ಸಿದ್ಧಿವಿನಾಯಕನ ಸಂಪತ್ತು ಹೆಚ್ಚಿಸಿದ ಭಕ್ತನ ಕಾಣಿಕೆ!

ಮುಂಬೈ: ದೇಶದ ಪ್ರಸಿದ್ಧ ಹಾಗೂ ಶ್ರೀಮಂತ ದೇಗುಲಗಳಲ್ಲಿ ಒಂದೆನಿಸಿಕೊಂಡಿರುವ ಮುಂಬೈನ ಸಿದ್ಧಿವಿನಾಯಕ ದೇಗುಲದ ಸಂಪತ್ತು ಭಕ್ತರೊಬ್ಬರ ಕೊಡುಗೆಯೊಂದಿಗೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ವಾರ ದೆಹಲಿ ಮೂಲದ ಭಕ್ತರೊಬ್ಬರು ₹14 ಕೋಟಿ ಮೌಲ್ಯದ 35 ಕೆ.ಜಿ ಚಿನ್ನವನ್ನು ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
Maharashtra: A devotee from Delhi has donated gold plating weighing around 35 kg, worth around Rs 14 crores to Mumbai's Shri Siddhivinayak Temple. pic.twitter.com/2eavuvJjmk
— ANI (@ANI) January 21, 2020
ಮುಂಬೈನ ಸಿದ್ಧಿ ವಿನಾಯಕ ದೇಗುಲಕ್ಕೆ ಪ್ರತಿ ತಿಂಗಳೂ ಕೋಟ್ಯಂತರ ಮೊತ್ತದ ಕಾಣಿಕೆ, ಕೊಡುಗೆಗಳು ಸಲ್ಲಿಕೆಯಾಗುತ್ತವೆ. ಹಣದ ರೂಪದಲ್ಲೂ ಕಾಣಿಕೆ ಹರಿದು ಬರುತ್ತದೆ. ಇದರ ಜೊತೆಗೆ ಚಿನ್ನ, ಬೆಳ್ಳಿ, ರತ್ನಗಳನ್ನೂ ಕಾಣಿಕೆಯಾಗಿ ನೀಡಲಾಗುತ್ತದೆ.
ಬಂಗಾರದ ಕಾಣಿಕೆ ಬಗ್ಗೆ ಮಾತನಾಡಿರುವ ಸಿದ್ಧಿವಿನಾಯಕ ದೇಗುಲ ಟ್ರಸ್ಟ್ ಸದಸ್ಯ ಆದೇಶ್ ಬಂಡೇಕರ್, ‘ಕಳೆದ ವಾರ ಭಕ್ತರೊಬ್ಬರು 35 ಕೆ.ಜಿ ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆದರೆ, ಅವರ ಹೆಸರು ಹೇಳಲು ಸಾಧ್ಯವಿಲ್ಲ. ಅವರು ನೀಡಿದ ಚಿನ್ನದಿಂದ ದೇಗುಲದ ದ್ವಾರ ಮತ್ತು ಛಾವಣಿಗೆ ಹೊದಿಕೆ ಮಾಡಿಸಲಾಗಿದೆ,’ ಎಂದು ಹೇಳಿದ್ದಾರೆ.
ಜ.15–19ರ ವರೆಗೆ ದೇಗುಲವನ್ನು ನಾಲ್ಕು ದಿನಗಳ ಕಾಲ ಮುಚ್ಚಲಾಗಿತ್ತು. ಈ ವೇಳೆ ದೇಗುಲಕ್ಕೆ ಚಿನ್ನದ ಹೊದಿಕೆಗಳನ್ನು ಮಾಡಲಾಗಿದೆ. ಇದೇ ಅವಧಿಯಲ್ಲೇ ದೇವರ ವಿಗ್ರಹಕ್ಕೆ ಕೇಸರಿ ಬಣ್ಣದ ಲೇಪ ನೀಡಲಾಗಿದೆ. ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಲಾಗಿದೆ.
220 ವರ್ಷಗಳಿಗೂ ಮಿಗಿಲಾದ ಇತಿಹಾಸವಿರುವ ಮುಂಬೈನ ಈ ವಿನಾಯಕ ದೇಗುಲಕ್ಕೆ 2017ರ ವರೆಗೆ ₹ 320 ಕೋಟಿ ಮೌಲ್ಯದ ಕಾಣಿಕೆ ಸಲ್ಲಿಕೆಯಾಗಿದೆ. ಈಗ ಅದರ ಮೊತ್ತ ₹410 ಕೋಟಿಗೆ ಏರಿದೆ. ದೇಗುಲ ಈ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.