ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡಿನ ಮಹಿಳೆಗೆ ತಿರುವನಂತಪುರಂನಿಂದ ರಾತ್ರೋರಾತ್ರಿ ಔಷಧಿ ತಲುಪಿಸಿದ ಪೊಲೀಸ್

Last Updated 31 ಮಾರ್ಚ್ 2020, 10:00 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ರೋಗಿಯೊಬ್ಬರಿಗೆ ತಿರುವನಂತಪುರಂನಿಂದ ರಾತ್ರೋರಾತ್ರಿ ಔಷಧಿ ತಲುಪಿಸಿದೆ ಕೇರಳದ ಪೊಲೀಸ್ ಪಡೆ.ಕಾಸರಗೋಡಿನ ಪೆರಿಯಾ ನಿವಾಸಿ 40ರ ಹರೆಯದ ಲತಿಕಾ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಅದಕ್ಕಿರುವ ಔಷಧಿ ತಿರುವನಂತಪುರಂನಲ್ಲಿ ಮಾತ್ರ ಲಭ್ಯವಿದೆ. ಲಾಕ್‌ಡೌನ್ ಆಗಿರುವ ಈ ಹೊತ್ತಲ್ಲಿಔಷಧಿ ಪಡೆಯುವುದು ಅಸಾಧ್ಯವಾದಾಗ ಅವರ ನೆರವಿಗೆ ಬಂದದ್ದು ಕೇರಳ ಪೊಲೀಸ್. ತಿರುವನಂತಪುರಂನಿಂದ ಸುಮಾರು 550 ಕಿಮೀ ಕ್ರಮಿಸಿ ಕೇರಳ ಪೊಲೀಸ್‌ನ 19 ತಂಡ ರಾತ್ರೋರಾತ್ರಿ ಔಷಧಿಯನ್ನು ಲತಿಕಾ ಅವರ ಮನೆಗೆ ತಲುಪಿಸಿದೆ.

ಎಂಡೋಸಲ್ಫಾನ್ ಸಂತ್ರಸ್ತರ ಅಮ್ಮನಾಗಿರುವ ಲತಿಕಾ ಹಲವು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದಾರೆ. ಲಾಕ್‍ಡೌನ್‌ನಿಂದಾಗಿ ತಂದಿಟ್ಟಿದ್ದ ಔಷಧಿಯೂ ಮುಗಿದಿತ್ತು.ಹೀಗಿರುವಾಗ ಎಂಡೋಸಲ್ಫಾನ್ ಸಂತ್ರಸ್ತರ ಪರ ಹೋರಾಡುತ್ತಿರುವ ಕಾರ್ಯಕರ್ತ ಅಂಬಲತ್ತರ ಕುಂಞಿಕೃಷ್ಣನ್ ಅವರಲ್ಲಿ ಲತಿಕಾ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಕುಂಞಿಕೃಷ್ಣನ್ಅವರು ಲತಿಕಾ ಅವರ ಸಮಸ್ಯೆಯನ್ನು ಕಾಸರಗೋಡಿನ ಪೊಲೀಸರಿಗೆ ಹೇಳಿದ್ದಾರೆ. ಇದು ಪೊಲೀಸ್ ವಲಯದಲ್ಲಿ ಚರ್ಚೆಯಾಗಿ ಕಾಸರಗೋಡಿನ ಶಾಸಕರೂ ಕೇರಳದ ಕಂದಾಯ ಸಚಿವರಾಗಿರುವ ಇ.ಚಂದ್ರಶೇಖರನ್ ಗಮನಕ್ಕೆ ಬಂದಿದೆ. ಚಂದ್ರಶೇಖರನ್ ಅವರು ಈ ವಿಷಯವನ್ನುಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹರಾ ಗಮನಕ್ಕೆ ತಂದಿದ್ದಾರೆ. ಬೆಹರಾ ಅವರು ಭಾನುವಾರ ಸಂಜೆ ಈ ಬಗ್ಗೆ ತೀರ್ಮಾನ ಕೈಗೊಂಡು ತಿರುವನಂತಪುರಂನಿಂದ ಔಷಧಿಯನ್ನು ಕೇರಳಕ್ಕೆ ತಲುಪಿಸಲು ತಂಡ ರೂಪಿಸಿದ್ದಾರೆ.ರಿಲೇ ಮಾದರಿಯಲ್ಲಿ ಪೊಲೀಸರ ತಂಡ ಒಂದು ತಂಡದಿಂದ ಇನ್ನೊಂದು ತಂಡಕ್ಕೆ ಔಷಧಿ ಸಾಗಿಸಿದ್ದು ಸೋಮವಾರ ಬೆಳಗ್ಗೆ ಲತಿಕಾ ಅವರ ಮನೆಗೆ ಔಷಧಿ ತಲುಪಿಸಿದೆ. ಈ ಕಾರ್ಯಕ್ಕಾಗಿ ಪೊಲೀಸರ 19 ತಂಡ ಶ್ರಮವಹಿಸಿದೆ,

ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿದ ನಂತರ ಕೇರಳದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಪೊಲೀಸರು ಸದಾ ನೆರವಾಗುತ್ತಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದರೆ, ಹಿರಿಯ ವ್ಯಕ್ತಿಗಳು ಇದ್ದರೆ ಅವರ ಮಾಹಿತಿ ಸಂಗ್ರಹಿಸಿ ಅವರಿಗೆ ಬೇಕಾದ ಸಹಾಯವನ್ನು ಪೊಲೀಸರು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT