ಮಂಗಳವಾರ, ಮೇ 24, 2022
24 °C

ನೌಕಾಪಡೆಗೆ ಶೀಘ್ರವೇ ಜಲಾಂತರ್ಗಾಮಿ ವೇಲಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಜಗಾಂವ್‌ ಹಡಗುಕಟ್ಟೆಯಲ್ಲಿ ಸ್ಕಾರ್ಪಿನ್‌ ಸರಣಿಯ(ಡೀಸೆಲ್‌–ಎಲೆಕ್ಟ್ರಿಕ್‌ ಚಾಲಿತ) ಜಲಾಂತರ್ಗಾಮಿ ವೇಲಾಗೆ ಸೋಮವಾರ ರಕ್ಷಣಾ ಸಾಮಗ್ರಿ ಉತ್ಪಾದನಾ ವಿಭಾಗದ ಕಾರ್ಯದರ್ಶಿ ಅಜಯ್‌ ಕುಮಾರ್ ಸಿಂಗ್‌  ಅವರ ಪತ್ನಿ ವೀಣಾ ಅಜಯ್‌ ಕುಮಾರ್‌ ಚಾಲನೆ ನೀಡಿದರು.

ಫ್ರಾನ್ಸ್‌ ಸಹಯೋಗದಲ್ಲಿ ಭಾರತ  ಸ್ಕಾರ್ಪಿನ್‌ ಸರಣಿಯ ಆರು  ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡುತ್ತಿದ್ದು, ಈ ಸರಣಿಯಲ್ಲಿ ವೇಲಾ 4ನೇ ಜಲಾಂತರ್ಗಾಮಿಯಾಗಿದೆ.

ನೌಕಾಪಡೆಗೆ ಸೇರ್ಪಡೆಯಾಗುವ ಮುನ್ನ ವೇಲಾ ಹಲವು ಪರೀಕ್ಷೆಗೊಳಪಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಕಾರ್ಪಿನ್‌ ಸರಣಿಯ ಜಲಾಂತರ್ಗಾಮಿಗಳ ನಿರ್ಮಾಣ ಹಾಗೂ ತಂತ್ರಜ್ಞಾನ ಹಂಚಿಕೆಗೆ ಫ್ರಾನ್ಸ್‌ನ ನೇವಲ್‌ ಗ್ರೂಪ್‌ ಜತೆ ಮಜಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ (ಎಂಡಿಎಲ್‌)ಒಪ್ಪಂದ ಮಾಡಿಕೊಂಡಿದೆ. ಈ ಸರಣಿಯ 5ನೇ ಜಲಾಂತರ್ಗಾಮಿಯು ಶೀಘ್ರವೇ ಸೇವೆಗೆ ಮುಕ್ತವಾಗಲಿದೆ ಎಂದು ಎಂಡಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇಲಾ ಜಲಾಂತರ್ಗಾಮಿಗೆ ಮೊದಲು ಕಲ್ವರಿ, ಖಾಂದೇರಿ ಹಾಗೂ ಕಾರಂಜ್‌ ಜಲಾಂತರ್ಗಾಮಿಯನ್ನು ಎಂಡಿಎಲ್‌ ನಿರ್ಮಾಣಗೊಳಿಸಿತ್ತು. ಕಲ್ವರಿ ಈಗಾಗಲೇ ನೌಕಾಪಡೆಗೆ ಸೇಪರ್ಡೆಗೊಂಡಿದ್ದು, ಉಳಿದವುಗಳು ವಿವಿಧ ಪರೀಕ್ಷಾ ಹಂತದಲ್ಲಿವೆ.

1973ರ  ಆ.31ರಂದು ಐಎನ್ಎಸ್‌ ವೇಲಾ ನೌಕಾಪಡೆಗೆ ನಿಯೋಜಿಸಲ್ಪಟ್ಟಿತ್ತು. 37 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದ ವೇಲಾ 2010 ಜೂ.25ರಂದು ನಿವೃತ್ತಿಯಾಗಿತ್ತು. ದೇಶದ ಹಳೇ ಜಲಾಂತರ್ಗಾಮಿ ಎಂದು ವೇಲಾ ಗುರುತಿಸಿಕೊಂಡಿದೆ. ಪ್ರಸ್ತುತ ಹೊಸ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಯಂತ್ರಗಳು ಅಳವಡಿಕೆಯಾಗಿರುವ ನೂತನ ವೇಲಾ ದೇಶದ ರಕ್ಷಣೆಗೆ ಸಜ್ಜಾಗಿದೆ ಎಂದು ಎಂಡಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಡಿಎಲ್‌ನಲ್ಲಿ ಪ್ರಸ್ತುತ 8 ಯುದ್ಧ ನೌಕೆಗಳು ಹಾಗೂ 5 ಜಲಾಂತರ್ಗಾಮಿಗಳ ನಿರ್ಮಾಣವಾಗುತ್ತಿದೆ.

***

1992ರಲ್ಲಿ ಐಎನ್ಎಸ್‌ ಶಲ್ಕಿ ಜಲಾಂತರ್ಗಾಮಿ ನಿರ್ಮಾಣ ಮಾಡುವ ಮೂಲಕ ದೇಶದಲ್ಲೇ ಮೊದಲ ಹಡಗುಕಟ್ಟೆ ಎಂಬ ಖ್ಯಾತಿಗೆ ಎಂಡಿಎಲ್‌ ಭಾಜನವಾಗಿತ್ತು

–ಅಜಯ್‌ ಕುಮಾರ್ ಸಿಂಗ್‌, ರಕ್ಷಣಾ ಸಾಮಗ್ರಿ ಉತ್ಪಾದನಾ ವಿಭಾಗದ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು