ಶನಿವಾರ, ಜೂನ್ 6, 2020
27 °C

ಮಾಸ್ಕ್‌ ಮೇಲೆ ಒಂದು ವಾರ ಉಳಿಯಬಲ್ಲದು ಕೊರೊನಾವೈರಸ್: ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾವೈರಸ್‌, ಮಾಸ್ಕ್‌ (ಮುಖಗವಸಿನ) ಮೇಲೆ ಒಂದು ವಾರ ಕಾಲ ಮತ್ತು ನೋಟು, ಸ್ಟೀಲ್‌, ಪ್ಲಾಸ್ಟಿಕ್‌ ಮೇಲೆ ಕೆಲದಿನಗಳ ವರೆಗೆ ಜೀವಂತವಾಗಿ ಇರಬಲ್ಲದು ಎಂದು ಅಧ್ಯಯನವೊಂದು ತಿಳಿಸಿದೆ.

ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಸಂಶೋಧಕರು ಕೊರೊನಾವೈರಸ್‌ ಬಗ್ಗೆ ಅಧ್ಯಯನ ನಡೆಸಿದ್ದು, ಆ ಕುರಿತು ಹಾಂಗ್ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ಸೋಮವಾರ ವರದಿ ಮಾಡಿದೆ.

ಮನೆಯಲ್ಲಿ ಬಳಸುವ ಸೋಂಕು ನಿವಾರಕಗಳಾದ ಬ್ಲೀಚಿಂಗ್‌ ಪೌಡರ್‌, ಸಾಬೂನು ಹಾಗೂ ನೀರಿನಿಂದ ಕೈತೊಳೆಯುವುದರಿಂದ ವೈರಸ್‌ ಹರಡುವುದನ್ನು ತಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ದಿ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿಯು ಕೊರೊನಾವೈರಸ್‌ನ ಬೆಳವಣಿಗೆ, ಸ್ಥಿರತೆ ಹಾಗೂ ಅದರ ನಿಯಂತ್ರಣಕ್ಕಿರುವ ಸಾಧ್ಯತೆಗಳ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ.

ಕೊರೊನಾ–2 ವೈರಸ್‌ ಅನುಕೂಲಕರ ಪರಿಸ್ಥಿತಿಯಲ್ಲಿ ಹೆಚ್ಚು ಸ್ಥಿರವಾಗಿರುತ್ತದೆ. ಆದರೆ, ಇದನ್ನು ಪರಿಣಾಮಕಾರಿ ಸೋಂಕು ನಿವಾರಕಗಳಿಂದ ನಾಶಪಡಿಸಬಹುದಾಗಿದೆ ಎಂದು ಲಿಯೊ ಪೂನ್‌ ಲಿಟ್‌ಮನ್‌ ಹಾಗೂ ಮಲಿಕ್‌ ಪೀರಿಸ್‌ ಅವರನ್ನೊಳಗೊಂಡ ಸಂಶೋಧಕರ ತಂಡ ಹೇಳಿದೆ.

ಬೇರೆಬೇರೆ ಸ್ಥಳಗಳಲ್ಲಿನ ಉಷ್ಣಾಂಶದಲ್ಲಿ ವೈರಸ್‌ ಎಷ್ಟು ಸಮಯದವರೆಗೆ ಉಳಿಯಬಲ್ಲದು ಎಂಬುದನ್ನು ಪರೀಕ್ಷಿಸಲಾಗಿದೆ.

ಅದರಂತೆ, ಮುದ್ರಣ ಮತ್ತು ಟಿಶ್ಯೂ ಪೇಪರ್‌ನಲ್ಲಿ ವೈರಾಣು ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯಲಾರದು. ಮರ ಮತ್ತು ಬಟ್ಟೆಯ ಮೇಲೆ ಎರಡು ದಿನಗಳಲ್ಲಿ ನಾಶವಾಗಲಿದೆ ಎಂಬುದು ತಿಳಿದುಬಂದಿದೆ.

ಗಾಜು ಹಾಗೂ ನೋಟುಗಳ ಮೇಲೆ ಎರಡನೇ ದಿನವೂ ಉಳಿದುಕೊಂಡಿದ್ದ ವೈರಸ್‌ ನಾಲ್ಕನೇ ದಿನದ ಹೊತ್ತಿಗೆ ನಾಶವಾಗಿದೆ. ಸ್ಟೇನ್‌ಲೆಸ್‌ ಸ್ಟೀಲ್‌ ಹಾಗೂ ಪ್ಲಾಸ್ಟಿಕ್‌ ಮೇಲೆ ನಾಲ್ಕರಿಂದ ಏಳುದಿನಗಳವರೆಗೂ ಇರುವುದು ಗೋಚರವಾಗಿದೆ.

ಅದೇರೀತಿ ಶಸ್ತ್ರಚಿಕಿತ್ಸೆವೇಳೆ ಧರಿಸುವ ಮುಖಗವಸಿನ ಮೇಲೆ ಏಳುದಿನಗಳವರೆಗೂ ವೈರಸ್‌ ಉಳಿಯಬಲ್ಲದು ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ.

‘ನೀವು ಶಸ್ತ್ರಚಿಕಿತ್ಸೆ ವೇಳೆ ಬಳಸುವ ಮಾಸ್ಕ್‌ ಧರಿಸುವುದಾದರೆ ಅದರ ಹೊರ ಭಾಗವನ್ನು ಮುಟ್ಟದಿರುವುದೇ ಉತ್ತಮ. ಏಕೆಂದರೆ, ನಿಮ್ಮ ಕಣ್ಣುಗಳು ಕಣ್ಣಿನ ಭಾಗಕ್ಕೆ ಸ್ಪರ್ಶಿಸಿದರೆ, ವೈರಸ್‌ ನಿಮ್ಮ ದೇಹ ಪ್ರವೇಶಿಸಬಹುದು’ ಎಂದು ಪೀರಿಸ್‌ ಹೇಳಿರುವುದಾಗಿ ಎಸ್‌ಸಿಎಂಪಿ ವರದಿ ಮಾಡಿದೆ.

ಎಲ್ಲಾ ಮೇಲ್ಮೈಗಳಲ್ಲಿ ಸಮಯ ಕಳೆದಂತೆ ವೈರಸ್ ಪ್ರಭಾವವು ಸಾಕಷ್ಟು ವೇಗವಾಗಿ ಕಡಿಮೆಯಾಗುತ್ತದೆ ಎಂದೂ ಅಧ್ಯಯನ ಹೇಳಿದೆ.

‘ಸಾಮಾನ್ಯ ಸಂಪರ್ಕದಿಂದಲೇ ವೈರಾಣು ಹರಡುತ್ತದೆ ಎಂಬುದನ್ನು ಬಿಂಬಿಸಬೇಕಾಗಿಲ್ಲ. ಏಕೆಂದರೆ, ಪ್ರಯೋಗಶಾಲೆಯಲ್ಲಿರುವ ಉಪಕರಣಗಳಲ್ಲಿ ವೈರಸ್‌ ಪತ್ತೆಯಾಗಿದೆಯೇ ವಿನಃ,  ಕೈಗಳಿಂದಲ್ಲ’ ಎಂಬುದು ಸಂಶೋಧಕರ ಅಭಿಪ್ರಾಯ.

ಪ್ಲಾಸ್ಟಿಕ್ ಮತ್ತು ಸ್ಟೀಲ್‌ ಮೇಲೆ 72 ಗಂಟೆಗಳವರೆಗೆ ಉಳಿದಿದ್ದ ವೈರಸ್‌ ತಾಮ್ರದ ಮೇಲೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಉಳಿಯಲಾದು ಮತ್ತು ರಟ್ಟಿನ (ಕಾರ್ಡ್‌ಬೋರ್ಡ್‌) ಮೇಲೆ 24 ಗಂಟೆಗಳಿಗಿಂತ ಹೆಚ್ಚು ಕಾಲ ಇರುವುದಿಲ್ಲ ಎಂಬುದು ಗೊತ್ತಾಗಿದೆ. ಹಾಂಕ್‌ಕಾಂಗ್‌ ವಿವಿಯ ಈ ಅಧ್ಯಯನವು ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸುವಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ.

ಕೈ ತೊಳೆಯುವುದಕ್ಕೆ ಮೊದಲ ಆದ್ಯತೆ ನೀಡಿ ಎಂದು ಪೂನ್‌ ಸಲಹೆ ನೀಡಿದ್ದಾರೆ.

‘ನಿಮ್ಮನ್ನು ನೀವು ಸುರಕ್ಷಿತವಾಗಿಟ್ಟುಕೊಳ್ಳಲು ಬಯಸುವುದಾದರೆ ನೈರ್ಮಲ್ಯ ಕಾಪಾಡಿಕೊಳ್ಳಿ, ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುತ್ತಿರಿ ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಮುಖ, ಬಾಯಿ ಅಥವಾ ಮೂಗನ್ನು ಮುಟ್ಟದಿರಲು ಪ್ರಯತ್ನಿಸಿ’ ಎಂದು ಅವರು ಹೇಳಿದ್ದಾರೆ.

ವೈರಸ್‌ನ ಸ್ಥಿರತೆಯ ಬಗ್ಗೆ ಅಮೆರಿಕಾ ಸಂಶೋಧಕರು ಕಳೆದ ತಿಂಗಳು ನಡೆಸಿದ ಅಧ್ಯಯನದಲ್ಲೂ, ‘ಈ ವೈರಸ್‌ ಕೆಲ ಮೇಲ್ಮೈಗಳಲ್ಲಿ ಕೆಲವು ದಿನಗಳವರೆಗೆ ಉಳಿಯಬಲ್ಲದು’ ಎಂಬುದು ತಿಳಿದುಬಂದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು