ಬಾಂಡ್‌ ಮಾರಾಟದ ಭರಾಟೆ: ರಾಜಕೀಯ ಪಕ್ಷಗಳಿಗೆ ಹರಿದ ಹಣ ₹1,716 ಕೋಟಿ

ಶುಕ್ರವಾರ, ಏಪ್ರಿಲ್ 26, 2019
33 °C

ಬಾಂಡ್‌ ಮಾರಾಟದ ಭರಾಟೆ: ರಾಜಕೀಯ ಪಕ್ಷಗಳಿಗೆ ಹರಿದ ಹಣ ₹1,716 ಕೋಟಿ

Published:
Updated:

ನವದೆಹಲಿ: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದಲ್ಲಿ ಭಾರಿ ಏರಿಕೆ ದಾಖಲಾಗಿದೆ. ಕಳೆದ ಇಡೀ ವರ್ಷದಲ್ಲಿ ಮಾರಾಟ ಆಗಿರುವ ಬಾಂಡ್‌ಗಳಿಗೆ ಹೋಲಿಸಿದರೆ ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಬಾಂಡ್‌ ಮಾರಾಟದಲ್ಲಿ ಶೇ 62.39ರಷ್ಟು ಏರಿಕೆಯಾಗಿದೆ. ಒಟ್ಟು ₹ 1,716.05 ಕೋಟಿ ಮೌಲ್ಯದ ಬಾಂಡ್‌ಗಳು ಮಾರಾಟವಾಗಿವೆ.

ಪುಣೆ ಮೂಲದ ವಿಹಾರ್‌ ದುರ್ವೆ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಎಸ್‌ಬಿಐ ಈ ವಿವರಗಳನ್ನು ನೀಡಿದೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು 2017ರಲ್ಲಿ ಕೇಂದ್ರ ಸರ್ಕಾರವು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿತ್ತು. ನಿಗದಿತ ಅವಧಿಗಳಲ್ಲಿ ಈ ಬಾಂಡ್‌ಗಳ ಮಾರಾಟ ಮಾಡಲು ಎಸ್‌ಬಿಐಗೆ ಪರವಾನಗಿ ನೀಡಲಾಗಿತ್ತು.

ಬ್ಯಾಂಕ್‌ ನೀಡಿರುವ ಮಾಹಿತಿಯ ಪ್ರಕಾರ, 2019ರ ಜನವರಿ ಮತ್ತು ಮಾರ್ಚ್‌ ಅವಧಿಯಲ್ಲಿ ಬ್ಯಾಂಕ್‌ನ 12 ಕೇಂದ್ರಗಳ ಮೂಲಕ ಒಟ್ಟಾರೆ ₹1,716.05 ಕೋಟಿ ಮೌಲ್ಯದ ಬಾಂಡ್‌ಗಳು ಮಾರಾಟವಾಗಿವೆ. ಗರಿಷ್ಠ ಪ್ರಮಾಣದ ಬಾಂಡ್‌ ಮಾರಾಟವಾಗಿರುವ ನಗರಗಳಲ್ಲಿ ಮುಂಬೈ (₹405.60 ಕೋಟಿ) ಮೊದಲ ಸ್ಥಾನ ದಲ್ಲಿದ್ದರೆ, ಕೋಲ್ಕತ್ತ (₹ 205.92 ಕೋಟಿ) ಎರಡನೇ ಸ್ಥಾನದಲ್ಲಿದೆ.

2018ರಲ್ಲಿ ಆರು ಬಾರಿ ಒಟ್ಟಾರೆ ₹1,056.73 ಕೋಟಿ ಮೌಲ್ಯದ ಬಾಂಡ್‌ಗಳನ್ನು ಬ್ಯಾಂಕ್‌ ಮಾರಾಟ ಮಾಡಿತ್ತು. ಆಗಲೂ ₹ 382.70 ಕೋಟಿಯ ಬಾಂಡ್‌ಗಳನ್ನು ಖರೀದಿಸಿದ್ದ ಮುಂಬೈ ಮೊದಲ ಸ್ಥಾನದಲ್ಲಿತ್ತು. 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಾಗ ಬೆಂಗಳೂರಿನಲ್ಲಿ ₹ 82.75 ಕೋಟಿ ಮೌಲ್ಯದ ಬಾಂಡ್‌ಗಳು ಮಾರಾಟವಾಗಿದ್ದವು. ಆದರೆ ಕಳೆದ ಎರಡು ಅವಧಿಗಳಲ್ಲಿ ರಾಜ್ಯದಲ್ಲಿ ₹17.25 ಕೋಟಿ ಮೌಲ್ಯದ ಬಾಂಡ್‌ಗಳು ಮಾತ್ರ ಮಾರಾಟವಾಗಿವೆ.

ಚುನಾವಣಾ ಬಾಂಡ್‌ ಮಾರಾಟ ವಿಚಾರ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ‘ಬಾಂಡ್‌ಗಳ ಮೂಲಕ ದೇಣಿಗೆ ಸಂಗ್ರಹಿಸಲು ಅವಕಾಶ ಕೊಡುವುದು ಮತ್ತು ದೇಣಿಗೆಗೆ ನಿಗದಿಪಡಿಸಿದ್ದ ಗರಿಷ್ಠ ಪ್ರಮಾಣವನ್ನು ರದ್ದು ಮಾಡುವುದರಿಂದ ಚುನಾವಣೆಯಲ್ಲಿ ಕಪ್ಪುಹಣ ಬಳಕೆ ಹೆಚ್ಚಾಗುತ್ತದೆ’ ಎಂದು ಚುನಾವಣಾ ಆಯೋಗವು ಕೋರ್ಟ್‌ ಮುಂದೆ ಹೇಳಿಕೆ ನೀಡಿದೆ.

ಕಾಂಗ್ರೆಸ್‌, ಸಿಪಿಎಂ, ತೃಣಮೂಲ ಕಾಂಗ್ರೆಸ್‌ ಮುಂತಾದ ಪಕ್ಷಗಳು ಸಹ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಸಂಗ್ರಹಿಸುವುದನ್ನು ವಿರೋಧಿಸಿದ್ದವು. ‘ಇದರಿಂದ ಆಡಳಿತಾರೂಢ ಬಿಜೆಪಿಗೆ ಮಾತ್ರ ಗರಿಷ್ಠ ಲಾಭವಾಗುತ್ತದೆ’ ಎಂದು ಈ ಎಲ್ಲಾ ಪಕ್ಷಗಳು ಆರೋಪಿಸಿದ್ದವು.

ಬಾಂಡ್‌ಗಳ ಮೂಲಕ ಸಂದಾಯವಾಗಿರುವ ಹಣದಲ್ಲಿ ಗರಿಷ್ಠ ಪ್ರಮಾಣದ ಹಣವು ಬಿಜೆಪಿಗೆ ಸಂದಿದೆ ಎಂಬುದು ವಿವಿಧ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಲೆಕ್ಕಪತ್ರಗಳಿಂದ ದೃಢಪಟ್ಟಿದೆ.

ಏನು– ಹೇಗೆ
* ಚುನಾವಣಾ ಬಾಂಡ್‌ ಎಂದರೇನು?

ಬ್ಯಾಂಕ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಜಾರಿಮಾಡಿರುವ ಒಂದು ವ್ಯವಸ್ಥೆ

* ಈ ಬಾಂಡ್‌ನ ಮಾನ್ಯತೆಯ ಅವಧಿ ಎಷ್ಟು?
15 ದಿನಗಳು. ಉದಾಹರಣೆಗೆ 2019ರ ಏಪ್ರಿಲ್‌ 1ರಂದು ಪಡೆದ ಬಾಂಡ್‌ನ ಮಾನ್ಯತೆ ಏಪ್ರಿಲ್‌ 15ರವರೆಗೆ ಮಾತ್ರ ಇರುತ್ತದೆ.

* ಯಾವುದೇ ವ್ಯಕ್ತಿ ಈ ಬಾಂಡ್‌ಗಳನ್ನು ನಗದೀಕರಿಸಬಹುದೇ?
ಇಲ್ಲ, ಅರ್ಹ ರಾಜಕೀಯ ಪಕ್ಷ ಮಾತ್ರ ಬಾಂಡ್‌ ಅನ್ನು ತನ್ನ ಅಧಿಕೃತ ಖಾತೆಗೆ ಜಮೆ ಮಾಡುವ ಮೂಲಕ ನಗದೀಕರಿಸಬಹುದು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !