ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಅನ್ನು ದ್ವೇಷ ಹರಡುವ ಶಕ್ತಿ ಎಂದಿದ್ದರು ಸರ್ದಾರ್ ಪಟೇಲ್‌!

ಮಹಾತ್ಮ ಗಾಂಧಿ ಹತ್ಯೆ ನಂತರ ‘ಸಂಘ’ವನ್ನು ನಿಷೇಧಿಸಿತ್ತು ಸರ್ಕಾರ
Last Updated 31 ಅಕ್ಟೋಬರ್ 2018, 12:38 IST
ಅಕ್ಷರ ಗಾತ್ರ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮುಂಜಾನೆ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು (ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್) ಲೋಕಾರ್ಪಣೆ ಮಾಡಿದರು. ಪಟೇಲ್ ಅವರ ಪರಂಪರೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಆರ್‌ಎಸ್‌ಎಸ್ ಮುಂದಾಗುತ್ತಿದ್ದರೆ; ಅದೇ ಪಟೇಲರು ಅಂದು ಆರ್‌ಎಸ್‌ಎಸ್‌ ಅನ್ನು ದ್ವೇಷ ಹರಡುವ ‘ಶಕ್ತಿ’ ಎಂದು ಕರೆದಿದ್ದರು!

ಮಹಾತ್ಮ ಗಾಂಧಿ ಅವರ ಹತ್ಯೆ ನಂತರ ಕೇಂದ್ರ ಸರ್ಕಾರ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿತ್ತು. ಆ ಸಂದರ್ಭ ಗೃಹಸಚಿವರಾಗಿದ್ದ ಪಟೇಲರು, ಸಂಘವನ್ನು ದ್ವೇಷ ಬಿತ್ತುವ ಸಂಘಟನೆ ಎಂದು ಕರೆದಿದ್ದರು. ಇದಕ್ಕೆ ಸಂಬಂಧಿಸಿಗೃಹ ಸಚಿವಾಲಯದ ಆರ್ಕೈವ್‌ ವಿಭಾಗದಿಂದ ಪಡೆದ ಪತ್ರದ ಪ್ರತಿ, ಪಟೇಲರು ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್‌ನ ಆಗಿನ ಮುಖ್ಯಸ್ಥರಿಗೆ ಬರೆದಿದ್ದ ಪತ್ರದ ಪ್ರತಿಗಳನ್ನು ಉಲ್ಲೇಖಿಸಿ ದಿ ವೈರ್ ವರದಿ ಮಾಡಿದೆ.

1948ರ ಫೆಬ್ರುವರಿ 4ರಂದು ಪ್ರಕಟಣೆ ಹೊರಡಿಸಿದ್ದ ಕೇಂದ್ರ ಸರ್ಕಾರ, ದ್ವೇಷ ಮತ್ತು ಹಿಂಸೆಯನ್ನು ಬಿತ್ತುವ ‘ಶಕ್ತಿ’ಗಳು ದೇಶದ ಸ್ವಾತಂತ್ರ್ಯ ಕಸಿಯುತ್ತಿದ್ದು, ಹೆಸರನ್ನು ಹಾಳುಮಾಡುತ್ತಿವೆ. ಹೀಗಾಗಿ ಅಂತಹ ಸಂಘಟನೆಗಳ ನಿರ್ಮೂಲನೆ ದೃಷ್ಟಿಯಿಂದ ಆರ್‌ಎಸ್‌ಎಸ್ ಅನ್ನು ನಿಷೇಧಿಸುತ್ತೇವೆ ಎಂದು ಹೇಳಿತ್ತು.

‘1948ರ ಫೆಬ್ರುವರಿ 2ರಂದು ಕೈಗೊಳ್ಳಲಾದ ನಿರ್ಣಯದ ಪ್ರಕಾರ, ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲು ನಿರ್ಧರಿಸಲಾಗಿದೆ. ಎಲ್ಲ ರಾಜ್ಯಗಳಲ್ಲೂ ಇದು ಅನ್ವಯವಾಗಲಿದೆ.‍‍‍ಹಿಂದೂಗಳ ಭೌತಿಕ, ನೈತಿಕ, ಬೌದ್ಧಿಕ ಯೋಗಕ್ಷೇಮ ಹಾಗೂ ಭ್ರಾತೃತ್ವ, ಪ್ರೀತಿ ಹರಡುವುದು ತನ್ನ ಪ್ರಮುಖ ಧ್ಯೇಯ ಎಂದು ಆರ್‌ಎಸ್‌ಎಸ್‌ ಹೇಳಿಕೊಂಡಿದೆ. ಆದರೆ ಎಲ್ಲ ವರ್ಗಗಳ ಜನರ ಯೋಗಕ್ಷೇಮಕ್ಕೆಸರ್ಕಾರವೂ ಉತ್ಸುಕವಾಗಿದ್ದು, ಯೋಜನೆಗಳನ್ನೂ ರೂಪಿಸಲಾಗಿದೆ. ದೈಹಿಕ ತರಬೇತಿ, ಯುವಕರಿಗೆ ಶಿಕ್ಷಣದಲ್ಲಿ ಸೇನಾ ವಿಷಯಗಳ ಮಾಹಿತಿ ನೀಡುವ ಯೋಜನೆಗಳನ್ನು ರೂಪಸಿಲಾಗಿದೆ. ಆದಾಗ್ಯೂ, ಆರ್‌ಎಸ್‌ಎಸ್‌ನ ಸದಸ್ಯರು ಆ ಸಂಘಟನೆ ಹೇಳಿಕೊಂಡಿರುವ ಧ್ಯೇಯಕ್ಕೆ ಬದ್ಧರಾಗಿಲ್ಲ ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಹಿಂಸೆಯನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಸಂಘವನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲು ನಿರ್ಧರಿಸಲಾಗಿದೆ. ಕಾನೂನು ಪಾಲಿಸುವ ನಾಗರಿಕರು, ದೇಶದ ಹಿತ ಬಯಸುವ ಎಲ್ಲರೂ ಹೃದಯಪೂರ್ವಕವಾಗಿ ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ ಎಂಬ ಬಗ್ಗೆ ಸರ್ಕಾರಕ್ಕೆ ಸಂಶಯವಿಲ್ಲ’ ಎಂಬಗೃಹ ಸಚಿವಾಲಯದ ಪ್ರಕಟಣೆಯ ಪ್ರತಿಯನ್ನು ವರದಿ ಉಲ್ಲೇಖಿಸಿದೆ.

ಮಹಾತ್ಮ ಗಾಂಧಿ ಅವರ ಹತ್ಯೆಗೂ ಮುನ್ನ ಪಟೇಲರು ಆರ್‌ಎಸ್‌ಎಸ್ ಬಗ್ಗೆ ಮೃದು ಧೋರಣೆ ತಳೆದಿದ್ದುದು ನಿಜ. ಆದರೆ, ಹತ್ಯೆ ನಂತರ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯಿಸಿದ್ದರು. ನಿಷೇಧದ ಹೊರತಾಗಿಯೂ ಆರ್‌ಎಸ್‌ಎಸ್ ಕಾರ್ಯಾಚರಿಸುತ್ತಿರುವ ಬಗ್ಗೆ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ ಮುಖರ್ಜಿ ಅವರಿಗೆ 1948ರ ಜುಲೈ 18ರಂದು ಪತ್ರ ಬರೆದಿದ್ದರು ಎನ್ನಲಾಗಿದೆ.

‘ಹಿಂದೂ ಮಹಾಸಭಾದ ತೀವ್ರವಾದಿಗಳು ಗಾಂಧಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶ ಮತ್ತು ಸರ್ಕಾರದ ಅಸ್ತಿತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ.ನಿಷೇಧದ ಹೊರತಾಗಿಯೂ ಆರ್‌ಎಸ್‌ಎಸ್ ಕಾರ್ಯಾಚರಿಸುತ್ತಿದೆ ಎಂದು ನಮ್ಮ ವರದಿಗಳು ತಿಳಿಸಿವೆ’ ಎಂದುಶ್ಯಾಮ ಪ್ರಸಾದ ಮುಖರ್ಜಿ ಅವರಿಗೆ ಬರೆದಿದ್ದ ಪತ್ರದಲ್ಲಿ ಪಟೇಲರು ಆಕ್ರೋಶ ವ್ಯಕ್ತಪಡಿಸಿದ್ದರು.

ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ನಿರ್ಧಾರವನ್ನು ವಿವರಿಸಿ ಅಂದಿನ ಸರಸಂಘಚಾಲಕ (ಮುಖ್ಯಸ್ಥ) ಮಾಧವ ಸದಾಶಿವ್ ಗೋಳ್ವಲ್ಕರ್ (ಎಂ.ಎಸ್‌. ಗೋಳ್ವಲ್ಕರ್) ಅವರಿಗೂ ಪಟೇಲರು ಪತ್ರ ಬರೆದಿದ್ದರು. ಆ ಪತ್ರದಲ್ಲಿ, ‘ಹಿಂದೂಗಳನ್ನು ಸಂಘಟಿಸುವುದು ಮತ್ತು ಅವರಿಗೆ ಸಹಾಯ ಮಾಡುವುದು ಒಂದು ವಿಚಾರ. ಆದರೆ ಅದು ಮುಗ್ಧರ, ಅಸಹಾಯಕ ಪುರುಷ, ಮಹಿಳೆ, ಮಕ್ಕಳ ಮೇಲೆ ಪ್ರತೀಕಾರವಾಗಿ ಪರಿಣಮಿಸುವುದು ಮತ್ತೊಂದು ವಿಚಾರ. ಇದು ಹೊರತಾಗಿ ಕಾಂಗ್ರೆಸ್ ವಿರುದ್ಧ ಸಂಘಕ್ಕಿರುವ ವಿರೋಧ, ವ್ಯಕ್ತಿತ್ವದ ಎಲ್ಲಾ ಪರಿಗಣನೆಗಳನ್ನು ಕಡೆಗಣಿಸುವುದು ಜನರಲ್ಲಿ ಒಂದು ರೀತಿಯ ಅಶಾಂತಿ ಸೃಷ್ಟಿಸಿದೆ. ಅವರ (ಆರ್‌ಎಸ್‌ಎಸ್‌ನವರ) ಎಲ್ಲ ಭಾಷಣಗಳೂ ಕೋಮು ವಿಷದಿಂದ ಕೂಡಿರುತ್ತವೆ. ಹಿಂದೂಗಳ ರಕ್ಷಣೆಯ ಉತ್ಸಾಹದಲ್ಲಿ ವಿಷ ಬಿತ್ತುವುದು ಬೇಕಾಗಿಲ್ಲ. ಈ ವಿಷ ಬಿತ್ತುವ ಪರಿಣಾಮವಾಗಿ ಮಹಾತ್ಮ ಗಾಂಧಿಯವರ ಅಮೂಲ್ಯ ಜೀವವನ್ನು ದೇಶ ತ್ಯಾಗ ಮಾಡಬೇಕಾಯಿತು. ಜನರ, ಸರ್ಕಾರ ಸಹಾನುಭೂತಿ ಕೂಡ ಆರ್‌ಎಸ್‌ಎಸ್‌ ಪರವಾಗಿಲ್ಲ. ಗಾಂಧಿ ಹತ್ಯೆಗೆ ಸಂಬಂಧಿಸಿ ಆರ್‌ಎಸ್‌ಎಸ್‌ನವರು ಸಿಹಿ ಹಂಚಿ ಸಂಭ್ರಮಿಸಿದ್ದಾಗ ವಿರೋಧ ಮತ್ತಷ್ಟು ಹೆಚ್ಚಾಯಿತು. ಈ ಪರಿಸ್ಥಿತಿಯಲ್ಲಿಆರ್‌ಎಸ್‌ಎಸ್‌ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಅಂದಿನಿಂದ ಆರು ತಿಂಗಳು ಕಳೆದಿವೆ. ಈ ಸಮಯದ ನಂತರ ಆರ್‌ಎಸ್‌ಎಸ್‌ ಸದಸ್ಯರು ಸರಿಯಾದ ದಾರಿಗೆ ಬರುತ್ತಾರೆಂಬ ಆಶಾವಾದ ಹೊಂದಿದ್ದೆವು. ಆದರೆ ನನಗೆ ಬಂದ ವರದಿಗಳ ಪ್ರಕಾರ, ಅದೇ ಹಳೆಯ ಚಾಳಿಯನ್ನು ಮುಂದುವರಿಸುತ್ತಿರುವುದು ತಿಳಿದುಬಂದಿದೆ’ ಎಂದುಪಟೇಲರು ಬರೆದಿದ್ದರು.

ನಂತರ 1948ರ ನವೆಂಬರ್‌ನಲ್ಲಿ ಗೋಳ್ವಲ್ಕರ್ ಮನವಿ ಮೇರೆಗೆ ಅವರನ್ನು ಎರಡು ಬಾರಿ ಪಟೇಲರು ಭೇಟಿಯಾಗಿದ್ದರು ಎಂದು 1948ರ ನವೆಂಬರ್ 14ರಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಉಲ್ಲೇಖವಿದೆ. ಮೊದಲ ಮಾತುಕತೆಯಲ್ಲಿ, ಬೆಂಬಲಿಗರ ಬಳಿ ಮಾತುಕತೆ ನಡೆಸಿ ಅವರನ್ನು ಸರಿಯಾದ ಹಾದಿಗೆ ತರಲು ಸಮಯಬೇಕು ಎಂದುಗೋಳ್ವಲ್ಕರ್ ಹೇಳಿದ್ದರು. ನಂತರದ ಮಾತುಕತೆ ವೇಳೆ, ನಿಷೇಧವನ್ನು ವಾಪಸ್ ಪಡೆಯದೆ ಏನೂ ಮಾಡಲಾಗದು ಎಂದು ಹೇಳಿದ್ದರು. ಈ ಕುರಿತು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಬಳಿ ಕೇಂದ್ರ ಸರ್ಕಾರ ಅಭಿಪ್ರಾಯ ಕೇಳಿತು. ಆದರೆ, ನಿಷೇಧ ವಾಪಸ್ ಪಡೆಯಲು ಅವು ನಿರಾಕರಿಸಿದವು. ಆರ್‌ಎಸ್‌ಎಸ್‌ ಜತೆ ಹಲವು ರೀತಿಯಲ್ಲಿ ಗುರುತಿಸಿಕೊಂಡಿರುವವರು ದೇಶವಿರೋಧಿಚಟುವಟಿಕೆ, ವಿಧ್ವಸಂಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದರಿಂದ ಹಿಂದೆ ನಡೆದಂತಹ ಹಾನಿಕಾರಕ ಪರಿಣಾಮಗಳನ್ನು ಮತ್ತೆ ಎದುರಿಸಬೇಕಾದೀತು. ಈ ಕಾರಣಗಳಿಗಾಗಿ ನಿಷೇಧ ವಾಪಸ್ ಪಡೆಯುವುದು ಬೇಡ ಎಂದು ರಾಜ್ಯಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಈ ನಿರ್ಧಾರವನ್ನು ತಿಳಿಸಿದ ಬಳಿಕ ಪಟೇಲ್ ಮತ್ತು ಜವಹರಲಾಲ್ ನೆಹರು ಜತೆ ಮಾತುಕತೆ ನಡೆಸಬೇಕೆಂದುಗೋಳ್ವಲ್ಕರ್ ಮನವಿ ಮಾಡಿದ್ದರು. ಈ ಮನವಿಯನ್ನು ನೆಹರು ತಿರಸ್ಕರಿಸಿದ್ದರು.

ಬಳಿಕ, ಪ್ರಧಾನಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದ ಆರ್‌ಎಸ್‌ಎಸ್ ಮುಖ್ಯಸ್ಥರು, ಜಾತ್ಯತೀತ ಭಾರತವನ್ನು ಮತ್ತು ರಾಷ್ಟ್ರಧ್ವಜವನ್ನುಪೂರ್ಣವಾಗಿ ಒಪ್ಪಿಕೊಳ್ಳುವುದಾಗಿಯೂ ನಿಷೇಧವನ್ನು ಹಿಂಪಡೆಯಬೇಕೆಂದೂ ಮನವಿ ಮಾಡಿದ್ದರು. ಆದರೂ ಹಲವು ಕಾರಣಗಳಿಗಾಗಿ ನಿಷೇಧವನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವುದು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಅಭಿಪ್ರಾಯಪಟ್ಟಿತ್ತು ಎಂದೂ1948ರ ನವೆಂಬರ್ 14ರ ಪ್ರಕಟಣೆಯಲ್ಲಿ ಸರ್ಕಾರ ಮಾಹಿತಿ ನೀಡಿತ್ತು.

ಕೊನೆಗೂ ಹಲವು ವಿಚಾರಗಳಿಗೆಗೋಳ್ವಲ್ಕರ್ ಅವರು ಸಮ್ಮತಿ ಸೂಚಿಸಿದ ನಂತರ, 1949ರ ಜುಲೈ 11ರಂದು ನಿಷೇಧ ವಾಪಸ್ ಪಡೆಯಲಾಯಿತು. ಆರ್‌ಎಸ್‌ಎಸ್‌ ಮತ್ತು ಅದರ ನಾಯಕರು ದೇಶದ ಸಂವಿಧಾನಕ್ಕೆ ಮತ್ತು ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರಲು ಸಮ್ಮತಿಸಿದ್ದಾರೆ ಎಂದು ನಿಷೇಧ ಹಿಂಪಡೆವ ಬಗ್ಗೆ ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ ಸರ್ಕಾರ ಹೇಳಿತ್ತು ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT