು ಎಂದು ಹೇಳಲಾಗಿದೆ.

ನೋಯ್ಡಾದ ಸೆಕ್ಟರ್ 135ರಲ್ಲಿರುವ ಶಾಲೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಮೂರು ದಿನಗಳವರೆಗೆ ಮುಚ್ಚಲಾಗಿದೆ. ಮತ್ತೊಂದು ಶಾಲೆಯು ನೋಯ್ಡಾದ ಸೆಕ್ಟರ್ 168ರಲ್ಲಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಅಧಿಕಾರಿಗಳು ಎರಡೂ ಶಾಲೆಗಳಿಗೆ ಭೇಟಿ ನೀಡಿ, ಇಬ್ಬರು ಶಾಲಾ ಮಕ್ಕಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಮುಖ್ಯ ವೈದ್ಯಕೀಯ ಅಧಿಕಾರಿ ನೇತೃತ್ವದಲ್ಲಿ ತಂಡವು ಶಾಲೆ ಆವರಣದಲ್ಲಿ ನೈರ್ಮಲ್ಯೀಕರಣ ಕಾರ್ಯವನ್ನು ಪ್ರಾರಂಭಿಸಿದ್ದು, ಕೊರೊನಾ ವೈರಸ್ ಸೋಂಕು ಪೀಡಿತ ಮಗುವಿನ ಕುಟುಂಬಕ್ಕೆ ನಿರ್ಬಂಧ ವಿಧಿಸಲಾಗಿದೆ.

'ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಕುಟುಂಬವನ್ನು ನಾವೀಗ ನಿರ್ಬಂಧಿಸಿದ್ದೇವೆ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿ ಶಾಲೆಗೆ ಭೇಟಿ ನೀಡಿದ್ದಾರೆ. ಸೋಂಕು ಹರಡುವ ಭೀತಿಯಿಂದ ಶಾಲೆಯನ್ನು ಮುಚ್ಚುವಂತೆ ಸಲಹೆ ನೀಡಿದರು ಮತ್ತು ಸ್ಥಳದಲ್ಲಿ ಆಳವಾಗಿ ಕೀಟ ನಿರೋಧಕ ಹೊಗೆಯನ್ನು ಬಿಡುವಂತೆ ಆದೇಶಿಸಿದ್ದಾರೆ. ಭಯಪಡುವ ಅಗತ್ಯವಿಲ್ಲ' ಎಂದು ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಬಿ.ಎನ್. ಸಿಂಗ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಶಾಲಾ ಪ್ರಾಧಿಕಾರವು ಪೋಷಕರಿಗೆ ಸೂಚನೆ ನೀಡಿದ್ದು, ಭೀತಿಯಿಂದಾಗಿ ಈಗಾಗಲೇ ಅನೇಕ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾರೆ.

ಮಾರ್ಚ್ 2ರಂದು ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಈ ವ್ಯಕ್ತಿಯು ದೆಹಲಿಯಿಂದ ಇಟಲಿಗೆ ಪ್ರಯಾಣಿಸಿದ್ದರು. ಸದ್ಯ ವ್ಯಕ್ತಿಗೆ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 'ರೋಗಿಯ ಆರೋಗ್ಯ ಸ್ಥಿರವಾಗಿದೆ ಮತ್ತು ಸೂಕ್ಷ್ಮವಾಗಿ ನಿಗಾ ಇಡಲಾಗಿದೆ' ಎಂದು ಆರೋಗ್ಯ ಸಚಿವಾಲಯವು ಸೋಮವಾರ ತಿಳಿಸಿದೆ.

ಭಾರತದಲ್ಲಿ ಸೋಮವಾರ ಇನ್ನೂ ಎರಡು ಸೋಂಕು ಪೀಡಿತ ಪ್ರಕರಣ ಮತ್ತು ಕೋವಿಡ್ -19ರ ಒಂದು ಶಂಕಿತ ಪ್ರಕರಣ ವರದಿ ಆಗಿದೆ. ಕೊರೊನಾ ವೈರಸ್ ಸೋಂಕು ಇದುವರೆಗೂ 60 ರಾಷ್ಟ್ರಗಳು ಮತ್ತು ಚೀನಾ ಸೇರಿದಂತೆ 3 ಸಾವಿರಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದು, 88 ಸಾವಿರಕ್ಕೂ ಅಧಿಕ ಜನರು ಸೋಂಕು ಪೀಡಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT