ಶನಿವಾರ, ಮಾರ್ಚ್ 6, 2021
28 °C
ಎಲ್ಲಾ ಆರ್ಥಿಕತೆಗಳೂ ಕುಸಿಯುತ್ತಿವೆ, ಭಾರತದಲ್ಲಿ ಪರಿಣಾಮ ಹೆಚ್ಚಿದೆ: ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಲಿನಾ ಕಳವಳ

ಭಾರತದ ಆರ್ಥಿಕತೆ 10 ವರ್ಷ ಹಿಂದಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ‘ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯು ಕುಸಿತದ ಹಾದಿಯಲ್ಲಿದೆ. ಆದರೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲಿ ಗಾಢವಾಗಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.

ಮುಂದಿನ ವಾರ ಇಲ್ಲಿ ಐಎಂಎಫ್ ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಶೃಂಗಸಭೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕ್ರಿಸ್ಟಲಿನಾ ಈ ಮಾತು ಹೇಳಿದ್ದಾರೆ.

‘ಇಂದು ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆಗಳ ನಡುವೆ ಪರಸ್ಪರ ಸಂಬಂಧವಿದೆ. ಹೀಗಾಗಿ ಇದು ಜಾಗತಿಕ ಆರ್ಥಿಕ ಕುಸಿತ. ವಿಶ್ವದ ಶೇ 90ರಷ್ಟು ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಇದೆ. ಆದರೆ ಭಾರತ ಮತ್ತು ಬ್ರೆಜಿಲ್‌ನಂತಹ ಬೃಹತ್ ಮಾರುಕಟ್ಟೆಗಳಲ್ಲಿ ಇದರ ಪರಿಣಾಮಗಳು ದೊಡ್ಡ ಪ್ರಮಾಣದಲ್ಲಿ ಗೋಚರಿಸುತ್ತಿವೆ. ಈ ಎರಡೂ ಮಾರುಕಟ್ಟೆಗಳಲ್ಲಿ ಆರ್ಥಿಕತೆಯು ಹತ್ತು ವರ್ಷದ ಹಿಂದೆ ಇದ್ದ ಮಟ್ಟಕ್ಕೆ ಕುಸಿಯುವ ಸಾಧ್ಯತೆ ಅಧಿಕವಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ರಾಷ್ಟ್ರಗಳು ತಮ್ಮ ಆರ್ಥಿಕ ನೀತಿಗಳಲ್ಲಿ ಅಗತ್ಯ ಬದಲಾವಣೆ ತರುವ ಮೂಲಕ, ಈ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸಬಹುದು. ಇಂತಹ ಸುಧಾರಣೆಗಳನ್ನು ಕೈಗೊಳ್ಳಲು ಇದು ಸರಿಯಾದ ಸಮಯ. ಈ ಆರ್ಥಿಕತೆಗಳು ತಮ್ಮ ಬಜೆಟ್‌ನಲ್ಲಿನ ವಿವಿಧ ನಿಧಿಗಳನ್ನು ಸರಿಯಾಗಿ ಬಳಕೆ ಮಾಡುವತ್ತ ಗಮನಹರಿಸಬೇಕು. ಈ ಬಿಕ್ಕಟ್ಟಿನಿಂದ ಹೊರಬರಲು ಬಡ್ಡಿದರಗಳನ್ನು ಇಳಿಸುವ ಕೆಲಸ ಮಾಡಬೇಕು. ಇದರಿಂದ ಹೂಡಿಕೆದಾರರು ಹೆಚ್ಚು ಬಂಡವಾಳ ಹೂಡಲು ಅವಕಾಶ ದೊರೆಯುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಮೂಲಸೌಕರ್ಯ

ರಸ್ತೆ, ಹೆದ್ದಾರಿ ಮತ್ತು ವಿದ್ಯುತ್ ಶಕ್ತಿ ಲಭ್ಯತೆಯು ಉದ್ದಿಮೆ ಹಾಗೂ ಮಾರುಕಟ್ಟೆಯ ಬೆಳವಣಿಗೆಗೆ ಅನುಕೂಲವಾಗುವಂತೆ ಇದೆ. ಆದರೆ ರೈಲು ಮತ್ತು ಬಂದರು ಸೇವೆಗಳಲ್ಲಿ ಸ್ವಲ್ಪ ತೊಡಕು ಇದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆಯೂ ವಿಪರೀತವಾಗಿ ಇದೆ. ಇದರಲ್ಲಿ ಭಾರತ ಇನ್ನೂ ಸುಧಾರಣೆ ಕಾಣಬೇಕಿದೆ

