ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಇಂದು ಚುನಾವಣೆ: ಆತ್ಮವಿಶ್ವಾಸದ ಅಲೆಯಲ್ಲಿ ‘ಆಪ್’

ಬಿಜೆಪಿ, ಕಾಂಗ್ರೆಸ್‌ಗೆ ಮತ್ತೊಂದು ಸತ್ವಪರೀಕ್ಷೆ
Last Updated 8 ಫೆಬ್ರುವರಿ 2020, 0:53 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭೆಗೆ ಇಂದು (ಫೆ.8 ರಂದು) ನಡೆಯಲಿರುವ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು (ಆಪ್‌) ನಿಚ್ಚಳ ಬಹುಮತ ಗಳಿಸುವ ವಿಶ್ವಾಸದಲ್ಲಿದೆ.

ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಈ ಬಾರಿ ‘ರಾಷ್ಟ್ರ ರಾಜಧಾನಿ’ಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಛಲದೊಂದಿಗೆ ಕಣಕ್ಕೆ ಇಳಿದಿದ್ದರೂ ಕೇಜ್ರಿವಾಲ್‌ ಸರ್ಕಾರದ ಸಾಧನೆಯನ್ನು ಮಂಕಾಗಿಸುವ ಅಸ್ತ್ರಗಳು ಸಿಗದೆ ಸೊರಗಿದೆ.

ಕೊಟ್ಟ ಭರವಸೆಯಂತೆ ಉಚಿತವಾಗಿ ಮಾಸಿಕ 200 ಯೂನಿಟ್‌ವರೆಗೆ ವಿದ್ಯುತ್‌ ಪೂರೈಕೆ, ಕುಡಿಯುವ ನೀರು ಸರಬರಾಜು, ಆರೋಗ್ಯ, ಶಿಕ್ಷಣ ಮತ್ತು ಮಹಿಳೆಯರಿಗೆ ಸಾರಿಗೆ ಸೌಲಭ್ಯ ನೀಡಿರುವ ಆಪ್‌, ಮಹಿಳೆಯರು, ಮಧ್ಯಮ ವರ್ಗ, ಬಡವರು, ಮುಖ್ಯವಾಗಿ ದುಡಿಯುವ ವರ್ಗದವರ ಪ್ರೀತಿಯ ‘ಜನ ಸಾಮಾನ್ಯರ ಪಕ್ಷ’ವಾಗಿದೆ.

ಕಳೆದ ಚುನಾವಣೆಯಲ್ಲಿ ಶೇ 54ರಷ್ಟು ಮತ ಗಳಿಸಿ, ಒಟ್ಟು 70ರಲ್ಲಿ 67 ಕ್ಷೇತ್ರಗಳನ್ನು ಗೆದ್ದು ಬೀಗಿದ್ದ ಆಪ್‌, ಭರವಸೆಗಳನ್ನು ಈಡೇರಿಸಿ ಜನತೆಗೆ ಹತ್ತಿರವಾಗಿರುವುದು ಬಹುತೇಕ ಕ್ಷೇತ್ರಗಳ ಜನರ ಪ್ರತಿಕ್ರಿಯೆಯಲ್ಲಿ ಎದ್ದುಕಾಣುತ್ತದೆ. ಆದರೆ, ಶಾಹೀನ್‌ ಬಾಗ್‌ನಲ್ಲಿ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನೇ ಮುಂದಾಗಿಸಿ ಹಿಂದೂಗಳ ಮತ ಬೇಟೆಯಲ್ಲಿ ತೊಡಗಿರುವ ಬಿಜೆಪಿಯ ಕಾರ್ಯತಂತ್ರದಿಂದಾಗಿ, ಆಪ್‌ ಈ ಚುನಾವಣೆಯಲ್ಲಿ ಹಿಂದಿನ ಸಲಕ್ಕೆ ಹೋಲಿಸಿದರೆ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬಹುದಾದರೂ ಅಧಿಕಾರ ಹಿಡಿಯಲು ತೊಂದರೆ ಇಲ್ಲ ಎಂಬ ಮುನ್ಸೂಚನೆ ದೊರೆತಿದೆ.

ಟೀಕಿಸಲು ವಿಷಯವಿಲ್ಲ:ಅಖಾಡದಲ್ಲಿರುವ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನವರ ಪ್ರಚಾರ ವೈಖರಿಯನ್ನು ಅವಲೋಕಿಸಿದಾಗ ಕೇಜ್ರಿವಾಲ್‌ ಅವರಿಗೆ ಹೇಳಿಕೊಳ್ಳುವಂತಹ ಸ್ಪರ್ಧೆ ನೀಡಲು ಅಗತ್ಯವಾದ ವಿಷಯಗಳ ಕೊರತೆಯಿಂದ ಬಳಲಿರುವುದು ಸ್ಪಷ್ಟ.

1998ರಿಂದ 2013ರವರಗೆ ಶೀಲಾ ದೀಕ್ಷಿತ್‌ ನೇತೃತ್ವದಲ್ಲಿ ದೆಹಲಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌, ಮೆಟ್ರೊ ಸೌಲಭ್ಯ, ರಸ್ತೆಗಳ ಅಭಿವೃದ್ಧಿಯಂತಹ ಸಾಧನೆಗಳನ್ನೇ ಈಗಲೂ ಬಣ್ಣಿಸಿದೆ. ಅದೆಲ್ಲವನ್ನೂ ಮರೆಮಾಚುವಂತೆ ಮಾಡಿರುವ ಕೇಜ್ರಿವಾಲ್‌ಗೆ ಸವಾಲಾಗಬಲ್ಲ ಯಾವುದೇ ಭರವಸೆಗೂ ಮತದಾರ ಒಲಿಯುವುದು ಕಷ್ಟಸಾಧ್ಯ ಎಂಬ ಸ್ಥಿತಿ ಇದೆ.

ಆಪ್‌ಗೆ ಹೋಲಿಸಿದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡೂ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಿಸದೆ ಟೀಕೆಗೆ ಗುರಿಯಾಗಿವೆ. ಇದನ್ನೇ ಕೇಜ್ರಿವಾಲ್‌ ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಚಪ್ಪಾಳೆ ಗಿಟ್ಟಿಸಿದ್ದಾರೆ.

ಶಾಹೀನ್‌ ಬಾಗ್‌ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಕುರಿತು ಒಂದೂ ಮಾತನಾಡದ ಕೇಜ್ರಿವಾಲ್‌ ‘ಜಾಣತನ’ ಪ್ರದರ್ಶಿಸಿದ್ದಾರೆ. ಈ ಪ್ರತಿಭಟನೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಎಷ್ಟೇ ಕೆಣಕಿದರೂ ಸೊ‍ಪ್ಪು ಹಾಕದೆ ತಂತ್ರಗಾರಿಕೆ ಮೆರೆದಿದ್ದಾರೆ.

ಎಂಟು ತಿಂಗಳ ಹಿಂದೆ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯ ಎದುರು ಈಜಲು ಕಾಂಗ್ರೆಸ್‌ ಮೈತ್ರಿಯ ಬೆಂಬಲವನ್ನು ಕೋರಿ ವಿಫಲವಾಗಿದ್ದ ಕೇಜ್ರಿವಾಲ್‌ಗೆ ಈಗ ಕಾಂಗ್ರೆಸ್‌ ವಿರೋಧಿ ಮತಗಳೂ ಕೈ ಹಿಡಿಯಬಲ್ಲವು ಎಂಬ ಭರವಸೆ ಇದೆ.

ಸ್ಥಳೀಯವಾಗಿ ಹೆಸರು ಮಾಡಿದಂತಹ ಮುಖವೇ ಇಲ್ಲದೆ, ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಯು ಇಲ್ಲಿಯೂ ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನೇ ನೆಚ್ಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT