ಭಾನುವಾರ, ಆಗಸ್ಟ್ 18, 2019
26 °C

ಫೇಸ್‌ಬುಕ್‌ನಿಂದ ಹೊಸ ಕರೆನ್ಸಿ ಪ್ರಸ್ತಾಪ: ಸುರಕ್ಷೆಯ ಆತಂಕ

Published:
Updated:

ವಾಷಿಂಗ್ಟನ್‌: ಡಿಜಿಟಲ್‌ ಕರೆನ್ಸಿ ಆಧಾರಿತ ಹಣಕಾಸು ವ್ಯವಸ್ಥೆಯನ್ನು ಜಾರಿ ಮಾಡುವ ಫೇಸ್‌ಬುಕ್‌ನ ಮಹತ್ವಾಕಾಂಕ್ಷಿ ಪ್ರಸ್ತಾವನೆಯ ವಿರುದ್ಧ ಕಾನೂನು ನಿರೂಪಕರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಮತ್ತು ಖಜಾನೆ ಕಾರ್ಯದರ್ಶಿ ಕೂಡ ಈ ಪ್ರಸ್ತಾವನೆಯ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. 

ಲಿಬ್ರಾ ಎಂಬ ಡಿಜಿಟಲ್‌  ಕರೆಯನ್ನು ಪರಿಚಯಿಸಲು ಫೇಸ್‌ಬುಕ್‌ ಉತ್ಸುಕವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆ ಆರಂಭವಾಗಿದ್ದು ಮೊದಲು ಸೆನೆಟ್‌ ಬ್ಯಾಂಕಿಂಗ್‌ ಸಮಿತಿಯೊಡನೆ ಚರ್ಚೆ ನಡೆಯಿತು.  ಈ ನಡುವೆ ಫೇಸ್‌ಬುಕ್‌, ಅಮೆಜಾನ್‌, ಆಪಲ್‌ ಕಂಪೆನಿಯ ಮಾರುಕಟ್ಟೆ ಸಾಮರ್ಥ್ಯ ಕುರಿತು ಸಂಸತ್ತಿನ ನ್ಯಾಯಾಂಗ ಸಮಿತಿಯು ಉಭಯಪಕ್ಷೀಯ ತನಿಖೆಯನ್ನು ವಿಸ್ತರಿಸಲಿದೆ.

ಹೊಸ ಕರೆನ್ಸಿ ’ಲಿಬ್ರಾ‘ ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ನಿಲ್ಲದು ಎಂದು ಟ್ರಂಪ್‌ ಕಳೆದ ವಾರ ಟ್ವೀಟ್‌ ಮಾಡಿದ್ದರು. ಖಜಾನೆ ಕಾರ್ಯದರ್ಶಿಗಳಾದ ಸ್ವೀವನ್‌ ಮುನ್ಚಿನ್‌ ಮತ್ತು ಫೆಡರಲ್‌ ಅಧ್ಯಕ್ಷ ಜೆರೋಮ್‌ ಪವೆಲ್‌ ಕೂಡ ಟ್ವೀಟ್‌ ಮಾಡಿ ಲಿಬ್ರಾವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಲೇವಾದೇವಿಗಾರರು ಮತ್ತು ಭಯೋತ್ಪಾದಕತೆಗೆ ಹಣ ಒದಗಿಸುವವರು ಈ ಲಿಬ್ರಾವನ್ನು ಬಳಸಿಕೊಳ್ಳುವ ಸಂಭವವಿದೆ. ಇದು ನಿಜವಾಗಿಯೂ ರಾಷ್ಟ್ರೀಯ ಭದ್ರತೆಯ ವಿಷಯ. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮೊದಲು ಫೇಸ್‌ಬುಕ್‌ ತುಂಬಾ ಕೆಲಸ ಮಾಡಬೇಕಾಗಿದೆ ಎಂದು ಮುನ್ಚಿನ್‌ ಸೋಮವಾರ ಸುದ್ದಿಗಾರರೊಡನೆ ಮಾತನಾಡುತ್ತ ಹೇಳಿದ್ದರು. 

ಫೇಸ್‌ಬುಕ್‌ನ ಈ ಯೋಜನೆಯ ಕಾರ್ಯನಿರ್ವಹಾಕ ಅಧಿಕಾರಿ ಡೇವಿಡ್‌ ಮರ್ಕಸ್‌, ’ ಲಿಬ್ರಾ ಎಂಬುದು ಬಹಳ ಸುಭದ್ರವಾದ, ಕಡಿಮೆ ವೆಚ್ಚದಲ್ಲಿ ಜಗತ್ತಿನಲ್ಲಿ ಜನರು ಹಣದ ವ್ಯವಹಾರ ಮಾಡುವ ಸಾಮರ್ಥ್ಯ ನೀಡಲಿದೆ‘ ಎಂದು ಹೇಳಿದ್ದಾರೆ. 

ಈ ಡಿಜಿಟಲ್‌ ಕರೆನ್ಸಿಯ ಪ್ರಸ್ತಾವವನ್ನು ಸ್ಟೇಬಲ್‌ಕಾಯಿನ್‌ ಎಂಬ ಹೆಸರಿನಲ್ಲಿ ಮಂಡಿಸಲಾಗಿದ್ದು, ಡಾಲರ್‌, ಯೂರೋ ಮತ್ತು ಜಪಾನೀ ಯೆನ್‌ ಮೂಲಕ ಠೇವಣಿ ಮಾಡಬಹುದು. ಬ್ಯಾಂಕ್‌ ಖಾತೆಯ ಮೂಲಕ ಹಣ ನಿರ್ವಹಣೆಯ ಅವಕಾಶವಿಲ್ಲದ  ಜಗತ್ತಿನ ವಿವಿಧೆಡೆಯ ಲಕ್ಷಾಂತರ ಜನರು ದೇಶದ ಗಡಿಗಳ ಹಂಗಿಲ್ಲದೆ ಕಡಿಮೆ ಶುಲ್ಕ ನೀಡಿ ಹಣ ವರ್ಗಾವಣೆ ಮಾಡಬಹುದು ಎಂದು ಫೇಸ್‌ಬುಕ್‌ ಪ್ರತಿಪಾದಿಸುತ್ತಿದೆ. 

ಅದೇವೇಳೆಗೆ ಬಳಕೆದಾರರ ಖಾಸಗಿತನ, ಡೇಟಾ ಸುರಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳು ಉದ್ಭಭವಿಸಿವೆ. ಇದೇ ದಾರಿಯನ್ನು ಬಳಸಿಕೊಂಡು ವಂಚಕರು ಅಪರಾಧಗಳನ್ನು ಎಸಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. 

Post Comments (+)