ಮಾಹಿತಿ ಮತ್ತು ತಂತ್ರಜ್ಞಾನ

ದೈನಂದಿನ ಜೀವನ ಮತ್ತು ಕೆಲಸದ ವೇಳೆ ತಂತ್ರಜ್ಞಾನದ ಅಳವಡಿಕೆಯಲ್ಲಿ ಭಾರತ ತೀರಾ ಹಿಂದೆ ಉಳಿದಿದೆ. ಭಾರತದ ಭಾರಿ ಜನಸಂಖ್ಯೆಗೆ ಹೋಲಿಸಿದರೆ, ಮೊಬೈಲ್–ಮೊಬೈಲ್‌ ಅಂತರ್ಜಾಲ ಮತ್ತು ಬ್ರಾಡ್‌ಬ್ಯಾಂಡ್‌ ಬಳಕೆ ತೀರಾ ಕಡಿಮೆ ಇದೆ. ಇದು ಉತ್ಪಾದಕತೆಯನ್ನು ಕಡಿಮೆ ಮಾಡಿದೆ

ಕೌಶಲ

ಭಾರತದಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕಡಿಮೆ ಇದೆ. ಶಿಕ್ಷಕರ ಕೌಶಲಾಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಕೌಶಲದ ಬೆಳವಣಿಗೆಗೆ ಸೂಕ್ತ ಅವಕಾಶವಿಲ್ಲ. ವೃತ್ತಿಪರರ ಕೌಶಲಾಭಿವೃದ್ಧಿಗೂ ಅಗತ್ಯ ಅವಕಾಶಗಳಿಲ್ಲ. ಹೀಗಾಗಿ ಕೌಶಲದಲ್ಲಿ ಭಾರತವು ತೀರಾ ಹಿಂದೆ ಉಳಿದಿದೆ\

ಕಾರ್ಮಿಕರು...

ಕಾರ್ಮಿಕ ಮತ್ತು ಮಾಲೀಕರ ನಡುವಣ ಸಂಬಂಧ, ವೇತನ, ಕಾರ್ಮಿಕರ ಹಕ್ಕುಗಳು, ಕಾರ್ಮಿಕರಿಗೆ ನೀಡಲಾಗುವ ಸವಲತ್ತುಗಳು, ವಿದೇಶಿ ಕಾರ್ಮಿಕರ ನೇಮಕ ಮೊದಲಾದ ವಿಷಯಗಳಲ್ಲಿ ಭಾರತವು ಇನ್ನೂ ಸಾಕಷ್ಟು ಸುಧಾರಣೆ ಕಾಣಬೇಕಿದೆ

ಆರೋಗ್ಯ

ದೇಶದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದೆ. ಅಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಅಗತ್ಯ ಸಂಖ್ಯೆಯಷ್ಟು ಇಲ್ಲ. ಇದು ಒಟ್ಟಾರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಹೊರತುಪಡಿಸಿದರೆ ಅತ್ಯಂತ ಕಡಿಮೆ ಜೀವಿತಾವಧಿ ಅಂದಾಜು (59.4 ವರ್ಷ) ಹೊಂದಿರುವ ರಾಷ್ಟ್ರ ಭಾರತ. ಈ ಕ್ಷೇತ್ರದಲ್ಲಿ ದೇಶವು ಸಾಕಷ್ಟು ಪ್ರಗತಿ ಸಾಧಿಸಬೇಕಿದೆ

ಅನ್ವೇಷಣಾ ಸಾಮರ್ಥ್ಯ

ಭಾರತದಲ್ಲಿ ಅನ್ವೇಷಣೆಗೆ ಹೆಚ್ಚು ಅವಕಾಶಗಳಿವೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಬೌದ್ಧಿಕ ಆಸ್ತಿ ಹಕ್ಕಿಗಾಗಿ ಅರ್ಜಿ ಸಲ್ಲಿಸುವವರ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಭಾರತವು ತುಸು ಸುಧಾರಣೆ ಕಂಡಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು