ಮಂಗಳವಾರ, ಮಾರ್ಚ್ 31, 2020
19 °C

ವೀರಪ್ಪನ್‌ ಪುತ್ರಿ ಬಿಜೆಪಿ ಸೇರ್ಪಡೆ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಲವು ದಶಕಗಳ ಕಾಲ ಕರ್ನಾಟಕ ಮತ್ತು ತಮಿಳುನಾಡಿಗೆ ತಲೆನೋವಾಗಿ ಪರಿಣಮಿಸಿದ್ದ, ಕೊನೆಗೆ ಎನ್‌ಕೌಂಟರ್‌ನಲ್ಲಿ ಹತನಾದ ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದರು. 

ಮೋದಿ ಅವರ ಕಾರ್ಯ ಶೈಲಿಯನ್ನು ಮೆಚ್ಚಿ ತಾವು ಬಿಜೆಪಿ ಸೇರುತ್ತಿರುವುದಾಗಿ ವಿದ್ಯಾರಾಣಿ ಹೇಳಿಕೊಂಡಿದ್ದಾರೆ. ಅಲ್ಲದೆ, ಜನರಿಗೆ ಶಿಕ್ಷಣ ನೀಡಿ ಅವರನ್ನು ಮೇಲೆತ್ತಬೇಕು ಎಂಬುದು ತನ್ನ ಉದ್ದೇಶವಾಗಿರುವುದಾಗಿಯೂ ಅವರು ತಿಳಿಸಿದ್ದರು. 

ವಿದ್ಯಾರಾಣಿ ಬಿಜೆಪಿ ಸೇರ್ಪಡೆಯಾದ ಸುದ್ದಿಯನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇತ್ತ ಸಾಮಾಜಿಕ ತಾಣಗಳಲ್ಲಿ ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. 

ವರನಟ ರಾಜಕುಮಾರ್‌ ಅವರನ್ನು ಅಪಹರಿಸಿದ ಕಾಡುಗಳ್ಳನ ಪುತ್ರಿಯನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ತಪ್ಪು ಮಾಡಿದೆ ಎಂಬ ಅಭಿಪ್ರಾಯ ಒಂದು ಕಡೆಯಾದರೆ, ತಂದೆ ಮಾಡಿದ ತಪ್ಪಿಗೆ ಮಗಳಿಗೆ ಏಕೆ ಶಿಕ್ಷೆ ಕೊಡಬೇಕು ಎಂಬ ವಾದವೂ ಕೇಳಿ ಬಂದಿದೆ. ಈ ವಾದಕ್ಕೆ ಪ್ರತಿ ವಾದವೂ ಕೇಳಿ ಬರದೇ ಏನಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಎಂದಿದ್ದ ಅಮೂಲ್ಯಾಳ ಪರಿಸ್ಥಿತಿಯನ್ನೂ ಇದಕ್ಕೆ ಹೊಂದಿಸಲಾಗಿದೆ. 

‘ಅಮೂಲ್ಯಾ ಮಾಡಿದ ತಪ್ಪಿಗೆ ಅವಳ ಅಪ್ಪನನ್ನು ಸಂಶಯಿಸಬಾರದು. ಆದರೆ, ವೀರಪ್ಪನ್‌ ಮಾಡಿದ ತಪ್ಪಿಗೆ ಅತನ ಮಗಳನ್ನು ಸಂಶಯಿಸಬಾರದೇ’ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ. 

ಇಷ್ಟೇ ಅಲ್ಲದೆ, ವೀರಪ್ಪನ್‌ ಮಗಳನ್ನು ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿಯ ದೇಶಾಭಿಮಾನವನ್ನೂ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ‘ನರಹಂತಕ ವೀರಪ್ಪನ್ ಮಗಳು ಬಿಜೆಪಿ ಸೇರ್ಪಡೆ .ದಿ ಗ್ರೇಟ್ ಬಿಜೆಪಿ .ಇದು ದೇಶ ಭಕ್ತರ ಪಕ್ಷ ’ ಎಂಬ ಟೀಕೆಗಳೂ ಕೇಳಿ ಬಂದಿವೆ.

‘ವೀರಪ್ಪನ್‌ ಈಗ ಇದ್ದಿದ್ದರೆ, ಮೋದಿ ಸಂಪುಟದಲ್ಲಿ ಅರಣ್ಯ ಸಚಿವನಾಗುತ್ತಿದ್ದ’ ಎಂಬೆಲ್ಲ ಕಮೆಂಟ್‌ಗಳೂ ಸಾಮಾಜಿಕ ತಾಣಗಳಲ್ಲಿ ಕೇಳಿ ಬಂದಿವೆ.

ಗಣಿಗಾರಿಕೆ ಸಂಬಂಧಿಸಿದ ಹಲವು ಆರೋಪಗಳನ್ನು ಎದುರಿಸುತ್ತಿರುವ  ಸಚಿವ ಆನಂದ್ ಸಿಂಗ್‌ ಅವರಿಗೆ ಅರಣ್ಯ ಖಾತೆ ನೀಡಿದ್ದರ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದ್ದವು. ಇದೇ ಬೆಳವಣಿಗೆಯನ್ನು ವೀರಪ್ಪನ್‌ ಬಿಜೆಪಿ ಸೇರ್ಪಡೆಗೂ ಹೊಂದಿಕೆ ಮಾಡಲಾಗಿದೆ. ‘ಆನಂದ್ ಸಿಂಗ್ ಅವರು ಗಣಿಲೂಟಿ ಸಚಿವರಾದರೆ ಕಾಡುಗಳ್ಳ ವೀರಪ್ಪನ್ ಪುತ್ರಿ ಬಿಜೆಪಿ ಸೇರುವದೂ ಇನ್ನೂ ಸರಿ’ ಎಂಬ ವ್ಯಂಗ್ಯವೂ ಕೇಳಿ ಬಂದಿದೆ.  

ಕರ್ನಾಟಕ ಮತ್ತು ತಮಿಳುನಾಡು ಗಡಿಯ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ವೀರಪ್ಪನ್‌ ಹಲವು ದಶಕಗಳ ಕಾಲ ಅಟ್ಟಹಾಸ ಮೆರೆದಿದ್ದ. ಹಿರಿಯ ನಟ ಡಾ. ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದ. ಶಾಸಕ ನಾಗಪ್ಪ ಅವರನ್ನೂ ಅಪಹರಿಸಿ ಕೊನೆಗೆ ಅವರನ್ನು ಹತ್ಯೆ ಮಾಡಿದ್ದ. ಅರಣ್ಯ ಸಂಪತ್ತು ದೋಚಿದ್ದ ವೀರಪ್ಪನ್‌ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು