ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಭೋಲ್ಕರ್‌, ಪಾನ್ಸರೆ ಹತ್ಯೆ: ಸ್ವತಂತ್ರ ತನಿಖೆಗೆ ಸೂಚನೆ

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಮೇಲೆಯೇ ಅವಲಂಬನೆಯಾಗಬೇಡಿ: ಸಿಬಿಐ, ಸಿಐಡಿಗೆನಿರ್ದೇಶನ
Last Updated 17 ಜನವರಿ 2019, 18:40 IST
ಅಕ್ಷರ ಗಾತ್ರ

ಮುಂಬೈ: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌ ಮತ್ತು ಗೋವಿಂದ ಪಾನ್ಸರೆ ಹತ್ಯೆಯ ತನಿಖೆಯನ್ನು ಸ್ವತಂತ್ರವಾಗಿ ಕೈಗೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್‌ ಸಿಬಿಐ ಮತ್ತು ಮತ್ತು ಮಹಾರಾಷ್ಟ್ರದ ಸಿಐಡಿಗೆ ತಿಳಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಸಂದರ್ಭದಲ್ಲಿ ದೊರೆತ ಮಾಹಿತಿಗಳ ಮೇಲೆಯೇ ಸಂಪೂರ್ಣ ಅವಲಂಬನೆಯಾಗದೆ ಈ ಪ್ರಕರಣಗಳ ತನಿಖೆ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಎಸ್‌.ಸಿ. ಧರ್ಮಾಧಿಕಾರಿ ಮತ್ತು ಎಂ.ಎಸ್‌. ಕಾರ್ಣಿಕ್‌ ಅವರನ್ನು ಒಳಗೊಂಡ ಪೀಠವು ಈ ನಿರ್ದೇಶನ ನೀಡಿದ್ದು, ದಾಭೋಲ್ಕರ್‌ ಮತ್ತು ಪಾನ್ಸರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದೆ.

ಸಿಐಡಿಯ ವಿಶೇಷ ತನಿಖಾ ತಂಡ ಈ ಇಬ್ಬರ ಹತ್ಯೆ ಕುರಿತ ತನಿಖೆಯ ಪ್ರಗತಿ ಕುರಿತು ವರದಿ ಸಲ್ಲಿಸಿದಾಗ ಪೀಠವು ಈ ನಿರ್ದೇಶನಗಳನ್ನು ನೀಡಿದೆ.

‍ಪಾನ್ಸರೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಲು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾ ತಂಡ ಪೀಠಕ್ಕೆ ಮಾಹಿತಿ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಈ ಮೊದಲಿನ ವಿಚಾರಣೆ ಸಂದರ್ಭದಲ್ಲಿಯೂ ಇದೇ ರೀತಿಯ ಮಾಹಿತಿ ನೀಡಲಾಗಿತ್ತು. ಹೀಗಾಗಿ, ಇನ್ನೊಂದು ಪ್ರಕರಣದ ಮೇಲೆ ಅವಲಂಬನೆಯಾಗಬೇಡಿ ಎಂದು ತಿಳಿಸಿತು.

**

ಕರ್ನಾಟಕದಲ್ಲಿ ತ್ವರಿತ ತನಿಖೆ

‘ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ತ್ವರಿತಗತಿಯಲ್ಲಿ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ನೆರವು ಸಹ ದೊರೆಯುತ್ತಿದೆ’ ಎಂದು ನ್ಯಾಯಾಲಯ ಹೇಳಿದೆ.

‘ಆದರೆ, ಮಹಾರಾಷ್ಟ್ರದಲ್ಲಿನ ತನಿಖೆ ಸಂಸ್ಥೆಗಳು ನಿಧಾನಗತಿಯಲ್ಲಿವೆ. ಸರ್ಕಾರದಿಂದ ಸಹಕಾರ ದೊರೆಯುತ್ತಿಲ್ಲ ಮತ್ತು ಸಮನ್ವಯದ ಕೊರತೆಯೂ ಇದೆ’ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT