ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನದ ವಿರುದ್ಧ 'ಜಮೀನ್ ಸಮಾಧಿ ಸತ್ಯಾಗ್ರಹ' ಕೈಗೊಂಡ ರೈತರು

Last Updated 2 ಮಾರ್ಚ್ 2020, 12:17 IST
ಅಕ್ಷರ ಗಾತ್ರ

ಜೈಪುರ: ವಸತಿ ಯೋಜನೆಗಾಗಿ ಜೈಪುರ ಅಭಿವೃದ್ಧಿ ಪ್ರಾಧಿಕಾರ (ಜೆಡಿಎ) ಭೂಸ್ವಾಧೀನ ಮಾಡಿರುವುದನ್ನು ವಿರೋಧಿಸಿ ರಾಜಸ್ಥಾನದ ನಿಂದಾರ್ ಗ್ರಾಮದಲ್ಲಿ ರೈತರು ರಾಜ್ಯ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಐವರು ಮಹಿಳೆಯರು ಸೇರಿದಂತೆ ಇಪ್ಪತ್ತೊಂದು ರೈತರು 'ಜಮೀನ್ ಸಮಾಧಿ ಸತ್ಯಾಗ್ರಹ' (ಅರ್ಧ ದೇಹದ ಸಮಾಧಿ) ಮಾಡಿಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಕುತ್ತಿಗೆವರೆಗಿನ ಆಳದ ಗುಂಡಿಯನ್ನು ತೋಡಿ ಅದರಲ್ಲಿ ಹೂತು ಅರ್ಧ ಸಮಾಧಿ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ಪ್ರಕಾರವೇ ತಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಈ ಮೊದಲು ಕೂಡ ಜನವರಿಯಲ್ಲಿ ರೈತರು 'ಜಮೀನ್ ಸಮಾಧಿ ಸತ್ಯಾಗ್ರಹ' ವನ್ನು ನಡೆಸಿದ್ದರು. ಆದರೆ ಸರ್ಕಾರವು 50 ದಿನಗಳಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ನಾಲ್ಕು ದಿನಗಳ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.

ಪ್ರತಿಭಟನೆಯಲ್ಲಿ ಐವರು ಮಹಿಳೆಯರು ಸೇರಿದಂತೆ ಇಪ್ಪತ್ತೊಂದು ರೈತರು ಭಾನುವಾರ ಅರ್ಧ ಸಮಾಧಿ ಮಾಡಿಕೊಂಡು ಪ್ರತಿಭಟನೆಗೆ ಮುಂದಾಗಿದ್ದರು. ಸೋಮವಾರ ರೈತರ ಸಂಖ್ಯೆಯು 51ಕ್ಕೆ ಏರಿಕೆಯಾಗಿ ಪ್ರತಿಭಟನೆ ಉಲ್ಬಣಗೊಂಡಿದೆ.

'ರೈತರು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ' ಎಂದು ನಿಂದರ್ ಬಚಾವೊ ಯುವ ಕಿಸಾನ್ ಸಂಗರ್ಷ್ ಸಮಿತಿ ನಾಯಕ ನಾಗೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
2017ರ ಅಕ್ಟೋಬರ್‌ನಲ್ಲಿ ಕೂಡ 1,300ಕ್ಕೂ ಅಧಿಕ ಬಿಘಾ (812.5 ಎಕರೆ) ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದ ಜೆಡಿಎ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಅವರಲ್ಲಿ ಕೆಲವರು ಉಪವಾಸ ಸತ್ಯಾಗ್ರಹವನ್ನು ಕೂಡ ನಡೆಸಿದ್ದರು.

ಜೆಡಿಎ ಇದುವರೆಗೆ 600 ಬಿಘಾ (375 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಪರಿಹಾರವಾಗಿ ಸ್ಥಳೀಯ ನ್ಯಾಯಾಲಯದಲ್ಲಿ 60 ಕೋಟಿ ರೂ. ಜಮೆ ಮಾಡಿದೆ. ಆದರೆ ಈಗ ಚಾಲ್ತಿಯಲ್ಲಿರುವ ಮಾರುಕಟ್ಟೆ ದರಗಳಿಗೆ ಪರಿಹಾರ ಅನುಗುಣವಾಗಿಲ್ಲ ಎಂದು ಹೇಳಿ ಗ್ರಾಮಸ್ಥರು ಈ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

ಜನವರಿ 2011ರಲ್ಲಿ ಘೋಷಿಸಿರುವ ಗೃಹ ಯೋಜನೆ ಮೂಲಕ ಸುಮಾರು 10 ಸಾವಿರ ಮನೆಗಳನ್ನು ನಿರ್ಮಿಸುವ ಗುರಿಯನ್ನು ಜೆಡಿಎ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT