ಶನಿವಾರ, ಏಪ್ರಿಲ್ 4, 2020
19 °C
ಸೋಂಕು ದೃಢಪಡಿಸಿದ ಆರೋಗ್ಯ ಇಲಾಖೆ

ಬೆಂಗಳೂರಿನ ಟೆಕಿಗೆ ಕೋವಿಡ್‌–19: ದೇಶದಲ್ಲಿ ಮತ್ತೆ ಕಾಣಿಸಿಕೊಂಡ ಮಾರಕ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್/ದೆಹಲಿ: ಚೀನಾದಲ್ಲಿ ಮೂರು ಸಾವಿರ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ (ಕೋವಿಡ್–19) ದೇಶದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಹೈದರಾಬಾದ್‌ನ ಸಾಫ್ಟ್‌ವೇರ್ ಎಂಜಿನಿಯರ್‌ (24 ವರ್ಷ) ಹಾಗೂ ದೆಹಲಿಯ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕುಪೀಡಿತರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ದುಬೈನಿಂದ ವಾಪಸಾದ ಎಂಜಿನಿಯರ್ ಎರಡು ದಿನ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅದಾದ ಬಳಿಕ, 10 ದಿನಗಳ ಹಿಂದೆ ಕುಟುಂಬದ ಭೇಟಿಗಾಗಿ ಹೈದರಾಬಾದ್‌ಗೆ ತೆರಳಿದಾಗ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. 

ಕಂಪನಿ ಕೆಲಸ ನಿಮಿತ್ತ ಫೆ. 17ರಂದು ಬೆಂಗಳೂರಿನ ಎಂಜಿನಿಯರ್‌ ದುಬೈಗೆ ತೆರಳಿದ್ದರು. ಅಲ್ಲಿ, ಹಾಂಗ್‌ಕಾಂಗ್‌ನಿಂದ ಬಂದಿದ್ದ ವ್ಯಕ್ತಿಗಳ ಜತೆ ನಾಲ್ಕು ದಿನ ಕೆಲಸ ಮಾಡಿದ್ದರು.

ಫೆ.20ರಂದು ಬೆಂಗಳೂರಿಗೆ ವಾಪಸಾದ ಅವರು, ಫೆ. 22ರಂದು ಹೈದರಾಬಾದ್‌ಗೆ ಪ್ರಯಾಣಿಸಿದ್ದರು. ಮೊದಲಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎಂದು ತೆಲಂಗಾಣದ ಆರೋಗ್ಯ ಸಚಿವರು ತಿಳಿಸಿದ್ದಾರೆ. ತೆಲಂಗಾಣದಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎಂಜಿನಿಯರ್‌ ಜತೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ಪ್ರಯಾಣಿಸಿದ್ದ 27 ಸಹ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೈದರಾಬಾದ್ ಹಾಗೂ ದೆಹಲಿಯಲ್ಲಿ ತಲಾ ಒಂದು ಸೋಂಕು ಖಚಿತಪಟ್ಟಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ದೆಹಲಿಯ ವ್ಯಕ್ತಿ ಇತ್ತೀಚೆಗೆ ಇಟಲಿಗೆ ಹೋಗಿ ಬಂದಿದ್ದರು. ಅವರು ಭಾರತಕ್ಕೆ ಬಂದ ಬಳಿಕ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದ ಮೂವರಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಗುಣಮುಖರಾದ ಬಳಿಕ ಅವರೆಲ್ಲ ಮನೆಗೆ ತೆರಳಿದ್ದಾರೆ.

‘ಇಟಲಿ, ಇರಾನ್‌ಗೆ ಹೋಗಬೇಡಿ’
ಕೋವಿಡ್‌ ಸೋಂಕು ವ್ಯಾಪಿಸುತ್ತಿರುವ ಕಾರಣ ಇರಾನ್‌, ಇಟಲಿ, ದಕ್ಷಿಣ ಕೊರಿಯಾ ಹಾಗೂ ಸಿಂಗಪುರಕ್ಕೆ ಸದ್ಯಕ್ಕೆ ಪ್ರವಾಸ ಕೈಗೊಳ್ಳದಂತೆ ಜನರಿಗೆ ಕೇಂದ್ರ ಸಚಿವ ಹರ್ಷವರ್ಧನ್‌ ಸಲಹೆ ನೀಡಿದ್ದಾರೆ. ‘ಇರಾನ್‌ ಮತ್ತು ಇಟಲಿಯಲ್ಲಿರುವ ಭಾರತೀಯರನ್ನು ವಾಪಸ್‌ ಕರೆತರುವ ಕುರಿತು ಆಯಾ ದೇಶದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.


ಕೇಂದ್ರ ಸಚಿವ ಹರ್ಷವರ್ಧನ್‌

‘ಸೋಂಕಿನ ಲಕ್ಷಣಗಳು ಕಂಡುಬಂದ 3,217 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ಐವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 23 ಜನರ ಆರೋಗ್ಯ ವರದಿ ಇನ್ನಷ್ಟೇ ಲಭಿಸಬೇಕಾಗಿದೆ’ ಎಂದರು. ಈವರೆಗೆ, ದೇಶದಾದ್ಯಂತ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡುಬಂದ 19 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.   

ಪರೀಕ್ಷೆ: ಸೋಂಕು ವ್ಯಾಪಿಸುತ್ತಿರುವ ಕಾರಣ, ಇಟಲಿ ಮತ್ತು ಇರಾನ್‌ನಿಂದ ಬರುವ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು