ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌- 19: ಜೂನ್‌ 21ರಿಂದ 28ರ ಅವಧಿಯಲ್ಲಿ ಗರಿಷ್ಠ

Last Updated 22 ಮೇ 2020, 21:33 IST
ಅಕ್ಷರ ಗಾತ್ರ

ಕೋಲ್ಕತ್ತ: ಜೂನ್‌ 21ರಿಂದ 28ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆಯು ಗರಿಷ್ಠ ಮಟ್ಟಕ್ಕೆ ತಲುಪಬಹುದು. ದಿನವೊಂದಕ್ಕೆ ಏಳು ಸಾವಿರದಿಂದ ಏಳೂವರೆ ಸಾವಿರ ಪ್ರಕರಣಗಳು ವರದಿಯಾಗಬಹುದು ಎಂದು ಸಂಶೋಧಕರ ತಂಡವೊಂದು ಹೇಳಿದೆ. ಸೋಂಕಿತರ ಸಂಖ್ಯೆಯ ಏರಿಕೆಯು ಜೂನ್‌ ಕೊನೆಯವರೆಗೆ ಇರಬಹುದು ಎಂದೂ ಈ ಸಂಶೋಧಕರು ಅಂದಾಜಿಸಿದ್ದಾರೆ.

ಪ್ರಕರಣಗಳು ದೃಢಪಡುವ ಪ್ರಮಾಣವು ಜುಲೈ ಎರಡನೇ ವಾರದಿಂದ ಕುಸಿಯಲಿದೆ. ಈಗ ಕೈಗೊಳ್ಳಲಾಗಿರುವ ಕ್ರಮಗಳು, ಪರೀಕ್ಷೆಯಲ್ಲಿನ ಹೆಚ್ಚಳದಿಂದಾಗಿ ಅಕ್ಟೋಬರ್‌ ಹೊತ್ತಿಗೆ ಏರಿಕೆ ಪ್ರಮಾಣವು ತಟಸ್ಥ ಮಟ್ಟಕ್ಕೆ ಬರಲಿದೆ ಎಂದು ಸಂಶೋಧನೆಯಲ್ಲಿ ಭಾಗಿಯಾಗಿದ್ದ ಜಾಧವಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಂದುಲಾಲ್‌ ಬೈರಾಗಿ ಹೇಳಿದ್ದಾರೆ.

ಜಾಧವಪುರ ವಿ.ವಿ.ಯ ಜೈವಿಕ ಗಣಿತಶಾಸ್ತ್ರ ಮತ್ತು ಪರಿಸರ ವಿಭಾಗವು ಈ ಅಧ್ಯಯನ ನಡೆಸಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿಯು ಅಂಗೀಕರಿಸಿದ ಗಣಿತಶಾಸ್ತ್ರೀಯ ವಿಧಾನದಲ್ಲಿ ಈ ಅಧ್ಯಯನ ನಡೆಸಲಾಗಿದೆ.

ಅಕ್ಟೋಬರ್‌ ಮೊದಲ ವಾರದ ಹೊತ್ತಿಗೆ ದೇಶದಲ್ಲಿ ಕೋವಿಡ್‌ ಪಿಡುಗಿಗೆ ಒಳಗಾದ ಜನರ ಒಟ್ಟು ಸಂಖ್ಯೆಯು ಐದು ಲಕ್ಷಕ್ಕೆ ಏರಲಿದೆ. ಲಕ್ಷಣಗಳು ಇಲ್ಲದ ಕೋವಿಡ್‌ ಬಾಧಿತರ ಸಂಖ್ಯೆ ಹೆಚ್ಚಾಗಿರುವುದೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣ. ಲಕ್ಷಣ ಇಲ್ಲದ ಸೋಂಕಿತರು ಇಬ್ಬರಿಂದ ಮೂವರಿಗೆ ಸೋಂಕು ತಗುಲಿಸಬಹುದು ಎಂಬ ಅಂದಾಜಿನಲ್ಲಿ ಸೋಂಕಿತರ ಒಟ್ಟು ಸಂಖ್ಯೆಯನ್ನು ಲೆಕ್ಕ ಹಾಕಲಾಗಿದೆ.

ಸೋಂಕು ಮೊದಲು ಕಾಣಿಸಿಕೊಂಡ ಚೀನಾದ ವುಹಾನ್‌ನ ಉದಾಹರಣೆಯನ್ನು ನಂದುಲಾಲ್‌ ಉಲ್ಲೇಖಿಸಿದ್ದಾರೆ.
ಅಲ್ಲಿ, 76 ದಿನಗಳಲ್ಲಿ ಸೋಂಕು ಪಸರಿಸುವಿಕೆ ತಡೆಯಲು ಸಾಧ್ಯವಾಗಿದೆ. ಆದರೆ, ನಮ್ಮಲ್ಲಿ ಎರಡು ತಿಂಗಳ ಲಾಕ್‌ಡೌನ್‌ ಬಳಿಕವೂ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ.

ಸೋಂಕಿಗೆ ಲಸಿಕೆಯಾಗಲಿ, ಔಷಧವಾಗಲಿ ಇಲ್ಲ. ಹಾಗಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಮುಂದುವರಿಸಬೇಕಿತ್ತು. ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಬೇರೆ ವಿಧಾನ ಕಂಡುಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವುದು ಬಹಳ ಕಷ್ಟದ ಕೆಲಸ. ಹಾಗಾಗಿ, ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಬಾರದು ಎಂದು ಅಧ್ಯಯನವು ಸಲಹೆ ನೀಡಿದೆ. ಆಸ್ಪತ್ರೆಯಲ್ಲಿ ಸೋಂಕು ತಗಲಿದರೆ ಯಾರಿಂದ ಬಂತು ಎಂಬುದನ್ನು ಕಂಡು ಹಿಡಿಯಬಹುದು. ಆದರೆ, ಬಸ್‌ನಲ್ಲಿ ಸೋಂಕು ತಗುಲಿದರೆ ಯಾರಿಂದ ಬಂತು ಎಂದು ಗುರುತಿಸುವುದು ಹೇಗೆ ಎಂದು ಅಧ್ಯಯನ ವರದಿಯಲ್ಲಿ ಪ್ರಶ್ನಿಸಲಾಗಿದೆ.

‘ಲಾಕ್‌ಡೌನ್‌: 78 ಸಾವಿರ ಜೀವ ಉಳಿದಿದೆ’

ಲಾಕ್‌ಡೌನ್‌ಗೆ ಸಂಬಂಧಿಸಿ ರಾಜಕೀಯ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅದರ ನಡುವೆಯೇ, ಲಾಕ್‌ಡೌನ್‌ ಅನ್ನು ಸರ್ಕಾರದ ಉನ್ನತ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ 37 ಸಾವಿರದಿಂದ 78 ಸಾವಿರದಷ್ಟು ಜನರ ಜೀವ ಉಳಿದಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆಯು 29 ಲಕ್ಷದವರೆಗೂ ಏರಬಹುದಾಗಿತ್ತು. ಲಾಕ್‌ಡೌನ್‌ ಅದನ್ನು ತಡೆದಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪಾಲ್‌ ಹೇಳಿದ್ದಾರೆ.

ವೈರಾಣು ದೇಶದಾದ್ಯಂತ ವ್ಯಾಪಿಸುವುದನ್ನು ಲಾಕ್‌ಡೌನ್‌ ತಡೆಯಿತು. ಏಪ್ರಿಲ್‌ 3ರಂದು ಪ್ರಕರಣಗಳ ಏರಿಕೆ ಪ್ರಮಾಣ ಶೇ 22.6ರಷ್ಟಿತ್ತು. ಆದರೆ, ಏಪ್ರಿಲ್‌ ನಾಲ್ಕರ ನಂತರ ಈ ಪ್ರಮಾಣ ಇಳಿಕೆಯಾಗಿದೆ. ಈಗ ಅದು ಶೇ 5.5ರಷ್ಟು ಮಾತ್ರ ಎಂದು ಅವರು ವಿವರಿಸಿದ್ದಾರೆ.ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌, ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ ಆಫ್ ಇಂಡಿಯಾ, ಭಾರತೀಯ ಸಾಂಖ್ಯಿಕ ಸಂಸ್ಥೆ ನಡೆಸಿದ ಸಮೀಕ್ಷೆಗಳು ಹೀಗೆ ಹೇಳುತ್ತಿವೆ ಎಂದು ಪಾಲ್‌ ಅವರು ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವೈರಾಣವು ಕೆಲವೇ ರಾಜ್ಯಗಳೊಳಗೆ ಉಳಿಯುವುದು ಸಾಧ್ಯವಾಯಿತು ಎಂದು ಪಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT